Saturday, February 4, 2012

ಹಗೆಯನಾದರೂ ನಂಬು; ಹೊಗೆಯ ನೀ ನಂಬದಿರು!

 
[ಈ ಪದ್ಯವನ್ನು ಬರೆದದ್ದು ಕೆಲ ವರುಷಗಳ ಹಿಂದೆ. ಜೆಡಿಎಸ್ ಮತ್ತು ಬಿಜೆಪಿ ಸರಕಾರಗಳು ಕರ್ನಾಟಕದಲ್ಲಿ ಇಪ್ಪತ್ತು ತಿಂಗಳುಗಳ ಒಪ್ಪಂದದ 
ಸರಕಾರವನ್ನು ನಡೆಸುತ್ತಿದ್ದ ಸಂಧರ್ಭದಲ್ಲಿ ]
 
  
ನಗರಿಯಲಿ ನಡೆದ ಐಪೀಯೆಲ್ಲು ಪಂದ್ಯಗಳ
ಸೊಗವ ಸವಿಯುತ ಕುಳಿತ ನಮ್ಮ ನಾಡಿನ ಜನಕೆ
ಚಿಗುರಿತೈ ಇಂಡಿಯನ್ ಪೊಲಿಟಿಕಲ್ ಲೀಗನಾಡಿಸುವ ಮಹದಾಸೆ|
ನಗನಾಣ್ಯ ಎದುರಿಟ್ಟು ಹೊಲವನ್ನೆ ಅಡವಿಟ್ಟು
ಮಿಗಿಸಿದರು ಮುಗ್ಧ ಜನ ಹಸಿವನೂ ಬದಿಗಿಟ್ಟು
ನಗುಮೊಗದಿ ಶುರುವಾಗೆ ಕಿಕ್ಕಿರಿದ ಅಂಗಣವು ಸಫ಼ಲವೈ ಯೋಜಕತ್ವ||


ಕರುನಾಡ ತಂಡದಲಿ ತಮಿಳರೂ ಸೇರಿದರು
ಕರಿಯ ಜನತೆಯ ಜೊತೆಗೆ ಬಿಳಿಯರೂ ಸೇರಿದರು
ಬರಿಯ 'ಕಲಿ'ಗಳಿಗೆ ಬೆಲೆ, ಪಕ್ಷ-ಅಂತರವಿಲ್ಲವೆಂಬುದದು ಸತ್ಯ|
ಹೆಸರುಗೈಪೀಯೆಲ್ಲು, 'ದೊಡ್ಡಣ್ಣ' ಅಂಪೈರು
'ಹೊಸ ಬೇಲಿ' ತಂಡ ನಾಯಕನು ಶ್ರೀ ಮುಶರಪ್ಫ಼ು!
ಉಸಿರ ಬಿಗಿ ಹಿಡಿದು ಕೇಕೆ ಹಾಕುತಲಿಹರು ಮಿಲಿಯಗಟ್ಟಲೆ ಜನತೆ ತಾ||

ಇರುಳ ಹೊತ್ತಲಿ ಮಿನುಗೊ ಅಂಗಣವ ಕಂಡರೂ !
ಮರುಳಾಗಿ ಮನೆ-ಮಂದಿ ಜೊತೆಯಾಗಿ ಬಂದರೂ,
ಹುರುಳಿ ಹೊಲಕಿರದಿದ್ದ ವಿದ್ಯುತ್ತು ಅಂಗಣದಿ ಮಿಂಚಿದ್ದ ಪರಿಯ ಮರೆತು|
ಬೆರಳು ಮೂಗೇರಿ ಕೌತುಕವು ಬೆಳೆ-ಬೆಳೆಯಿತು
ನೆರಳಿಲ್ಲದಾಯಿತೈ ಕರುನಾಡ ಎದುರಿನಲಿ
ಹೋರಾಡಿ ಹೊರಳಾಡಿ ಕೈಸುಟ್ಟ ಬಂಗಾಳ ಗಂಡುಗಳುಪಾಂತ್ಯಗಳಲಿ||

ಉಳಿದಿಹುದು 'ಅಂತಿಮ'ವು; 'ಕರುನಾಡ' ಅಂಗಣದಿ
ಬೆಳೆದ ಕರುನಾಡಿಗರ ಎದುರು ''ಗಾಂಪರ ಗುಂಪು"!
ಅಳಿವು ಉಳಿವಿನ ಪ್ರಶ್ನೆ! ಉತ್ತರಿಸುವುದು ಕಾಲ, ಅಂತಿಮದಿ ಗೆಲ್ಲುವವರ|
ಹಲವು ಸಾಹಸ ಪಟ್ಟು ಮೊದಲರ್ಧ ಪಂದ್ಯದಲಿ
ಕೆಲವು 'ದಾಖಲೆ' ಬರೆದು ಗಾಂಪರನು ಗೋಳಾಡಿ
ಉಳಿದಿರುವ ಇಪ್ಪತ್ತು ಓವರಲು ತಾವುಗಳು ಇಲ್ಲೆ ನಿಲ್ಲುವೆವೆಂದರು!||

ಹೇಗೆ ಸಾಧ್ಯವದೆಂದು ಆಯೋಜಕರು ಕೇಳೆ
ಬಗೆ-ಬಗೆಯ ಧ್ವನಿಯಿಂದ ಒಳಗಿಂದ ಉತ್ತರಿಸೆ
ನಗು ಮೊಗವು ಬೆಂಡಾಗಿ ಆಸೆ ನೀರಾಗಿ ದು:ಖಾಂತ್ಯವಾಯ್ತೈಪೀಯೆಲ್ಲು|
ಹಗೆಯನಾದರು ನಂಬು; ಹೊಗೆಯ ನೀ ನಂಬದಿರು
ನಗು ಮೊಗದಿ ಎದುರಾಗೊ ಯಮನ ನೀ ನೆಚ್ಚದಿರು
ಸಖನ ರೂಪದಿ ಬರುವ ಖಳನ ನೀನೆಂದಿಗೂ ನಂಬದಿರು ಆಪ್ತಮಿತ್ರ||
 
[ ಹೊಗೆ= ಗೋಮುಖ ವ್ಯಾಘ್ರ, ಇಂಜಿನಿಯರಿಂಗ್ ಕಲಿಸಿದ ಹೊಸ ಅರ್ಥ]

3 comments:

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...