"ಏನು ಮಧುಸೂದನ, ಪಾಠ ಮಾಡಿದ್ದು ಅರ್ಥ ಆಯಿತೋ ಇಲ್ಲ್ವೋ ?"- ಅಂತ ನನ್ನ ನೆಚ್ಚಿನ ವಿಜ್ಞಾನ ಶಿಕ್ಷಕಿ ಪುಷ್ಪಾವತಿ ಮೇಡಂ ಹೇಳಿದ್ದು ಇನ್ನೂ ನನ್ನ ಕಿವಿಗೆ ಕೇಳುತ್ತಾ ಇದೆ. ಮೊನ್ನೆ ನಾನು ಆಫೀಸಿನಲ್ಲಿ ಇದ್ದಾಗ ನನ್ನ ಅಮ್ಮ ಫೋನ್ ಕರೆಮಾಡಿ 'ಪುಷ್ಪಾವತಿ ಮೇಡಂ ಇನ್ನಿಲ್ಲ' ಅಂದಾಗ ನನಗೆ ನಂಬಲಾಗಲಿಲ್ಲ. ಗದ್ಗದಿತನಾದೆ. ಪಕ್ಕದಲ್ಲೇ ಇದ್ದ ಮೀಟಿಂಗ್ ರೂಮಿಗೆ ಹೊಕ್ಕು ಬಾಗಿಲು ಹಾಕಿಕೊಂಡು, ಒತ್ತಿ ಬರುತ್ತಿದ್ದ ಅಳುವನ್ನು ತಡೆಯಲು ಯತ್ನಿಸಿದೆ. 'ಇಲ್ಲ, ಸಾಧ್ಯವೇ ಇಲ್ಲ; ನನ್ನ ಅತ್ಯಂತ ನೆಚ್ಚಿನ ಮೇಡಂ ಇನ್ನೂ ಇದ್ದಾರೆ'- ಅನ್ನುತ್ತಿತ್ತು ನನ್ನ ಮನಸ್ಸು.
******
ಪುಷ್ಪಾವತಿ ಮೇಡಂ. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೇವರಿಟ್ ಟೀಚರ್. ನಾನು ಓದುತ್ತಿದ್ದ ಸಮಯದಲ್ಲಿ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಪಾಠ ಮಾಡುತ್ತಿದ್ದವರಲ್ಲಿ ಒಬ್ಬರು. ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡವರು. ಯೋಚನಾ ಸ್ಪಷ್ಟತೆ, ಅದ್ಭುತ ವಾಕ್ಪಟುತ್ವ, ಭಾಷಾ ಪ್ರೌಢಿಮೆ, ವಿಜ್ಞಾನದ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸುವ ಪರಿ, ಅಚಲ ಆತ್ಮ ವಿಶ್ವಾಸ, ಮುಖದಲ್ಲಿ ಸದಾ ಮುಗುಳ್ನಗೆ, ಕೈಯಲ್ಲೊಂದು ಚಾಕ್ ಪೀಸ್, ಕತ್ತೆತ್ತಿ ಕೊನೆಯ ಬೆಂಚಿನವರನ್ನು ಸೂಕ್ಷ್ಮವಾಗಿ ಗಮನಿಸುವ ಪರಿ, ಗಂಧಕ-ರಂಜಕಗಳ ಸಮೀಕರಣವನ್ನು ಮನರಂಜಕವಾಗಿ ಪೂರ್ಣಗೊಳಿಸುವ ನೈಪುಣ್ಯ,... ಅಬ್ಬಾ, ಪುಷ್ಪಾವತಿ ಮೇಡಂಗೆ ಪುಷ್ಪಾವತಿ ಮೇಡಂ ಮಾತ್ರ ಸಾಟಿ. ಮೇಡಂ ಪಾಠ ಅರ್ಥ ಆಗ್ತಾ ಇಲ್ಲ ಎಂದು ಇಲ್ಲಿಯವರೆಗೆ ಅಂದವರೇ ಇಲ್ಲವೇನೋ.
ಹೈಸ್ಕೂಲ್ ಸೇರುವ ಹೊತ್ತಿಗೆ, 'ಮುಂದೆ ಪಿ ಯು ಕಾಲೇಜಿನಲ್ಲಿ ಕಲಾ ವಿಭಾಗ ತೆಗೆದುಕೊಂಡು ಸಾಹಿತ್ಯ ಸಂಶೋಧನೆ ಮಾಡಬೇಕು' ಎಂದುಕೊಂಡಿದ್ದ ನಾನು ಮುಂದೆ ವಿಜ್ಞಾನ ವಿದ್ಯಾರ್ಥಿಯಾಗುವಂತೆ ಮಾಡಿ, ನನ್ನ ಮುಂದಿನ ಜೀವನದ ಯಶಸ್ಸಿಗೆ ಮುಖ್ಯ ಕಾರಣ ಪುಷ್ಪವತಿ ಮೇಡಂ.
*****
*****
ನಾನು ಎಂಟನೇ ತರಗತಿಯಲ್ಲಿರುವಾಗ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆ. ಪುಷ್ಪಾವತಿ ಮೇಡಂ ತಯಾರಿ ಮಾಡಿದ ಪೇಪರ್ 'ಜೈವಿಕ ತಂತ್ರಜ್ಞಾನ'ದ ಮೇಲಿತ್ತು. (ಅಲ್ಲಿಯವರೆಗೆ ಬರೀ ಭಾಷಣ ಮಾತ್ರ ಮಾಡುತ್ತಿದ್ದೆ). ಗೋಷ್ಠಿಯಲ್ಲಿ ನನ್ನ 'paper presentation' ಮುಗಿದು ಕೊನೆಗೆ ತೀರ್ಪುಗಾರರು viva ಪ್ರಶ್ನೆಗಳನ್ನು ಕೇಳಿದಾಗ ಪೆಚ್ಚಾಗಿ ಪುಷ್ಪಾವತಿ ಮೇಡಂ ಮುಖವನ್ನು ನೋಡುತ್ತಿದ್ದೆ. ನನ್ನ ಕೆಟ್ಟ ಪ್ರದರ್ಶನದಿಂದ ಬೇಸರಗೊಂಡಿದ್ದರು ಮೇಡಂ. ಮಂಗಳೂರಿನಿಂದ ಉಪ್ಪಿನಂಗಡಿವರೆಗಿನ ಬಸ್ಸು ಪ್ರಯಾಣದಲ್ಲಿ ಪೂರ್ತಿ ಕ್ಲಾಸ್ ತೆಗೆದುಕೊಂಡಿದ್ದರು. ಮುಂದಿನ ವರುಷದ ವಿಚಾರ ಸಂಕಿರಣದಲ್ಲಿ ನನ್ನ ವಿಚಾರ ಮಂಡನೆಯನ್ನು ಕಂಡು ತುಂಬಾ ಖುಷಿ ಪಟ್ಟಿದ್ದರು. ಪಾಠದ ಜೊತೆಗೆ ವಿಜ್ಞಾನ - ಸಾಹಿತ್ಯಕ ಚಟುವಟಿಕೆಗಳಿಗೂ ಸದಾ ಪ್ರೋತ್ಸಾಹಿಸುತ್ತಿದ್ದರು ಪುಷ್ಪಾವತಿ ಮೇಡಂ. ಅಂತರ್-ಶಾಲಾ ಸ್ಪರ್ಧಾ ಚಟುವಟಿಗೆಗಳು, ವಿಜ್ಞಾನ ಪ್ರಯೋಗ - ಪ್ರದರ್ಶನಗಳು ಪುತ್ತೂರಿನಲ್ಲಿ ನಡೆಯುತ್ತಿದ್ದಾಗ ನಾನೂ ಕೆಲವು ಬಾರಿ ಅವರ ಮನೆಯಲ್ಲಿ ಚಹಾ ತಿಂಡಿ ಮಾಡಿ 'rehearsal' ಮಾಡಿದ್ದೂ ಇದೆ.
*****
ಪುಷ್ಪಾವತಿ ಮೇಡಂ ಪಾಠದ ಹಲವು ಸಾಲುಗಳು ನನ್ನ ಮನದಲ್ಲಿ ಇಂದಿಗೂ ಅಚ್ಚಾಗಿವೆ. ವಿಜ್ಞಾನದ ಸಾಲುಗಳನ್ನು ಮನದಲ್ಲಿ ಎಂದಿಗೂ ಅಳಿಯದಂತೆ ಅಚ್ಚು ಹಾಕುವುದು ಸುಲಭದ ಮಾತಲ್ಲ. 'ರಾಸಾಯನಿಕ ಕ್ರಿಯಾವರ್ಧಕಗಳು' (catalysts) ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸುತ್ತಾ, "ನಾವು ಶಿಕ್ಷಕರಾಗಿ ನಿಮ್ಮ ವಿದ್ಯಾರ್ಜನೆಯ ವೇಗವನ್ನು ಹೆಚ್ಚಿಸಬಹುದಷ್ಟೇ. ಪರೀಕ್ಷೆ ಬರೆಯುವುದು ನಿಮ್ಮ ಸ್ವಂತ ಬುದ್ಧಿವಂತಿಕೆಯಲ್ಲಿ. ನಾವು ಕ್ರಿಯಾವರ್ಧಕಗಳು; ಅಷ್ಟೇ" ಅಂದಿದ್ದರು. ಜೀವಶಾಸ್ತ್ರ , ರಸಾಯನ ಶಾಸ್ತ್ರಗಳ ಮೂಲ ಅಂಶಗಳನ್ನು, ಹಲವು 'definition'ಗಳ ವಿಶೇಷತೆಯನ್ನು ಒಗಟುಗಳ ಮೂಲಕ ವಿವರಿಸುತ್ತಿದ್ದರು.
ನಾನು ತೀರಾ ಇತ್ತೀಚಿಗೆ ನನ್ನ ಶಾಲೆಗೆ ಭೇಟಿ ಕೊಟ್ಟಿದ್ದೆ. ಬೆಂಗಳೂರಿನಲ್ಲಿ ನಾನು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಉತ್ಸಾಹದಿಂದ ಮೇಡಂ ಜೊತೆಗೆ ಮಾತನಾಡಿದ್ದೆ. ಐಟಿ ಕ್ಷೇತ್ರದ ಬೆಳವಣಿಗೆಗಳನ್ನು ವಿವರಿಸುತ್ತಿದ್ದೆ, ನನಗೆ ತಿಳಿದ ಮಟ್ಟಿಗೆ. ಆ ದಿನ ಸಂಜೆ ವೇಳೆಗೆ ಪುಷ್ಪಾವತಿ ಮೇಡಂರ ದೂರವಾಣಿ ಕರೆ ನನಗೆ ಬಂದಿತ್ತು. "ಮಧುಸೂದನ, ಆ Network Elements ಅಂದ್ಯಲ್ಲ, ಅದನ್ನು ಹೇಗೆ ಮ್ಯಾನೇಜ್ ಮಾಡ್ತೀರಿ? ಸ್ವಲ್ಪ ಹೇಳ್ತೀಯ?" ಎಂದು ಕೇಳಿದ್ದರು. ಮೇಡಂ ಅಂದರೆ ಹಾಗೆ. 'ಕಲಿಯುವುದು ಎಲ್ಲರಿಂದಲೂ ಇದೆ' ಎಂದಿದ್ದರು.
*****
ನನ್ನ ನೆಚ್ಚಿನ ಪುಷ್ಪಾವತಿ ಮೇಡಂ,
ಹತ್ತನೇ ತರಗತಿಯಲ್ಲಿ ಪಾಠ ಮಾಡುತ್ತಾ ಒಂದು ಸಾರಿ ನೀವು "ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಅಮೆರಿಕನ್ನರಿಗಿಂತ ಇಪ್ಪತ್ತೈದು ವರುಷ ಹಿಂದೆ ಇದ್ದೇವೆ" ಅಂದಿದ್ದಿರಿ. ಮೊನ್ನೆ ಮಾತನಾಡಿದಾಗ 'ನಾವು ಕಲಿಯುವುದು ಬಹಳಷ್ಟಿದೆ' ಅಂದಿದ್ದಿರಿ. ನಿಮ್ಮಿಂದ ಕಲಿತುಕೊಳ್ಳುವುದು ಬಹಳಷ್ಟಿತ್ತು.
ಸದಾ ನಗುಮೊಗದಿಂದ ಸಮೀಕರಿಸುತ್ತಿದ್ದ ನಿಮ್ಮ ಸಮೀಕರಣಗಳು ಅರ್ಧದಲ್ಲಿ ಉಳಿದಿವೆ. ಹಲವು ಒಗಟುಗಳು ಉತ್ತರವಿಲ್ಲದೆ ಉಳಿದಿವೆ. ಡಾರ್ವಿನ್ನನ ಸಿದ್ಧಾಂತಗಳ ಬಗೆಗಿನ ನಿಮ್ಮ ಅದ್ಭುತ ಕತೆಗಳನ್ನು ಇನ್ನೂ ಕೇಳಬೇಕೆನಿಸಿದೆ.
ನೀವ್ಯಾಕೆ ಮೇಡಂ ಇಷ್ಟು ಬೇಗ ಪಾಠ ನಿಲ್ಲಿಸಿದಿರಿ?
****