Saturday, September 17, 2011

ನಾ ಕಂಡ ಬಾಲ್ಯ

ನಾನಾವಾಗ ಎರಡನೇ ಕ್ಲಾಸು. ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಪ್ರೈಮರಿ ಶಾಲೆ. ನನ್ನ ಅಮ್ಮ ಅಲ್ಲಿ ಹೆಡ್ ಮಾಸ್ಟರ್. ಅಪ್ಪ ಸಾಲ ಮಾಡಿ ಕೃಷಿ ಆಸ್ತಿ ಮಾಡಿದ್ದರು. ಮೇಲಾಗಿ, ನೀರಿಗಾಗಿ ಕಂಪ್ರೆಶ್ಸರ್ ಬೋರ್ ವೆಲ್ ಹೊಡೆಸಿ, ಕೈ ತೊಳೆಯಲೂ ನೀರು ಸಿಗದೆ ಕಂಗಾಲಾಗಿದ್ದರು. ನಮ್ಮ ಹತ್ತಿರದ ಸಂಬಧಿಕರೊಬ್ಬರಲ್ಲಿ ಐನೂರು ರೂಪಾಯಿ ಸಾಲ ಕೇಳ ಹೋಗಿದ್ದರು. ಅವರೋ ಶ್ರೀಮಂತರು. ಅಪ್ಪನ ಮುಖಕ್ಕೆ ಹೊಡೆವ ರೀತಿಯಲ್ಲಿ  " ನಿಮ್ಮಂತೋರಿಗೆಲ್ಲ ಹಣ ಕೊಡೋದಿಕ್ಕೆ ಆಗಲ್ಲ. ಏಕೆಂದರೆ ಕೊಟ್ಟರೆ ಹಿಂದೆ ಬರುತ್ತೆ ಎನ್ನೋ ನಂಬಿಕೆ ಇಲ್ಲ" - ಅಂದಿದ್ದರು. ಅಪ್ಪ ಮಾತು-ಕೈ ಎರಡನ್ನೂ ಖಾಲಿ ಮಾಡಿಕೊಂಡು ವಾಪಸಾಗಿದ್ದರು.

"ಹೌದು; ಕೃಷಿ ಎಂದರೆ ಅಷ್ಟೇ. ಬಂಡವಾಳ ಹಿಂದಕ್ಕೆ ಬರುತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲದ ಉದ್ಯೋಗಗಳಲ್ಲಿ ಮೊದಲ ಸ್ಥಾನ ಇದಕ್ಕೇ" -ಎಂದು ಅಂದಿದ್ದರು ಅಪ್ಪ ಅಂದು. ಅಮ್ಮನ ಸಂಬಳದ ಪೈಸೆ- ಪೈಸೆಯೂ ಕೃಷಿ ಭೂಮಿಯ ಮಣ್ಣನ್ನೇ ಮುಕ್ಕುತ್ತಿತ್ತು.

*****

ಅದೇ ಸಮಯದಲ್ಲಿ ನಮ್ಮ ಪ್ರೈಮರಿ ಶಾಲೆಯಲ್ಲಿ ವಾರ್ಷಿಕೋತ್ಸವವಿತ್ತು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಸಂಜೆ ಆರಕ್ಕೆ ಮಂತ್ರಿ ಮಹೋದಯರುಗಳ ಭರ್ಜರಿ ಭಾಷಣಗಳೊಂದಿಗೆ ಆರಂಭವಾಗುವುದು ಸಾಮಾನ್ಯ. ಆಮೇಲೆ ಡ್ಯಾನ್ಸು-ನಾಟಕ-ಯಕ್ಷಗಾನಗಳು ಬೆಳಗಿನವರೆಗೆ. ವಾರ್ಷಿಕೋತ್ಸವದಂದು ಶಾಲಾ ಅಂಗಣದಲ್ಲಿ ಕಡಲೆ- ಮಿಟಾಯಿ, ಪುಗ್ಗೆ, ಬ್ಯಾಟು, ಐಸ್ ಕ್ರೀಂ ಅಂಗಡಿಗಳು ಜಮಾಯಿಸುತ್ತಿದ್ದವು. ನನಗೂ, ನನ್ನ ಅಕ್ಕನಿಗೂ ಒಂದೊಂದು ಪುಗ್ಗ ತೆಗೆದುಕೊಳ್ಳುವ ಮನಸ್ಸಾಯಿತು. ಅಮ್ಮನ 'ಹೆಡ್ ಮಾಸ್ಟರ್' ಮೇಜಿನ ಬಳಿ ನಿಂತು ನಾನು ಮೆಲ್ಲನೆ, 'ಅಮ್ಮ, ಒಂದು ರೂಪಾಯಿ...' ಅಂದೆ. ಅಮ್ಮ ತನ್ನ ಪರ್ಸ್ ತೆಗೆದು ನೋಡುತ್ತಾರೆ, ಪರ್ಸ್ ಖಾಲಿಯಾಗಬಾರದೆಂದು ಇಟ್ಟಿದ್ದ ಎರಡು ರುಪಾಯಿ ಮಾತ್ರ ಇತ್ತು. ಒಂದೆರಡು ಕ್ಷಣ ಯೋಚಿಸಿ, ನಗು ತಂದುಕೊಂಡು ನನಗೂ, ನನ್ನ ಅಕ್ಕನ ಕೈಗೂ ಒಂದೊಂದು ರುಪಾಯಿ ಹಣ ಇತ್ತ ಕ್ಷಣ ಈಗಲೂ ನೆನಪಿದೆ. 

*****

ನನಗೆ ಹತ್ತು ವರುಷವಾಗುವ ಹೊತ್ತಿಗೆ ಅಪ್ಪ ಊರವರಿಂದ ಸಾಲ ಪಡೆಯುವುದನ್ನು ನಿಲ್ಲಿಸಿ ಬಿಟ್ಟಿದ್ದರು. ಕೃಷಿ ನಿಂತು ಹೋದರೂ ಚಿಂತೆಯಿಲ್ಲ; ನಿಂದನೆಯ ನುಡಿ ಬೇಡ ಎನ್ನುವುದು ನಮ್ಮ ಮನೆಯ ಅಂತಿಮ ನಿರ್ಧಾರವಾಗಿತ್ತು. ಅಡಿಕೆ ಗಿಡ ನೆಟ್ಟು ಏಳು ವರುಷವಾಗಿತ್ತು. ಅಂತೂ ಇಂತೂ, ನಾಲ್ಕನೇ ಬಾರಿ ತೆಗೆಸಿದ ಬೋರ್ ವೆಲ್ ನೀರು ತೋರಿಸಿತ್ತು. ಅಡಿಕೆ ಗಿಡಗಳು ಬದುಕಲಾರಂಭಿಸಿದ್ದವು. ಒಬ್ಬಿಬ್ಬರು ಕೂಲಿಯಾಳುಗಳು ವಾರದಲ್ಲಿ ಮೂರ್ನಾಲ್ಕು ದಿನಗಳಾದರೂ ಕೆಲಸಕ್ಕೆ ಬರುತ್ತಿದ್ದರು. 
ಇಂಥ ಸಮಯದಲ್ಲಿ ನಾನೇ ಕಿವಿಯಾರೆ ಕೇಳಿಸಿಕೊಂಡ ಕೆಲ ಮಾತುಗಳು, ಇವತ್ತಿಗೂ ನನ್ನಲ್ಲಿ ರೋಷವನ್ನುಂಟುಮಾಡುತ್ತವೆ.
 ನಮ್ಮ ದೇಶದ ಖ್ಯಾತ ವ್ಯಕ್ತಿಯೊಬ್ಬರ ಜನ್ಮ ದಿನೋತ್ಸವ. ಅಲ್ಲೊಬ್ಬ ವಿಚಾರವಾದಿ ಮಹಾಶಯ ಭರ್ಜರಿ ಭಾಷಣ ಮಾಡುತ್ತಿದ್ದ: ಹೇಳಿ ಕೇಳಿ ಬ್ರಾಹ್ಮಣ ವಿರೋಧಿ ಆತ. ಅವನದೇ ಮಾತಿನಲ್ಲಿ ಹೇಳುವುದಾದರೆ: "ಒಬ್ಬ ಬ್ರಾಹ್ಮಣ ಹಾಗೂ ಒಂದು ವಿಷ ಸರ್ಪ ನಿಮ್ಮ ಕಣ್ಣೆದುರು ಕಂಡರೆ ಮೊದಲು ನೀವು ಕೊಲ್ಲ ಬೇಕಾಗಿರುವುದು ಬ್ರಾಹ್ಮಣನನ್ನ. ಯಾಕೆಂದರೆ ಸರ್ಪದ ನಾಲಿಗೆಯಲ್ಲಿ ಮಾತ್ರ ವಿಷವಿರುತ್ತದೆ. ಆದರೆ ಬ್ರಾಹ್ಮಣನ ರೋಮ ರೋಮದಲ್ಲೂ ವಿಷವಿರುತ್ತದೆ."

ಯಾವುದೋ ಒಂದು ಕಾಲದಲ್ಲಿ ಯಾರೋ ಮಾಡಿದ್ದ 'so called' ತಪ್ಪನ್ನು ನನ್ನ ಸಮುದಾಯದ್ದೇ ದೋಷವೆಂದು ಈ ರೀತಿ ಸಾರಿದ್ದು ಖಂಡಿತಾ ಸರಿಯಲ್ಲ ಅನ್ನಿಸಿತ್ತು. 
*****

ನಾನು ಏಳನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಯನ್ನು ಇನ್ನೇನು ಬರೆಯುವ ಸಮಯ. 'ಮುಂದ್ಯಾವ ಸ್ಕೂಲು?' ಎಂದು ಮನದಲ್ಲೇ ಲೆಕ್ಕ ಹಾಕುತ್ತಿದ್ದೆ. ನನ್ನ ಅಕ್ಕ ನಮ್ಮೂರಿನದೇ ಹೈಸ್ಕೂಲಿನಲ್ಲಿ ಓದುತ್ತಿದ್ದಳು. ಅಲ್ಲಿನ ಪಾಠ, ನಡವಳಿಕೆಗಳು ಅಕ್ಕನಿಗೂ, ನನ್ನ ಪೋಷಕರಿಗೂ ಹಿಡಿಸುತ್ತಿರಲಿಲ್ಲ. ನಾನಾಗಲೇ 'ಇಂಗ್ಲೀಷು ಮೀಡಿಯಂ ಬೇಕು' ಎಂದು ರಂಪಾಟ ಮಾಡುತಿದ್ದೆ. ಇಂಗ್ಲೀಷು ಮೀಡಿಯಂ ಹೈಸ್ಕೂಲಿಗೆ ಕಳುಹಿಸುವ ಆರ್ಥಿಕ ತಾಕತ್ತು ಅಪ್ಪನಿಗೆ ಇಲ್ಲ ಎಂದು ಒಳ ಮನಸು ಹೇಳುತ್ತಿದ್ದರೂ 'ಇನ್ನೊಂದು ಪ್ರಯತ್ನವ ಮಾಡೋಣ' ಅನ್ನಿಸುತಿತ್ತು. ಓರಗೆಯ ಸ್ತಿತಿವಂತರ ಮಕ್ಕಳೆಲ್ಲಾ ಸ್ಕೂಲ್ ಜೀಪ್ ಹತ್ತಿ ಪ್ರೈವೇಟ್ ಸ್ಕೂಲಿಗೆ ಹೋಗುವುದನ್ನು ನೋಡುತ್ತಿದ್ದಾಗ, ನನಗಂತೂ ಸರಕಾರಿ ಶಾಲೆಯ ಕನ್ನಡ ಪಾಠ ಬಿಟ್ಟು ಇಂಗ್ಲೀಷು ಕಲಿಯೋಣವೆನ್ನಿಸಿ, ಅಪ್ಪನ ಬಗ್ಗೆ ಇನ್ನಿಲ್ಲದ ಕೋಪ ಬರುತ್ತಿತ್ತು. 
ಕಾಕತಾಳೀಯವೆಂಬಂತೆ, ಅದೇ ಸಮಯಕ್ಕೆ ಅಮ್ಮನಿಗೆ ಹೈಸ್ಕೂಲಿಗೆ ಪ್ರೊಮೋಷನ್ ಆರ್ಡರ್ ಬಂತು. ಅದೆಷ್ಟೋ ವರುಷಗಳಿಂದ ಕಾದಿದ್ದ ಅಮ್ಮ ತಕ್ಷಣವೇ, ಹದಿಮೂರು ಕಿಲೋಮೀಟರ್ ದೂರದ 'ಉಪ್ಪಿನಂಗಡಿ'ಯ ಸರಕಾರಿ ಕಾಲೇಜನ್ನು ಆಯ್ಕೆ ಮಾಡಿಕೊಂಡರು.
ಏಳನೇ ತರಗತಿಯ ಪರೀಕ್ಷೆಯಲ್ಲಿ ತೊಂಭತ್ತಾರು ಶೇಕಡಾ ಅಂಕ ಪಡೆದ ನಾನು, ನನ್ನನ್ನೂ ಅಮ್ಮನ ಕಾಲೇಜಿಗೆ ಸೇರಿಸುವಂತೆ ಅಪ್ಪನೆದುರು ಧರಣಿ ಹೂಡಿದ್ದೆ. ಎಲ್ಲಾ ಅರ್ಹತೆಗಳೊಂದಿಗೆ! ಅಪ್ಪನು ಕಡೆಗೂ ಒಪ್ಪಿಕೊಳ್ಳಲೇಬೇಕಾಯಿತು.

ಅಮ್ಮನ ಜೊತೆಗೇ ಹತ್ತು ತರಗತಿಗಳನ್ನು ಕಳೆಯುವವನಿದ್ದೇನೆ ಎಂಬ ಸಂತೋಷ ಒಂದೆಡೆಗಿದ್ದರೆ, ಸ್ಪರ್ಧೆಗೆ 'ಪೇಟೆ'ಯ ಮಕ್ಕಳಿದ್ದಾರೆ, ಬುದ್ಧಿವಂತ ಹುಡುಗರ ಪರಿಚಯವೂ ಆಗುತ್ತದೆ ಎಂಬ ಜಂಭ ನನಗೆ!
ನಮ್ಮ ಹಳ್ಳಿಯಿಂದ ಉಪ್ಪಿನಂಗಡಿಗೆ ದಿನವೂ ಪ್ರೈವೇಟ್ ಸ್ಕೂಲಿಗೆ ಮಕ್ಕಳನ್ನು ಕಳುಹಿಸಿ, ಹಿಂದಕ್ಕೆ ಕರೆತರುವ ಪರಿಚಯದವರ ಜೀಪಿನಲ್ಲಿ ನಾನೂ, ಅಮ್ಮನೂ ಖಾಯಂ ಸೀಟು ಗಿಟ್ಟಿಸಿದ್ದೆವು. ತಿಂಗಳಿಗೆ ಮುನ್ನೂರು ರೂಪಾಯಿ ಇದಕ್ಕಾಗಿ ಕೊಡಬೇಕಾಗಿತ್ತು. ಹಣ ಕೇಳಿದಾಗಲೆಲ್ಲ ಅಪ್ಪ, ನಮ್ಮೂರ ಹೈಸ್ಕೂಲಿಗೇ ಸೇರಿಸಬೇಕಾಗಿತ್ತೆಂದು ಹಳಿಯುತ್ತಿದ್ದರು!

*****

ನನ್ನ ಅಪ್ಪ- ಅಮ್ಮನ ಮದುವೆಯ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ 'ಬ್ರಹ್ಮ ಗಂಟು' ಎಂಬುದರ ಶಕ್ತಿಯ ಬಗ್ಗೆ ವಿಪರೀತ ನಂಬಿಕೆ ಬರುತ್ತದೆ. ಅಪ್ಪನೋ, 'ಕೋಪದವನು' ಎಂಬ ಹಣೆಪಟ್ಟಿ ಕಟ್ಟಿಕೊಂಡು 'ಮದುವೇನೇ ಆಗಲ್ಲ' ಅಂತ ಹಠ ಕಟ್ಟಿ ಸ್ವಲ್ಪ ತಡವಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದವರು. ಕೃಷಿ ಹಾಗೂ ಹಿಂದಿ ಸಾಹಿತ್ಯಗಳಲ್ಲಿ ವಿಪರೀತ ಆಸಕ್ತಿ ಹೊಂದಿದ್ದವರು. ಒಂದೆರಡು ನಾಟಕಗಳನ್ನು ಬರೆದು ಆಡಿಸಿದವರು. ಧರ್ಮಸ್ಥಳದಲ್ಲಿ ಗೋಮಟೇಶನ ಪ್ರತಿಷ್ಠೆಯಾಗುವ ಸಮಯದಲ್ಲಿ 'ಗೋಮಟೇಶ್ವರ ಶತಕ' ಎಂಬ ಕೃತಿಯನ್ನು ಹಿಂದಿಗೆ ಅನುವಾದಿಸಿ ಧರ್ಮಾಧಿಕಾರಿಗಳ ಕೈಯಲ್ಲಿ ಶಹಬ್ಬಾಸ್ ಎನಿಸಿಕೊಂಡವರು. ಕುಟುಂಬದ ಇತರರ ಪ್ರಕಾರ ಅವರೊಬ್ಬ 'ಕೃಷಿಗಾಗಿ ನಷ್ಟ ಮಾಡಿಕೊಳ್ಳುವ' ವ್ಯಕ್ತಿ. ಅಮ್ಮನೋ, ಹಿಂದಿ ಟೀಚರು. ನಾಲ್ಕು ಜನರ ಮಧ್ಯೆ ಬೆರೆಯುವ ವ್ಯಕ್ತಿ. ಕೃಷಿ ವಿಷಯದಲ್ಲೂ ಪರಿಶ್ರಮಿ. ಆದರೆ ಲೆಕ್ಕಾಚಾರದವರು. 
ಅಪ್ಪ ಮದುವೆಯ ಸಮಯದಲ್ಲಿ ಜಾತಕ ನೋಡಿರಲಿಲ್ಲವಂತೆ. ನೋಡಿದ್ದರೆ ಅಮ್ಮನ ಜಾತಕ ಚೂರೂ ಹೊಂದಿಕೆಯಾಗುತ್ತಿರಲಿಲ್ಲವಂತೆ! 

ಅಪ್ಪನ ಪ್ರಕಾರ, ಯಾವುದೇ ವೃತ್ತಿಯೂ ವಂಶ ಪಾರಂಪರಿಕವಾಗಿದ್ದರೆ ಚೆನ್ನ. ಕೃಷಿಗಂತೂ ಅದು ಬೇಕೇ ಬೇಕು. 'ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿಕೊಂಡು ಅಣ್ಣ ತಮ್ಮಂದಿರ ಜೊತೆ ವಾದ ಮಾಡಿ ಖರೀದಿಸಿದ ಡಜನ್ ಗಟ್ಟಲೆ ಹಾರೆ ಪಿಕ್ಕಾಸುಗಳು, ದೊಡ್ಡದಾಗಿ ಕಟ್ಟಿಸಿದ ದನದ ಕೊಟ್ಟಿಗೆಗಳು, ದಿನವೂ ನೀರೆರೆದು ಪೋಷಿಸಿದ ಗಿಡಗಳನ್ನು ನೋಡಿಕೊಳ್ಳುವವರಾರೂ ಇಲ್ಲದಿದ್ದರೆ ಹೇಗೆ? ' ಎನ್ನುವುದು ಅವರ ವಾದ. ಅಮ್ಮನೋ, ಇದಕ್ಕೆ ಪಕ್ಕಾ ವಿರೋಧಿ. ಅವರವರ ಆಸಕ್ತಿಯ ವಿಷಯಗಳಲ್ಲಿ ಮುಂದುವರಿಯೋದೇ ಚೆನ್ನ ಎನ್ನೋದು ಅವರ ವಾದ.
ಒಂದಂತೂ ಸತ್ಯ. ನಾನು ಅಥವಾ ನನ್ನ ಅಕ್ಕ ಭಾಷಣ, ಪ್ರಬಂಧ, ಚರ್ಚೆಗಳಲ್ಲಿ ಚಪ್ಪಾಳೆ, ಬಹುಮಾನಗಳನ್ನು ಗಿಟ್ಟಿಸಿದಾಗ 'ನಮ್ಮ ಮಕ್ಕಳು' ಎಂದು ಸಂತಸ ಪಡುತ್ತಿದ್ದರು. ಹಿಂದಿ ಭಾಷೆಯ ವಿಷಯ ಬಿಟ್ಟರೆ ಅತ್ಯಂತ ಹೆಚ್ಚು ಸಾಮ್ಯತೆ ಹೊಂದಿದ್ದ ವಿಚಾರವೆಂದರೆ ಇದೇ ಅನ್ನೋದಂತೂ ಸತ್ಯ!

*****

ಮಗ ಮನೆ ಬಿಟ್ಟು ಹೊರಗೆ ಹೋದರೆ ಕೃಷಿಯ ಗತಿಯೇನು? ಎಂದು ಅಪ್ಪ ಅದೆಷ್ಟೋ ಬಾರಿ ಚಿಂತಿಸಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಅಪ್ಪ ಸಾಲ ಮಾಡಿ, ಖಾಲಿ ಜಾಗ ಖರೀದಿಸಿ ಕೃಷಿ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದಾಗ ಬಿದ್ದು-ಬಿದ್ದು ನಕ್ಕವರೇ ಹೆಚ್ಚು. 'ನಾವ್ಯಾಕೆ ಸಹಾಯ ಮಾಡಬೇಕು?' - ಎಂದು ನಾಸ್ತಿ ಎಂದವರೇ ಹೆಚ್ಚು. ಬಟ್ಟ ಬಯಲು ಭೂಮಿಗೆ "ಫುಟ್ಬಾಲ್ ಗ್ರೌಂಡು" ಎಂದು ತಮಾಷೆ ಮಾಡಿದವರು ಹಲವರು. ನಮ್ಮ ಮನೆಗೆ, ತೋಟಕ್ಕೆ ವಿದ್ಯ್ತುತ್ ಸರಬರಾಜು ಶುರುವಾಗಿದ್ದು ನಾನು ಐದನೇ ಕ್ಲಾಸಿನಲ್ಲಿರುವಾಗದಿಂದ. 'ಇವನ್ಯಾವಾಗ ಬೋರ್ ವೆಲ್ ಒಳಗೆ ಪಂಪ್ ಇಳಿಸುತ್ತಾನೆ?' ಎಂದು ಬಾಗಿಲು ಸಂದಿನಿಂದ, ಕುಚೋದ್ಯದಿಂದ ನೋಡಿದವರೇ ಹಲವರು.

*****

ಈಗ ಒಂದು ವರುಷದ ಹಿಂದೆ, ನಾನು ನನ್ನ ಮೊದಲ ಸಂಬಳವನ್ನು ತೆಗೆದುಕೊಂಡು ಅಪ್ಪನ ಕೈಗೆ ಇರಿಸಿದೆ. "ಕೃಷಿ ಕ್ಷೇತ್ರದಲ್ಲಿ ತಪ್ಪಿಯೂ ಬಂಡವಾಳ ಹೂಡಬೇಡ ಮಗನೇ" - ಎಂದರು ನಮ್ಮಪ್ಪ! ಎಂಭತ್ತು-ತೊಂಭತ್ತರ ದಶಕದಲ್ಲಿ 'ಅತ್ಯುತ್ತಮ ಕೃಷಿಕ'ನೆನಿಸಿಕೊಂಡು, ನಂತರ ಆ ಜಾಗ ಮಾರಿ ಹೊಸ ಭೂಮಿಯಲ್ಲಿ ಭವಿಷ್ಯ ಹುಡುಕಲಾರಂಭಿಸಿದವರವರು!ಜಾಗತೀಕರಣ, ಇದರಿಂದಾಗಿರುವ ಸಾಮಾಜಿಕ ಸ್ಥಾನ ಪಲ್ಲಟ, ಕೃಷಿಯ ಬಗೆಗಿನ ಒಟ್ಟು ತಾತ್ಸಾರದ ಬಗ್ಗೆ ವಿಚಾರಾತ್ಮಕ ಚರ್ಚೆ ನಡೆದು, ಯಾವುದೇ ಅಂತಿಮ ನಿರ್ಧಾರವಿಲ್ಲದ ಸಂಸತ್ ಅಧಿವೇಶನದಂತೆ, ನಾವು ಚರ್ಚಾಕೂಟವನ್ನು ಕೊನೆಗೊಳಿಸಿದೆವು.

"ನೋಡೇ, ವಾರ್ಷಿಕೋತ್ಸವದಂದು ಒಂದು ರುಪಾಯಿಗಾಗಿ ಭಯಪಟ್ಟು ಅರ್ಜಿ ಸಲ್ಲಿಸಿದ್ದ ನಿನ್ನ ಮಗ ಇದೀಗ ಸಂಬಳ ನಮಗೇ ಕೊಡುತ್ತಿದ್ದಾನಲ್ಲಾ?" - ಎಂದರು ಅಪ್ಪ. ಅಮ್ಮ ಮತ್ತು ಅಕ್ಕ ನಾನು ಅವರಿಗಾಗಿ ತಂದಿದ್ದ 'ಮೊದಲ ಸಂಬಳದ ಸೀರೆ'ಯ ಸಂತಸದಲ್ಲಿದ್ದರು.
ದನದ ಕೊಟ್ಟಿಗೆಯೊಳಗಿಂದ ಗಂಗೆ 'ನನಗೇನೂ ತಂದಿಲ್ವಾ?' ಎನ್ನುವ ರೀತಿಯಲ್ಲಿ "ಅಂಬಾ..." ಎಂದು ಕೂಗಿದಳು!

*****

Saturday, January 1, 2011

ಮೊಬೈಲು ಕಳ್ಳತನ!

ಎಲ್ಲಾ ಕಡೆ ಮೊಬೈಲು ಕಳ್ಳತನದ್ದೆ ಸುದ್ದಿ ಕೇಳಿ ಬರುತ್ತಿತ್ತು...
ಸರಣಿಗಳ್ಳತನ, ಜೋಬು ಕಳ್ಳತನ, ಇತ್ಯಾದಿ ಇತ್ಯಾದಿ...

ನಾನಂತೂ ತುಂಬಾ ಜಾಗರೂಕನಾಗಿದ್ದೆ ಇದರ ಬಗ್ಗೆ.
'ಜೀವ ಹೋದರೂ ಪರವಾಗಿಲ್ಲ, ಮೊಬೈಲು ಕಳಕೊಳ್ಳಬಾರದು'-
-ಎಂದು ಸದಾ ಜಾಗರೂಕನಾಗಿರುತ್ತಿದ್ದೆ; especially, ಪ್ರಯಾಣದ ಸಂದರ್ಭಗಳಲ್ಲಿ.
ಸದಾ ಜಾಗರೂಕ!!!
-----

ಬೆಂಗಳೂರಿಗೆ ಬಂದು ಆಗಷ್ಟೆ ಎರಡು ವಾರ...
ಬೆಳಗ್ಗೆ ಆಫೀಸು; 'ರಾತ್ರಿ' ಮನೆ.
ಹೋಗೋದು-ಬರೋದು ಬೈಕಿನಲ್ಲೇ...
So, ಮೊಬೈಲು ಸೇಫು ಅಂತ ನಿರಾಳವಾಗಿ ಬದುಕಲಾರಂಭಿಸಿದ್ದೆ. ಅಷ್ಟೇ...

ಅವತ್ತೊಂದು ರಾತ್ರಿ...
ರಾತ್ರಿ ಹತ್ತಾದರೂ roommate 'ರಿತೇಶ'ನ ಪತ್ತೇನೇ ಇಲ್ಲ!
ಛೆ! ಕಾಲ್ ಮಾಡೋಣ ಅಂದ್ಕೊಂಡ್ವಿ ನಾವೆಲ್ಲಾ...
ಉಹುಂ! ರಿಂಗಾಗ್ತಾನೆ ಇಲ್ಲ!

Finally, ಹತ್ತೂವರೆಗೆ ಬಂದ ರಿತೇಶ...
'ಸೆಲ್ ಹೋಯ್ತು ಕಣ್ರೋ ಅಂದ...'
Oh my god! ಹೊಚ್ಚ ಹೊಸ ನೋಕಿಯಾ 'N' ಸೀರೀಸು,
ಅದರಲೆಷ್ಟೋ 'contact' ಗಳು!  ಅದೆಷ್ಟೋ ನೆನಪುಗಳು...


ಎಲ್ಲಾ ಹೋಯ್ತಲ್ಲಾ ನಿಮಿಷಾರ್ಧದಲ್ಲಿ ಅಂತ ಅಂದ್ಕೊಂಡೆ...

- ಅವತ್ತಿನಿಂದ ನನ್ನ ಮೊಬೈಲನ್ನ ತೀವ್ರ ನಿಗಾ ಘಟಕದಲ್ಲಿ ಇಟ್ಟಿರ್ತೀನಿ!
ನನ್ನ ಗ್ರಹಚಾರ ಕೆಟ್ಟರೂ ಮೊಬೈಲು ಪರರ ಸ್ವತ್ತಾಗಬಾರದು ಎಂಬ ಏಕ ಮಾತ್ರ ಉದ್ದೇಶದಿಂದ!
ಸದಾ ಜಾಗರೂಕ!!
-----


ಮೊನ್ನೆ ಮೊನ್ನೆ ಅಮ್ಮ ಬಂದಿದ್ದರು ಬೆಂಗಳೂರಿಗೆ... !
ಆಫೀಸಿಗೆ ರಜಾ ಹಾಕಿ ಸುತ್ತಿದ್ದೆ ಸುತ್ತಿದ್ದು-
ಸೌತ್ ಎಂಡ್ ಸರ್ಕಲ್ ನಿಂದ ನಾರ್ತ್ ಎಂಡ್ ಯೆಲಹಂಕವರೆಗೆ!
ನಡು-ನಡುವೆ ಆ ಮಾಲ್, ಈ ಮಾಲ್; ವಿಧಾನ ಸೌಧ ವಿಕಾಸ ಸೌಧ!
ಅವರಿವರ ಮನೆ, ಕಬ್ಬನ್ ಪಾರ್ಕು, ಹೈಕೋರ್ಟು ಮೆಟ್ಟಿಲೂ ಏರಿದ್ದಾಯಿತು!
ಪರಂತು, ಮೊಬೈಲು ಬಗ್ಗೆ ಮಾತ್ರ ನಾನು ಸದಾ ಜಾಗರೂಕ!

ಸುತ್ತಿದ್ದಾಯಿತು....
ಅಮ್ಮನನ್ನು ಬಿಟ್ಟು ಬರಬೇಕು ಇನ್ನು...
ಲಗೇಜು ತುಂಬಾ ಇದೆ...ಚಳಿಯೂ ತುಂಬಾ.
 ಬೈಕು ಬೇಡ ಬಸ್ಸಲೇ ಹೋಗೋಣ ಎಂದರು ಅಮ್ಮ
ಸರಿ, ಹೊರಟಾಯಿತು, ಮೆಜೆಸ್ಟಿಕ್ಕು ಬಸ್ಸು ಹತ್ತಿದ್ದೂ ಆಯಿತು.
ರಶ್ಶು ಏನೂ ಇರಲಿಲ್ಲ ಬಸ್ಸಲ್ಲಿ.


ಅಮ್ಮ ಪಕ್ಕದಲ್ಲಿ ಕೂತಿದ್ದರು, ಏನೋ ಆಲೋಚನೆಯಲ್ಲಿ ಮುಳುಗಿದ್ದರು.
ಹೇಗೂ ಸಮಯವಿದೆ, ಮೆಸೇಜು ಮಾಡಾಣ ಎಲ್ಲರಿಗೂ ಅಂತ ಅಂದುಕೊಂಡೆ.
ಮೊಬೈಲು ತೆಗೆದೆ ಜೋಬಿಂದ...
ಹಾಂ! ಹೇಳಲೇ ಇಲ್ಲ ನಿಮಗೆ...
ನನ್ನ ಪ್ಯಾಂಟಿನ ಬಲ ಜೋಬು ಯಾವತ್ತೂ ಮೊಬೈಲಿಗೆ ಮೀಸಲು. ಯಾವತ್ತೂ...

ಸಿಗ್ನಲ್ಲು ಗಳು ಕಳಿಯುತ್ತಿದ್ದಂತೆ, ಹಂಪುಗಳು, ಕನ್ಸ್ತ್ರಕ್ಷನ್ನುಗಳು ಮುಗಿಯುತ್ತಿದ್ದಂತೆ, 
ಬಂತು ಮೆಜೆಸ್ಟಿಕ್ಕು.
ಪ್ಲಾಟ್ಫಾರ್ಮ್ ನಂಬರ್ ಹತ್ತೊಂಬತ್ತು. ಬಿ ಎಂ ಟಿ ಸಿ ಬಸ್ಸು ಬಂದು ನಿಂತಿತು.

ಹೌದು, ಬಸ್ಸಿನಿಂದ ಇಳಿದವರಲ್ಲಿ ನಾವೇ ಕೊನೆಯವರು.
ಮೊದಲು ಅಮ್ಮ, ಅನಂತರ ನಾನು.
ಇನ್ನೇನು ನಾನು ಇಳೀ ಬೇಕು, ಬಸ್ಸು ಮತ್ತೆ ಹೊರಟಿದೆ,
ಸಿಕಾಪಟ್ಟೆ ಜನರು ಒಳಗೆ ಹತ್ತುತ್ತಿದ್ದಾರೆ...
ಬಹುಶಃ, ಯೆಲಹಂಕ ಕಡೆಗೆ ಇದೇ ಕೊನೆಯ ಬಸ್ಸೋ ಏನೋ...

ಜಾಗ್ರತೆಯಿಂದ, ಜಾಗ ಮಾಡಿಕೊಂಡು, ಇಳಿದೆ.


ಇಳಿದು ನೋಡುತ್ತೇನೆ...
ಮೊಬೈಲು ಮಾಯ!!!

ಭಗವಂತಾ!....ಹೊಹ್ ನನ್ನರ್ಧ ಜೀವವೆ ಹೋದಂತನಿಸಿತು...

'ಸಾರ್, ಬೇಗ ಮಿಸ್ ಕಾಲ್ ಕೊಡಿ; ಇಲ್ಲಾ ಅಂದ್ರೆ ಸ್ವಿಚ್ಚ್ ಆಫ್ ಮಾಡ್ಬಿಡ್ತಾರೆ ಜನ' - ಡ್ರೈವರ್ ಉವಾಚ...
ಒಹ್ ಹೌದು; ಅಮ್ಮನ ಕೈಯ್ಯಿಂದ ಮೊಬೈಲು ಇಸ್ಕೊಂಡೆ...
ಸ್ಪೀಡ್ ಡಯಲ್ ನಂಬರ್ ಐದು... ಒತ್ತೆ ಬಿಟ್ಟೆ...
'ಸ್ವಿಚ್ಚ್ ಆಫ್ ಆಗಿದ್ರೆ ಪ್ರತಿಯೊಬ್ಬರನ್ನೂ ಚೆಕ್ ಮಾಡಲೇ ಬೇಕು...!
-ಹೇಳಿತು ನನ್ನ ಮನಸ್ಸು, ಯಾಕಂದ್ರೆ, ಅದು- ನನ್ನ ಮೊಬೈಲು!!!



ಒಂದು ನಿಮಿಷ....
ಕಾಲ್ ಕನೆಕ್ಟ್ ಆಗುತ್ತಿದೆ! ಎದೆ ದವ-ದವ ಹೊಡೆದುಕೊಳ್ಳುತ್ತಿದೆ!
ಉಸಿರು ಎಳೆದು ಕೊಳ್ಳುತ್ತಿದ್ದೇನೆ ಭರ-ಭರನೇ...ಭರ-ಭರನೇ!!!

-----

ಎಲಾ!!! ಜರ್ಕಿನ್ನಿನ್ನ ಜೇಬಿನಲ್ಲೂ ಭರ-ಭರನೇ ಸದ್ದು...
ಪುಣ್ಯಕ್ಕೆ, ಬರೀ ವೈಬ್ರೇಷನ್ನು, ಮೊಬೈಲು ಸೈಲೆಂಟು!
ಯಾವುದೋ ಯೋಚನೆಯಲ್ಲಿ 'ಮೀಸಲಾಗಿದ್ದ' ಪ್ಯಾಂಟನ್ನು ಬಿಟ್ಟು,
ಜರ್ಕಿನ್ನಿನ ಜೋಬಿನಲ್ಲಿ ತೋರಿಸಿದ್ದೆ ಮೊಬೈಲನ್ನು.
ಠಕ್ಕ್ ಅಂತ ಮೊಬೈಲಿನ ಕೆಂಪು ಬಟನ್ ಒತ್ತಿದೆ...!
-----

'ಏನಾಗ್ತ ಇದೆ ಗುರೂ...?' ಅರ್ಜೆಂಟಿನ ಡ್ರೈವರ್ ಎಸೆದ ಪ್ರಶ್ನೆ.
ಏನು ಹೇಳಲಿ? ಜನ ಎಲ್ಲಾ ನನ್ನನ್ನೇ ಕೆಕ್ಕರಿಸಿ ನೋಡುತಿದ್ದಾರೆ...
ನನ್ನ ಜೋಬಲ್ಲೆ ವೈಬ್ರೇಟಿಂಗು ಅಂದರೆ ಒದೆ ಗ್ಯಾರಂಟಿ!
ಏನು ಹೇಳಲಿ? ಜನ ಎಲ್ಲಾ ನನ್ನನ್ನೇ ಕೆಕ್ಕರಿಸಿ ನೋಡುತಿದ್ದಾರೆ...!

"ಸಾರ್ ಸ್ವಿಚ್ಚ್ ಆಫ್ ಆಗೋಯ್ತು; ಹುಡುಕಿ ಏನೂ ಪ್ರಯೋಜನವಿಲ್ಲ ಇನ್ನು.
ಲೋಕ ಕೆಟ್ಟೋಗಿದೆ ಸಾರ್, ಒಳ್ಳೆಯೋರ್ಗೆ ಇದು ಕಾಲವಲ್ಲ,
ಯಾರನ್ನೂ ನಂಬೋ ಹಂಗಿಲ್ಲ."
ಕೆಟ್ಟು ಹೋದ ಕಾಲದ ಬಗ್ಗೆ ಬಿಟ್ಟಿ ಭಾಷಣ ಬಿಗಿದು ಬಂದೆ...!
ಬಸ್ಸು ಭರ್ರೆಂದು ಹೊರಟಿತು; ಜನ ಎಲ್ಲಾ ಕನಿಕರದ ದೃಷ್ಟಿ ಬೀರುತ್ತಿದ್ದರು...
-----

ಅಮ್ಮನಿಗೆ ನಾಟಕವನ್ನ ಅರ್ಥ ಮಾಡ್ಸೋದ್ರಲ್ಲಿ ಸಾಕೋ ಸಾಕಾಯ್ತು!!!
ಇವತ್ತಿಗೂ, ನನ್ನ ಪ್ಯಾಂಟಿನ ಬಲ ಜೋಬು ಯಾವತ್ತೂ ಮೊಬೈಲಿಗೆ ಮೀಸಲು. ಯಾವತ್ತೂ...
ಜೆರ್ಕಿನ್ ಹಾಕ್ಕೊಂಡಾಗಲೂ!!!











ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...