ನವಿಲಿಂದಿಂದು ಮನದುಂಬಿ ಕುಣಿಯುತಿಹುದು
ಮಿನುಗು ತಾರೆಯ ನಡುವೆ ನಗುವ ಚಂದ್ರನ ತೆರದಿ
ಎನ್ನ ಮನವಿಂದಿಂದು ನಲಿಯುತಿಹುದು
ಅಂದು ಆ ಮಂದಹಾಸದಿ ಸ್ವಾಗತಿಸಿ ಕರೆದ
ಇಂದುವದನೆಯು ಮನವ ಕರಗಿಸಿದಳು
ಕರಗಿ ನೀರಾದೆನ್ನ ಮನ ಶರಧಿಯಲಿ ಹಾಯಿ
ಯನು ನಡೆಸಿ ತೀರವನು ಸೇರಿಸಿದಳು
ಎನ್ನ ಮನಃ ಪಟಲದೊಳು ನೆಲೆಗೊಂಡ ನೆನಪುಗಳು
ಕನಸಾಗಿ ಆಕೆಯನು ನೆನೆಯುತಿಹವು
ಕನಸು ಒಂದೊಂದಾಗಿ ಗರಿಬಿಚ್ಚಿ ಹಾರುತಲಿ
ಬಾಳ ಬಾನನ್ನು ಅತಿಕ್ರಮಿಸುತಿಹವು
ಮೌನದಲ್ಲಭ್ಯಂಗ ಮಾಡಿದಂತಹ ಬೆಡಗಿ
ಬರುವಿಕೆಗೆ ಪ್ರತಿಸಂಧ್ಯೆ ಕಾಯುತಿಹುದು
ಬಾಳ ಅಗ್ಗಡಲಿನೊಳು ಕ್ರಮಿಸಲಿಹ ದೂರಕಿ
ನ್ನಿವಳ ಸಾಮೀಪ್ಯವದು ದೊರಕಲಿಹುದು