[ಈ ಪದ್ಯವನ್ನು ಬರೆದದ್ದು ಕೆಲ ವರುಷಗಳ ಹಿಂದೆ. ಜೆಡಿಎಸ್ ಮತ್ತು ಬಿಜೆಪಿ ಸರಕಾರಗಳು ಕರ್ನಾಟಕದಲ್ಲಿ ಇಪ್ಪತ್ತು ತಿಂಗಳುಗಳ ಒಪ್ಪಂದದ
ಸರಕಾರವನ್ನು ನಡೆಸುತ್ತಿದ್ದ ಸಂಧರ್ಭದಲ್ಲಿ ]
ನಗರಿಯಲಿ ನಡೆದ ಐಪೀಯೆಲ್ಲು ಪಂದ್ಯಗಳ ಸೊಗವ ಸವಿಯುತ ಕುಳಿತ ನಮ್ಮ ನಾಡಿನ ಜನಕೆ ಚಿಗುರಿತೈ ಇಂಡಿಯನ್ ಪೊಲಿಟಿಕಲ್ ಲೀಗನಾಡಿಸುವ ಮಹದಾಸೆ| ನಗನಾಣ್ಯ ಎದುರಿಟ್ಟು ಹೊಲವನ್ನೆ ಅಡವಿಟ್ಟು ಮಿಗಿಸಿದರು ಮುಗ್ಧ ಜನ ಹಸಿವನೂ ಬದಿಗಿಟ್ಟು ನಗುಮೊಗದಿ ಶುರುವಾಗೆ ಕಿಕ್ಕಿರಿದ ಅಂಗಣವು ಸಫ಼ಲವೈ ಯೋಜಕತ್ವ|| ಕರುನಾಡ ತಂಡದಲಿ ತಮಿಳರೂ ಸೇರಿದರು ಕರಿಯ ಜನತೆಯ ಜೊತೆಗೆ ಬಿಳಿಯರೂ ಸೇರಿದರು ಬರಿಯ 'ಕಲಿ'ಗಳಿಗೆ ಬೆಲೆ, ಪಕ್ಷ-ಅಂತರವಿಲ್ಲವೆಂಬುದದು ಸತ್ಯ| ಹೆಸರುಗೈಪೀಯೆಲ್ಲು, 'ದೊಡ್ಡಣ್ಣ' ಅಂಪೈರು 'ಹೊಸ ಬೇಲಿ' ತಂಡ ನಾಯಕನು ಶ್ರೀ ಮುಶರಪ್ಫ಼ು! ಉಸಿರ ಬಿಗಿ ಹಿಡಿದು ಕೇಕೆ ಹಾಕುತಲಿಹರು ಮಿಲಿಯಗಟ್ಟಲೆ ಜನತೆ ತಾ|| ಇರುಳ ಹೊತ್ತಲಿ ಮಿನುಗೊ ಅಂಗಣವ ಕಂಡರೂ ! ಮರುಳಾಗಿ ಮನೆ-ಮಂದಿ ಜೊತೆಯಾಗಿ ಬಂದರೂ, ಹುರುಳಿ ಹೊಲಕಿರದಿದ್ದ ವಿದ್ಯುತ್ತು ಅಂಗಣದಿ ಮಿಂಚಿದ್ದ ಪರಿಯ ಮರೆತು| ಬೆರಳು ಮೂಗೇರಿ ಕೌತುಕವು ಬೆಳೆ-ಬೆಳೆಯಿತು ನೆರಳಿಲ್ಲದಾಯಿತೈ ಕರುನಾಡ ಎದುರಿನಲಿ ಹೋರಾಡಿ ಹೊರಳಾಡಿ ಕೈಸುಟ್ಟ ಬಂಗಾಳ ಗಂಡುಗಳುಪಾಂತ್ಯಗಳಲಿ|| ಉಳಿದಿಹುದು 'ಅಂತಿಮ'ವು; 'ಕರುನಾಡ' ಅಂಗಣದಿ ಬೆಳೆದ ಕರುನಾಡಿಗರ ಎದುರು ''ಗಾಂಪರ ಗುಂಪು"! ಅಳಿವು ಉಳಿವಿನ ಪ್ರಶ್ನೆ! ಉತ್ತರಿಸುವುದು ಕಾಲ, ಅಂತಿಮದಿ ಗೆಲ್ಲುವವರ| ಹಲವು ಸಾಹಸ ಪಟ್ಟು ಮೊದಲರ್ಧ ಪಂದ್ಯದಲಿ ಕೆಲವು 'ದಾಖಲೆ' ಬರೆದು ಗಾಂಪರನು ಗೋಳಾಡಿ ಉಳಿದಿರುವ ಇಪ್ಪತ್ತು ಓವರಲು ತಾವುಗಳು ಇಲ್ಲೆ ನಿಲ್ಲುವೆವೆಂದರು!|| ಹೇಗೆ ಸಾಧ್ಯವದೆಂದು ಆಯೋಜಕರು ಕೇಳೆ ಬಗೆ-ಬಗೆಯ ಧ್ವನಿಯಿಂದ ಒಳಗಿಂದ ಉತ್ತರಿಸೆ ನಗು ಮೊಗವು ಬೆಂಡಾಗಿ ಆಸೆ ನೀರಾಗಿ ದು:ಖಾಂತ್ಯವಾಯ್ತೈಪೀಯೆಲ್ಲು| ಹಗೆಯನಾದರು ನಂಬು; ಹೊಗೆಯ ನೀ ನಂಬದಿರು ನಗು ಮೊಗದಿ ಎದುರಾಗೊ ಯಮನ ನೀ ನೆಚ್ಚದಿರು ಸಖನ ರೂಪದಿ ಬರುವ ಖಳನ ನೀನೆಂದಿಗೂ ನಂಬದಿರು ಆಪ್ತಮಿತ್ರ||
[ ಹೊಗೆ= ಗೋಮುಖ ವ್ಯಾಘ್ರ, ಇಂಜಿನಿಯರಿಂಗ್ ಕಲಿಸಿದ ಹೊಸ ಅರ್ಥ]