ಇಸವಿ ಸಾವಿರದ ಒಂಭೈನೂರ ಇಪ್ಪತ್ತೇಳು ಇರಬೇಕು. ಪುತ್ತೂರಿನಿಂದ ಐದಾರು ಮೈಲಿ ದೂರದ ಮೇರಳ ಎಂಬ ಪುಟ್ಟ ಹಳ್ಳಿಯಲ್ಲಿ ನಾರಾಯಣ ಭಟ್ಟರ ವಾಸ. ಭಟ್ಟರು ವರುಷಕ್ಕೆ ಹನ್ನೆರಡು ಸಾವಿರ ಆದಾಯ ಹೊಂದಿದ್ದವರು. ಆಗಿನ ಕಾಲದ ಶ್ರೀಮಂತ ಕೃಷಿಕರಲ್ಲಿ ಒಬ್ಬರಾಗಿದ್ದರು. ಅವರು ಸ್ವತಃ ಬೆವರಿಳಿಸಿ ದುಡಿದು ಬಾಳುವ ಪರಿಶ್ರಮಿ.
ನಿನ್ನೆ ರಾತ್ರಿ ತಾನೇ ಗೋಕುಲಾಷ್ಟಮಿಯಾಗಿದ್ದು, ಕೃಷ್ಣನಿಗೆ ಅರ್ಘ್ಯ ಕೊಟ್ಟು ಮಲಗುವಷ್ಟರಲ್ಲಿ ತಡವಾಗಿರಬೇಕು. ಅವರ ದೊಡ್ಡ ಮಗ ವಾಸುದೇವ ಬಿಟ್ಟರೆ ಉಳಿದವರು ಯಾರೂ ಇನ್ನೂ ಎದ್ದಿರಲ್ಲಿಲ್ಲ. ಆ ನವಮಿಯ ದಿವಸದ ನಿತ್ಯ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲೇ ಮುಗಿಸಿದ್ದರು ನಾರಾಯಣರು. ವಾಸುದೇವನ ದೈನಂದಿನ ಕೆಲಸವೆಂದರೆ ಬೆಳಗಿನ ಜಪ ಮುಗಿಸಿ, ಗಂಧ-ಚಂದನ ತೇದು ಕೊಡುವುದು. ಆಮೇಲೆ ಅಪ್ಪ ಪೂಜೆ ಮುಗಿಸುವವರೆಗೆ, ನಿನ್ನೆ ಕಲಿತಿದ್ದ ವೇದ ಮಂತ್ರಗಳನ್ನು ಮೆಲುಕು ಹಾಕುವುದು. ನಂತರ ಬೆಳಗಿನ ಉಪಹಾರ ಮುಗಿಸಿ ತೋಟದ ಕಡೆಗೆ ಒಂದು ಬಾರಿ ಹೋಗಿ ಬರುವುದು.
ಅಂದು ತೋಟದ ಕಡೆಗೆ ಹೋಗಿದ್ದ ವಾಸುದೇವ ಸ್ವಲ್ಪ ಬೇಗನೇ ತಿರುಗಿ ಬಂದ. ನಾರಾಯಣ ಭಟ್ಟರು ಆಗಲೇ ಮನೆಯ ಅಂಗಳದಲ್ಲಿ ತಟ್ಟಿ ಮಡೆಯುತ್ತಿದ್ದರು. ವಾಸುದೇವ ಮನೆಗೆ ತಿರುಗಿ ಬಂದವನೇ ಅಮ್ಮನ ಬಳಿ ಏನೋ ತವಕವನ್ನು ತೋಡಿಕೊಳ್ಳಲು ಸಮಯ ನೋಡುತ್ತಿದ್ದ. ಅಪ್ಪನ ಬಳಿ ನೇರವಾಗಿ ಹೇಳಿದರೆ ಈ ಕೆಲಸ ಸುಲಭವಾಗಿ ನೆರವೇರುವುದಿಲ್ಲ ಅನ್ನುವುದು ಅವನಿಗೆ ಗೊತ್ತಿತ್ತು. 'ಅಮ್ಮ... ' ಎನ್ನುತ್ತಾ ಹಟ್ಟಿಯಲ್ಲಿ ಹಾಲು ಹಿಂಡುತಿದ್ದ ಅಮ್ಮನ ಹತ್ತಿರ ತುದಿಗಾಲಲ್ಲಿ ನಡೆಯುತ್ತಿರುವುದು ನಾರಾಯಣ ಭಟ್ಟರಿಗೆ ಕಂಡಿತು.
"ಇಗೋ ವಾಸುದೇವ, ಬೆಳಗಿನ ಜಾವ ಹೇಳುತಿದ್ದ ಪುರುಷ ಸೂಕ್ತವನ್ನು ಮತ್ತೊಮ್ಮೆ ಹೇಳು ನೋಡೋಣ" ಎಂದರು ಭಟ್ಟರು. "ಸಹಸ್ರ ಶೀರ್ಷಃ ಪುರೂಷಃ ... " ಎಂದು ವಾಸುದೇವ ಶುರುಮಾಡುತ್ತಿದ್ದಾನಷ್ಟೇ; ತಟ್ಟಿಹೆಣೆಯುತ್ತಿದ್ದ ಭಟ್ಟರು ಕಚ್ಚೆ ಕಟ್ಟಿಕೊಂಡು ಎದ್ದು ರಪರಪನೆ ಬಂದು, "ಧರ್ ಧರ್" ಎಂದು ವಾಸುದೇವನ ಬೆನ್ನಿಗೆ ಬಾರೆ ಎಳೆದರು. "ಸ್ವರಿತ - ಅನುತತ್ತ್ವಗಳನ್ನು ಕ್ರಮಬದ್ಧವಾಗಿ ಉಚ್ಚರಿಸರಬೇಕು, ಸಹಸ್ರ ಅಲ್ಲ ಅದು ಸಹಸ್ರಾ ಅಂತ ನಿನಗೆ ಸಾವಿರ ಸಾರಿ ಹೇಳಿದರೂ ನಿಂಗೆ ಅರ್ಥ ಆಗುವುದಿಲ್ಲ. ಇನ್ನು ಪೆಟ್ಟೇ ಗತಿ ನಿಂಗೆ" ಅಂದರು.
ಪಾಪ ವಾಸುದೇವ! ಅಮ್ಮನ ಬಳಿ ಹೇಳಬೇಕಿದ್ದ ವಿಷಯ ಈಗ ಮರೆತೇ ಹೋಗಿತ್ತು. ಅಂಗಳದ ಮೂಲೆಯಲ್ಲಿ ನಿಂತು ಮತ್ತೆ ಹತ್ತು ಬಾರಿ ಅಭ್ಯಾಸ ಮಾಡಿದ ಮೇಲೆಯೇ ಭಟ್ಟರು "ಹೂಂ, ಸಾಕು ಇವತ್ತಿಗೆ" ಅಂದಿದ್ದು.
*****
ವಾಸುದೇವನ ಸಹೋದರರೆಲ್ಲಾ ಅಷ್ಟು ಹೊತ್ತಿಗೆ ಎದ್ದಿದ್ದರು. ಬಹುಶಃ ನಾರಾಯಣ ಭಟ್ಟರ ಪೆಟ್ಟಿನ ಸದ್ದೂ, ವಾಸುದೇವನ ಅಳುವೂ ಉಳಿದವರನ್ನು ಎಬ್ಬಿಸಿರಬೇಕು. ಅಣ್ಣ ಬೆಳ್ಳಂಬೆಳಗೆ ಪೆಟ್ಟು ತಿನ್ನಿಸಿಕೊಂಡ ವಿಷಯ ಉಳಿದವರಿಗೂ ಗೊತ್ತಾಯಿತು. ಜೊತೆಗೆ ಅಪ್ಪನೂ ಭಾರೀ ಕೋಪದಲ್ಲಿ ಇದ್ದಾರೆ ಎನ್ನುವುದೂ ಅಷ್ಟೇ ಶುಭ್ರವಾಗಿತ್ತು. ನಿಜವಾಗಿ ನೋಡಿದರೆ, ಇನ್ನು ಕೆಲವೇ ದಿವಸಗಳಲ್ಲಿ ಬರಲಿರುವ ತಮ್ಮ ಎರಡನೇ ಮಗನ ಉಪನಯನದ ತಯ್ಯಾರಿ, ಇನ್ನೂ ಸಿದ್ಧವಾಗದ ತಟ್ಟಿಗಳು, ಹೀಗೆಲ್ಲಾ ಹಲವು ವಿಷಯಗಳು ತಲೆಯಲ್ಲಿರುವಾಗಲೇ ವಾಸುದೇವ ತಪ್ಪಿಸಿದ ಸ್ವರಿತ, ಭಟ್ಟರನ್ನು ಅಂಗಳದಿಂದ ಆಚೆ ಎಳೆದು ತಂದಿತ್ತು.
ವಾಸುದೇವ ಆಗಿನ್ನೂಏಳು ವರುಷದ ಹುಡುಗ. ಆ ವರುಷದ ಮಳೆಗಾಲದಲ್ಲಿ ಜನ್ಮಾಷ್ಟಮಿಗಿಂತಲೂ ಮುಖ್ಯವಾದ ಸಂಗತಿಯೊಂದು ಪುತ್ತೂರಿನಲ್ಲಿ ಭಾರೀ ಸುದ್ದಿ ಮಾಡಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದದ್ದ ಗಾಂಧೀಜಿ ಪುತ್ತೂರಿಗೆ ಅಂದು ಬರುವವರಿದ್ದರು. ಚಕ್ಕುಲಿ ತಿನ್ನಲು ನಿನ್ನೆ ರಾತ್ರಿ ಮನೆಗೆ ಬಂದಿದ್ದ ಓರಗೆಯ ಹುಡುಗ ಕೃಷ್ಣಮೂರ್ತಿ ಗಾಂಧೀಜಿಯ ಬಗ್ಗೆ ತನಗೆ ಗೊತ್ತಿದ್ದ ಕತೆಗಳೆಲ್ಲವನ್ನೂ ನಿನ್ನೆಯೇ ವಾಸುದೇವನಿಗೆ ಹೇಳಿದ್ದ. ಅದನ್ನು ಕೇಳಿದ್ದ ವಾಸುದೇವ, ದ್ವಾಪರದ ಕೃಷ್ಣನಂತೆಯೇ ಗಾಂಧೀಜಿ ಇಂದಿನ ದೇವರು ಅಂದುಕೊಂಡಿದ್ದ. ಅದೂ ಅಲ್ಲದೆ, ಕೃಷ್ಣಮೂರ್ತಿಯು ಅವನ ಅಪ್ಪನ ಜೊತೆಗೆ ಮರುದಿವಸ ಪುತ್ತೂರಿಗೆ ಹೋಗಿ ಗಾಂಧೀಜಿಯನ್ನು ನೋಡುವವನಿದ್ದ. ಇದನ್ನು ತಿಳಿದ ವಾಸುದೇವನೂ ಅಪ್ಪನ ಜೊತೆಗೆ ಪೇಟೆಗೆ ಹೋಗುವ ಅಭಿಲಾಷೆ ಹೊಂದಿದ್ದ.
ಆದರೆ, ಇವತ್ತು ಇನ್ನು ಅಪ್ಪನಿಗೆ ಹೇಗೆ ಹೇಳುವುದು? ಪೆಟ್ಟು ತಿಂದು ಹೆದರಿ ಕಂಗಾಲಾಗಿಬಿಟ್ಟಿದ್ದ ವಾಸುದೇವ.
*****
ಹೊತ್ತು ನೆತ್ತಿಗೇರುತ್ತಿದೆ. ಗಾಂಧೀಜಿ ಆಗಲೇ ಬಂದಿದ್ದಿರಬಹುದು ಪುತ್ತೂರಿಗೆ. ಕೃಷ್ಣಮೂರ್ತಿ ಏನು ಮಾಡುತ್ತಿದ್ದನೋ ಏನೋ! ವಾಸುದೇವನಿಗೆ ಗಾಂಧೀಜಿಯ ಭಾಷಣ ಬೇಕಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಭಾರೀ ಕಿಚ್ಚೇನೂ ಪುತ್ತೂರಿಗೆ ಹತ್ತಿರಲಿಲ್ಲ. ಆದರೆ ಸ್ವಲ್ಪ ದೂರದ ಕಾಸರಗೋಡಿನ ಬಳಿ ಏನೋ ಗಲಾಟೆ ಆಗುತ್ತಿದೆ ಎಂದು ಕೆಲ ತಿಂಗಳ ಹಿಂದೆ ಎಲ್ಲೋ ಕೇಳಿದ್ದ ನೆನಪು ಅವನಿಗೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಅಂದರೆ ಏನೆಂದೂ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ಆದರೆ ಗಾಂಧೀಜಿಯ ಹೆಸರು ಸರಿಯಾಗಿ ಗೊತ್ತಿದೆ. ಎಲ್ಲರ ಬಾಯಿಯಲ್ಲೂ ಬರುತ್ತಿದ್ದ ಹೆಸರದು. ಒಮ್ಮೆ ನೋಡಬೇಕು ಅಂದುಕೊಂಡಿದ್ದ ವಾಸುದೇವನ ಆಸೆಯ ಬಳ್ಳಿಗೆ ಕೃಷ್ಣಮೂರ್ತಿ ನೀರೆರೆದಿದ್ದ ನಿನ್ನೆ.
"ಊಟಕ್ಕೆ ಬನ್ನಿ... "ಎಂದು ಅಮ್ಮ ಕರೆದಾಗ ಇನ್ನಾಯಿತು ಅಂದುಕೊಂಡ ವಾಸುದೇವ.
*****
ನಾರಾಯಣ ಭಟ್ಟರ ಊಟ ಮುಗಿಯುತ್ತಿದಂತೆ ಕೃಷ್ಣಮೂರ್ತಿಯ ಅಪ್ಪ ಗಂಗಾಧರ ಭಟ್ಟರು ಮನೆಯ ಕಡೆ ಬರುತ್ತಿದ್ದರು. ಮನೆಗೆ ಬಂದು ಶಾಲನ್ನು ಕೊಡವಿ "ಅಗುರ್ರ್ ... " ಎಂದು ತೇಗಿ ತಮ್ಮ ಊಟ ಆಗಲೇ ಆಯಿತೆಂದು ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು ಹೇಳಿದರು. ಎಲೆಯಡಿಕೆಯ ತಟ್ಟೆಯನ್ನು ಅತಿಥಿಗಳ ಎದುರಿಗಿಟ್ಟು ನಾರಾಯಣ ಭಟ್ಟರು ತಮ್ಮಕುರ್ಚಿಯ ಮೇಲೆ ಕುಳಿತರಷ್ಟೇ. ಆಗ ತಾನೇ ಊಟ ಮುಗಿಸಿ ತಟ್ಟೆ ಹಿಡಿದು ಹೊರಬಂದ ವಾಸುದೇವ "ಮಾಮ! ಗಾಂಧೀಜಿಯನ್ನು ನೋಡಿ ಆಯ್ತಾ? ಭಾರೀ ಗೌಜಿಯಾ?" ಎಂದು ಒಮ್ಮಿಂದೊಮ್ಮೆಲೇ ಕೇಳಿದ. ಕಣ್ಣು ಕೃಷ್ಣಮೂರ್ತಿ ಎಲ್ಲಿದ್ದಾನೆಂದು ಹುಡುಕುತ್ತಿತ್ತು.
"ಇಲ್ಲ ವಾಸು. ಚಕ್ಕುಲಿ ಸರೀ ತಿಂದಿದ್ದ ಕೃಷ್ಣ ಅನಿಸ್ತದೆ. ಇವತ್ತು ಹೊಟ್ಟೆ ಸರಿ ಇಲ್ಲ ಅವನಿಗೆ. ಡಾಕ್ಟರರ ಬಳಿ ಹೋಗಿ ಬರುವಷ್ಟರಲ್ಲಿ ಹನ್ನೆರಡು ಗಂಟೆ ಆಯ್ತು. ಇನ್ನೆಂತ ಹೋಗುವುದು? ಭಾಷಣ ಮುಗ್ದಿರ್ತದೆ ಈಗ" ಅಂದರು ಗಂಗಾಧರ ಮಾವ.
"ಗಾಂಧೀಜಿ ಬರುವುದು ಇವತ್ತಾ? ಹೌದಾ?" ಅಂದರು ಆಶ್ಚರ್ಯದಿಂದ ನಾರಾಯಣ ಭಟ್ಟರು.
ಭಟ್ಟರಿಗೆ ರಾಜಕೀಯ, ಸ್ವಾತಂತ್ರ ಹೋರಾಟದ ವಿಷಯಗಳಲ್ಲಿ ಭಾರೀ ಆಸಕ್ತಿಯೂ ಇತ್ತು. ಕಾಸರಗೋಡಿನ ಬಳಿ ನಡೆದಿದ್ದ ಮಾಪಿಳ್ಳೆ ಕದನದಲ್ಲಿ ಸತ್ತು ಹೋದ ಅನೇಕರಲ್ಲಿ ಅವರ ಪರಿಚಯದವರೂ ಇದ್ದರು.
ಗಾಂಧೀಜಿಯ ಜೀವನದ ಹಲವು ಕತೆಗಳನ್ನು ಊರಿನ ಹಲವು ಜನಗಳಿಗೆ ಆಗಾಗ ಇವರು ಹೇಳುತ್ತಿದ್ದರು. ವಾಸುದೇವನೂ ಇವನ್ನು ಕೇಳಿಸಿಕೊಳ್ಳುತ್ತಿದ್ದ. "ಅಪ್ಪಯ್ಯ, ಒಂದು ಸಾರಿ ಗಾಂಧೀಜಿಯನ್ನು ನೋಡ್ಲಿಕ್ಕೆ ಹೋಗುವ" ಎಂದು ಹಿಂದೊಂದು ಬಾರಿ ಹೇಳಿದ್ದ. "ಇವತ್ತು ನೀನು ಅಗ್ನಿ ಸೂಕ್ತ ಕಲಿತ್ರೆ, ಒಂದು ದಿವಸ ಗಾಂಧೀಜಿಯನ್ನು ನೋಡುವುದಕ್ಕೆ ಕರೆದುಕೊಂಡು ಹೋಗುತ್ತೇನೆ" - ಎಂದು ಅಂದು ಅಂದಿದ್ದರು ಭಟ್ಟರು.
ಆದರೆ, ಇಂದು ಉಪನಯನದ ಕೆಲಸ, ಅಷ್ಟಮಿಯ ಚಕ್ಕುಲಿಯ ನಡುವೆ ಅದು ಹೇಗೋ ಗಾಂಧೀಜಿಯ ಆಗಮನವನ್ನು ಮರೆತಿದ್ದರು.
ಬೈರಾಸು ಕಟ್ಟಿಕೊಂಡಿದ್ದ ವಾಸುದೇವ ಇನ್ನೂ ತಟ್ಟೆ ಕೈಯಲ್ಲಿ ಹಿಡಿದುಕೊಂಡು ಅಪ್ಪನ ಕಡೆ ಗುರ್ರೆಂದು ನೋಡುತ್ತಿದ್ದ. ಭಟ್ಟರಿಗೆ ಈಗ ಎಲ್ಲಾ ಅರ್ಥವಾಯಿತು; ಬೆಳಗಿನಿಂದ ವಾಸುದೇವನ ಮನದಲ್ಲಿದ್ದ ಕಸಿವಿಸಿಯನ್ನೂ, ಸ್ವರಿತ ತಪ್ಪಿದ್ದರ ಕಾರಣವನ್ನೂ ತಕ್ಷಣ ಅರಿತರು.
ಸಮಯ ಮೀರುತ್ತಿದೆ ಎಂದು ಅನ್ನಿಸಿತು ಭಟ್ಟರಿಗೆ. ಆದರೂ ಒಂದು ಪ್ರಯತ್ನ ಮಾಡಿ ಬಿಡೋಣ ಎಂದು ಯೋಚಿಸಿ, "ಭಾವ, ಬನ್ನಿ ನಡಿಯಿರಿ, ಪುತ್ತೂರು ಕಡೆ ಒಮ್ಮೆ ಹೋಗಿ ಬರುವ" ಎಂದರು.
ಇನ್ನೂ ತಟ್ಟೆ ತೊಳೆಯುತ್ತಿದ್ದ ವಾಸುದೇವನಿಗೆ, "ಅಂಗಿ ಹಾಕಿಕೋ, ಬಾ, ಹೋಗಿ ಬರುವ ಒಮ್ಮೆ" ಎಂದರು.
*****
ಆತುರ ಆತುರದಲ್ಲೇ ವಾಸುದೇವನೂ ಹೊರಟು ನಿಂತ. ಚಾವಡಿಯಲ್ಲಿದ್ದ ಗಡಿಯಾರ ಢಣ್-ಢಣ್ ಎಂದು ಎರಡು ಬಾರಿ ಶಬ್ದ ಮಾಡಿತು. ಧಾರಾಕಾರ ಸುರಿಯುತ್ತಿದ್ದ ಆ ಮಳೆಯಲ್ಲಿ ವಾಸುದೆವನನ್ನು ಭಟ್ಟರು ಎತ್ತಿಕೊಂಡರು! ಬಹುಶಃ ತಾನೇನೂ ತಪ್ಪು ಮಾಡಿದೆ ಎಂದೆನಿಸಿ ಮಗನನ್ನು ಎತ್ತಿ ನಡೆಸುತ್ತಿದರೆನೋ!
ಗಂಗಾಧರ ಮಾವ ಹಿಂದೆ ನಡೆಯುತ್ತಿದ್ದರು. ಅಪ್ಪ ಹಾಕಿಕೊಂಡಿದ್ದ ಗೊರಬಿನ ನಡುವಿಂದ ಹಿಂದೆ ತಲೆ ಹಾಕಿ ವಾಸುದೇವ ಆಗಾಗ ಮಾವನ ಜೊತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದ.
*****
ಮೇರಳ, ಪುತ್ತೂರಿನಿಂದ ಮಡಿಕೇರಿ ರಸ್ತೆಯ ಬದಿಯಲ್ಲಿನ ಹಳ್ಳಿ. ತಮ್ಮ ಗದ್ದೆಯ ಬದುಗಳಲ್ಲಿ ಹಾದು ಬರುತ್ತಿದ್ದಾಗ ಭಟ್ಟರಿಗೆ ಏನನ್ನಿಸಿತೋ ಏನೋ. ಭತ್ತದ ತೆನೆಯೊಂದನ್ನು ಕುಯ್ದುಕೊಂಡು ವಾಸುದೇವನ ಕೈಯಲ್ಲಿ ಕೊಟ್ಟರು. ಮಡಿಕೇರಿ ಕಡೆಯ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಮೂರು ಘಂಟೆಯಾಗಿರಬೇಕು.
ಮಾರ್ಗದ ಎದುರುಗಡೆಯಿಂದ ಭಾರೀ ವಾದ್ಯ-ನಗಾರಿಗಳು ಕೇಳತೊಡಗಿದವು. ಎತ್ತರವಿದ್ದ ಆ ಮಾರ್ಗ ಹತ್ತುತ್ತಿದ್ದ ಭಟ್ಟರಿಗೆ ಮುಂದೆ ಏನಾಗುತ್ತಿದೆ ಎಂದು ಸ್ಪಷ್ಟವಾಗತೊಡಗಿತ್ತು. ಗಾಂಧೀಜಿ ಮುಂದೆ ಸಂಪಾಜೆ ಕಡೆ ಹೋಗುವವರಿದ್ದರು. ಅವರನ್ನು ಸುಳ್ಯ ತನಕವೂ ಮೆರವಣಿಗೆಯಲ್ಲಿ ಬಿಟ್ಟು ಕೊಡಲು ಜನ ನೆರೆದಿದ್ದರು. ತಡವಾಗಿದೆ, ಆದರೂ ಬೀಳ್ಕೊಡುಗೆಯನ್ನಾದರೂ ನೋಡುತ್ತೇನಲ್ಲಾ ಎಂದುಕೊಂಡರು ಭಟ್ಟರು. ವಾಸುದೇವ ಈಗ ಅಪ್ಪನ ಭುಜದಿಂದ ಕೆಳಗಿಳಿದಿದ್ದ. ಮಾರ್ಗದ ಬದಿಯಲ್ಲಿ ಇನ್ನೂ ಒಂದಷ್ಟು ಜನರು ಆಗ ನೆರೆದರು. ಅವರಲ್ಲಿ ಒಂದಾಗಿ ಭಟ್ಟರೂ ಸೇರಿಕೊಂಡರು.
ಗಾಂಧೀಜಿ ಅಸ್ಪಷ್ಟದಿಂದ ಸ್ಪಷ್ಟವಾಗಿ ಕಾಣಿಸಲಾರಂಭಿಸಿದರು. ಪಲ್ಲಕ್ಕಿಯಲ್ಲಿ ಕೂತಿದ್ದ ಶ್ವೇತ ವಸ್ತ್ರದ ಗಾಂಧೀಜಿ ತಮ್ಮ ಕಣ್ಣಿನೆದುರು ಸಾಗುತ್ತಲೇ, "ಅಲ್ಲಿ ಅಲ್ಲಿ ನೋಡು ಮಗೂ, ಗಾಂಧೀಜಿ" ಎಂದು ವಾಸುದೇವನಿಗೆ ತೋರಿಸಿದರು.
ಪಲ್ಲಕ್ಕಿ ಸರಿಯಾಗಿ ಎದುರು ಬರುತ್ತಿದಂತೆ ಭತ್ತದ ತೆನೆಯ ನಡುವೆ ಕೈಮುಗಿದ ವಾಸುದೇವ. ಮಂದಹಾಸದ ಗಾಂಧೀಜಿ ಒಮ್ಮಿಂದೊಮ್ಮೆಲೆ ಏನೋ ಪ್ರಶ್ನಾರ್ಥಕ ರೂಪದಿಂದ ವಾಸುದೇವನನ್ನು ನೋಡಿದರು. ಪಲ್ಲಕ್ಕಿ ಸ್ವಲ್ಪ ದೂರದಲ್ಲಿ ನಿಂತಿತು. ಕೆಳಗಿಳಿದ ಗಾಂಧೀಜಿ ಕೈಸನ್ನೆಯ ಮೂಲಕ ಬಾಲಕ ವಾಸುದೇವನನ್ನು ಕರೆದರು. ಭಯ ಸಂಕೋಚಗಳಿಂದ ಮುಂದೆ ನಡೆದ ಹುಡುಗ.ವಾಸುದೇವನ ಕೆನ್ನೆಯನ್ನು ಗಾಂಧೀಜಿ ಸವರಲು, ಭಟ್ಟರು ಓಡಿ ಬಂದು ಕೈಯಲ್ಲಿದ್ದ ತೆನೆಯನ್ನು ಗಾಂಧೀಜಿಗೆ ಕೊಡುವಂತೆ ಮಗನಿಗೆ ಹೇಳಿದರು. ಮುಗ್ಧ ನಗುವಿನಿಂದ ತೆನೆಯನ್ನು ಗಾಂಧಿಯ ಕೈಗಿತ್ತ ವಾಸುದೇವ. ಗಾಂಧಿಜಿ ಮುಗುಳ್ನಕ್ಕರು.
ಪಲ್ಲಕ್ಕಿ ಮುಂದೆ ಸಾಗಿತು.
[ಸತ್ಯ ಘಟನೆಗೆ ಅಲ್ಲಲ್ಲಿ ಸಾಂದರ್ಭಿಕ ಮಸಾಲೆ ಹಾಕಿದ್ದೇನೆ. ಗಾಂಧೀಜಿ, ಈಗಿನ ಪುತ್ತೂರು ಬಸ್ ಸ್ಟಾಂಡಿನಲ್ಲಿ ಅಂದು ಭಾಷಣ ಮಾಡಿದ್ದರಂತೆ. ಅದರ ನೆನಪಿಗಾಗಿ ಇದ್ದ ಗಾಂಧೀಜಿ ಪ್ರತಿಮೆ ಬಸ್ ಸ್ಟಾಂಡಿನ ಮೂಲೆಯ ಅಶ್ವತ್ಥ ಕಟ್ಟೆಯ ಬಳಿ ಈಗಲೂ ಇದೆ.]