ನಾನು ಎರಡನೇ ಕ್ಲಾಸಿನಲ್ಲಿರುವಾಗ ನಡೆದ ಘಟನೆ. ನಾನಾಗ ನಮ್ಮ ಕ್ಲಾಸಿನ 'ಮಿನಿ ರೌಡಿ' ಎಂದು ಗುರುತಿಸಿಕೊಂಡಿದ್ದೆ. ಜನರನ್ನು ರೇಗಿಸೋದಂದರೆ ಏನೋ ಒಂದು ಖುಷಿ ಆಗ. ಅಸಂಬದ್ಧ ಶಬ್ದಗಳನ್ನು ಉಪಯೋಗಿಸಿ ಬಯ್ಯೋದೆಂದರಂತೂ ಖುಷಿಯೋ ಖುಷಿ.
ಅಕ್ಕನ ಜೊತೆಗೆ ಶಾಲೆಗೆ ನಡೆದು ಹೋಗುತ್ತಿದ್ದೆ. ಪಕ್ಕದ ಮನೆಯ ಮಾವ ಅನತಿ ದೂರದಲ್ಲಿ ಪದ್ಮುಂಜದ ಕಡೆಗೇ ಹೊರಟಿದ್ದರು. ಸಿಕ್ಕಿದ್ದೇ ಚಾನ್ಸ್ ಅಂತ 'ಓಯ್! _____ ಮಾಮ' ಅಂತೆಲ್ಲಾ ಸುಮ್ಮನೇ ಬಯ್ದಿದ್ದೆ. ಅವರಿಗೇನೂ ಕೇಳಿಸಿರಲಿಲ್ಲ. ಕೇಳಬೇಕೆಂಬ ಉದ್ದೇಶವೂ ನನ್ನದಾಗಿರಲಿಲ್ಲ. ಸುಮ್ಮನೆ ಹುಚ್ಚು ಖುಷಿ ಅಷ್ಟೇ!
ಮಾವನಿಗೆ ಕೇಳದಿದ್ದರೂ ನನ್ನ ಅಕ್ಕ ಅದನ್ನು ಕೇಳಿಸಿಕೊಂಡಿದ್ದಳು. ತನ್ನ ಮುದ್ದಿನ ತಮ್ಮನ ಬಾಯಿಯಿಂದ ಬಂದಿದ್ದ ಅಪ್ಪಟ ಸಂಸ್ಕೃತ ಅವಳಿಗಂತೂ ಸುತಾರಾಂ ಇಷ್ಟವಾಗಿರಲಿಲ್ಲ.
ಸಂಜೆಯವರೆಗೆ ತೆಪ್ಪಗೆ ಶಾಲೆಯಲ್ಲಿದ್ದ ಅಕ್ಕ ಸಂಜೆ ಮನೆ ತಲುಪುತ್ತಲೇ ಅಪ್ಪನಿಗೆ ಸಂಪೂರ್ಣ ವರದಿ ಒಪ್ಪಿಸಿದಳು. ಅಪ್ಪನೋ ಸಂಜೆ ಹೊತ್ತಿಗೆ ಸಾಮಾನ್ಯವಾಗಿ ಕೋಪದಲ್ಲೇ ಇರುವವರು. ವಿಷಯ ತಿಳಿಯುತ್ತಲೇ ಅಕ್ಕನ ಎದುರಿಗೇ ನನ್ನನ್ನುಧರ್ರನೆ ಎಳೆದು ರಪ-ರಪ-ರಪ-ರಪನೆ ಬೆನ್ನಿಗೆ ಹೊಡೆದರು. ಬೆನ್ನಿನಲ್ಲಿ ಅಪ್ಪನ ಬರಿಗೈಯ ಕೆಂಪಾದ ಅಚ್ಚುಗಳು.
ಈ ಘಟನೆಯನ್ನು ಪ್ರತ್ಯಕ್ಷ ವೀಕ್ಷಿಸಿದ ಅಕ್ಕನಿಗಂತೂ ಗಳ-ಗಳನೆ ಅಳು! ಯಾಕಾದರೂ ದೂರು ಹೇಳಿದೆನೋ ಅಂತ. ಗಡಗಡನೆ ನಡುಗುತ್ತಿದ್ದಳು ಸಹ.
ಬಹುಶಃ ಅಕ್ಕ 'complaint' ಕೊಟ್ಟದ್ದು ಅದೇ ಮೊದಲು ಅದೇ ಕೊನೆ ಇರಬೇಕು. ನಾನೇನಾದರೂ ಮಾಡಿದ ಕೆಲಸ ಅವಳಿಗೆ ಸರಿ ಎನಿಸಲಿಲ್ಲವೆಂದಾದರೆ ಅವಳೇ ಸರಿಯಾಗಿ ಹೇಳಿ ಕೊಡುತ್ತಿದ್ದಳು.
ಬರಬರುತ್ತಾ ನನ್ನ ಕಪಿ ಚೇಷ್ಟೆಗಳು ನಿಧಾನವಾಗಿ ಕಡಿಮೆಯಾದವು ಸಹ.
*****
ಅಕ್ಕ ಸಂಕೋಚ ಸ್ವಭಾವದವಳು. ನಾನಿನ್ನೂ ಬಾಲವಾಡಿಯಲ್ಲಿರಬೇಕಾದರೆ ಅಕ್ಕ ಎರಡನೇ ಕ್ಲಾಸು. ಅಕ್ಕನಿಗೆ ಶಾಲೆಯಲ್ಲಿ ಯಾವುದೋ ಸ್ಪರ್ಧೆಯೊಂದರಲ್ಲಿ ಪ್ರಥಮ ಸ್ಥಾನ ಬಂದಿತ್ತು-ಮೊದಲನೇ ಬಾರಿಯ 'competition' ಇರಬೇಕು. ಬಹುಮಾನ ವಿತರಣಾ ಸಮಾರಂಭ. 'ಪ್ರಥಮ ಸ್ಥಾನ- ಮಂಗಳಾ ಗೌರಿ' ಎಂದು ಉದ್ಘೋಷಕರು ಘೋಷಿಸಿದ್ದರು. ಅಲ್ಲೇ ಕೂತಿದ್ದ ಅಕ್ಕನಿಗೆ ಅದ್ಯಾಕೋ ಹೆದರಿಕೆ. ಎರಡನೇ ಸಾರಿ ಹೆಸರು ಕೂಗಿದಾಗಲೂ ಅಕ್ಕ ತನ್ನ ಜಾಗ ಬಿಟ್ಟು ಏಳಲಿಲ್ಲ.
ಮೂರನೇ ಬಾರಿ ಹೆಸರು ಕೂಗಿದಾಗ ನಾನು ಛಂಗನೆ ಎದ್ದು ಓಡಿ ಬಹುಮಾನ ಸ್ವೀಕರಿಸಿದ್ದೆ. ಹೇಗಿದ್ದರೂ ನಮ್ಮ ಮನೆಗೇ ಬರುವಂಥದ್ದು ಈ ಸ್ಟೀಲ್ ಗ್ಲಾಸು ಅನ್ನೋದಂತೂ ಖಂಡಿತ. ಯಾರು ತೆಗೆದುಕೊಂಡರೇನು!? -ಅಂದುಕೊಂಡಿದ್ದೆ ನಾನು.
ಅದಾದ ಮೇಲೆ ಯಾವುದೇ ಸ್ಪರ್ಧೆಯಲ್ಲಿ ಅಕ್ಕ ಗೆದ್ದರೂ ಹೆಡ್ ಮಾಸ್ಟರ್ ಕೆರ್ಮುಣ್ಣಾಯ ಮಾಸ್ಟರು 'ಈ ಬಲಣಿ; ಪ್ರೈಜ್ ಗೆತೋಣು' (ನೀನು ಬಾರೋ,ಪ್ರೈಜ್ ತೆಗೆದುಕೋ) ಅಂತ ನನ್ನನ್ನೇ ಕರೆಯುತ್ತಿದ್ದರು!
೨೦೦೭ರಲ್ಲಿ ಅಕ್ಕ ಉಜಿರೆಯ 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್'ನಿಂದ 'best out going student' ಪ್ರಶಸ್ತಿ ಸ್ವೀಕರಿಸುವಾಗ ನಾನಿದನ್ನು ಒಂದು ಸಾರಿ ನೆನಪಿಸಿಕೊಂಡಿದ್ದೆ!
*****
ನಾನು ಹೈಸ್ಕೂಲು ಕಲಿತದ್ದು ಉಪ್ಪಿನಂಗಡಿಯಲ್ಲಿ. ಪುತ್ತೂರು ತಾಲೂಕು. ಅಕ್ಕ ಹತ್ತನೇ ತರಗತಿ ಕಲಿತದ್ದು ದುರ್ಗಾಂಬಾ ಹೈಸ್ಕೂಲು ಆಲಂಕಾರಿನಲ್ಲಿ. ಪುತ್ತೂರು ತಾಲೂಕೇ. ನಾನು ಎಂಟನೇ ತರಗತಿಯಲ್ಲಿ ಇರಬೇಕಾದರೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯೊಂದರಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದೆ. ಅಕ್ಕನ ಶಾಲೆಯಿಂದ ಅಕ್ಕ. ಜಿಲ್ಲಾ 'ಮುಖ್ಯೋಪಾಧ್ಯಾಯರ ಮತ್ತು ಪ್ರಾಂಶುಪಾಲರ ಸಂಘ' ಪ್ರತಿ ವರುಷ ನಡೆಸುತ್ತಾ ಬರುತ್ತಿರುವ ಸ್ಪರ್ಧೆಗಳಲ್ಲಿ ಒಂದು. ನನಗೂ ಅಕ್ಕನಿಗೂ ಅಪ್ಪನೇ ಭಾಷಣ ಬರೆದು ಕೊಟ್ಟಿದ್ದರು. ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹೆಚ್ಚು ಕಮ್ಮಿ ಒಂದೇ ಥರ ಇರುವ ಭಾಷಣ. ರೆಡಿ ಮೇಡ್.
ನನಗೆ ಪ್ರಥಮ ಸ್ಥಾನ; ಅಕ್ಕನಿಗೆ ದ್ವಿತೀಯ ಸ್ಥಾನ ಬಂದಿತ್ತು. ಇಬ್ಬರೂ ಮತ್ತೆ ಜಿಲ್ಲಾ ಮಟ್ಟದಲ್ಲಿ ಹೋರಾಡಿದ್ದೆವು.
ನನಗೆ ಬಹಳಷ್ಟು ಖುಷಿ ಕೊಟ್ಟ ಘಟನೆ ಇದು. ಅಕ್ಕನ ಮಾತಿಗಿಂತಲೂ ಲೇಖನಿ ತುಂಬಾ ಹರಿತವಾಗಿರುತ್ತಿತ್ತು.
ಬರ-ಬರುತ್ತಾ ಅಕ್ಕನ ಕೈಯಲ್ಲೇ ನಾನು ಭಾಷಣ ಬರೆಸಿಕೊಂಡು ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದೆ. ಈಗಲೂ ಕೆಲವೊಂದು ಸಾರಿ ಇದು ನಡೆಯುತ್ತಿದೆ!
*****
ಅಕ್ಕನ ಜೊತೆಗೆ ಗಲಾಟೆಅಥವಾ ಜಗಳ ಮಾಡಿದ್ದು ನೆನಪೇ ಇಲ್ಲ ಅನ್ನಬಹುದು. ನಮ್ಮ ಅಪ್ಪ ಅಮ್ಮ ಮನೆಯಲ್ಲಿ ನಮ್ಮನ್ನೇ ಬಿಟ್ಟು ಪೇಟೆಗೆ ಅಥವಾ ಸಂಬಂಧಿಕರ ಮನೆಗೆ ಹೊರಟರೆ, ನಾವೂ ಆಯಿತು;ಕಥೆ ಪುಸ್ತಕಗಳೂ ಆಯಿತು. ಸಂಜೆಯವರೆಗೆ ಪುಸ್ತಕಗಳ ರಾಶಿಯ ಜೊತೆ ಬಿದ್ದುಕೊಂಡಿರುತ್ತಿದ್ದೆವು. ಮದ್ಯಾಹ್ನದ ಊಟವನ್ನೂ ಮರೆತು! 'ಎಲಾ! ಅನ್ನ ಇನ್ನೂ ಹೀಗೇ ಇದೆ. ಇಬ್ಬರೂ ಊಟ ಮಾಡಲೇ ಇಲ್ಲ-ಸೋಮಾರಿಗಳು. ನಿಮ್ಮ ಈ ಕಥೆ ಪುಸ್ತಕಗಳನ್ನೆಲ್ಲಾ ಗುಜರಿಗೆ ಕೊಡುತ್ತೇವೆ' ಅಂತೆಲ್ಲಾ ಅಮ್ಮ ಹಲವು ಬಾರಿ ಕೂಗಾಡಿದ್ದು ಇದೆ. ಅಕ್ಕನಂತೂ ಪುಸ್ತಕಗಳನ್ನು ತುಂಬಾ ಹಚ್ಚಿಕೊಂಡಿದ್ದಳು. ನೆರೆಕರೆಯ ಕೆಲ ಮನೆಯಲ್ಲಂತೂ, ಅಕ್ಕ ಹೋದ ತಕ್ಷಣ ಪುಸ್ತಕಗಳ ರಾಶಿಯನ್ನು ಮನೆಯವರೇ ತಂದು ಹಾಕುತ್ತಿದ್ದರು.
ಶಾಲೆಯಲ್ಲಿ ಟೀಚರ್ ಹೇಳಿ ಕೊಟ್ಟದ್ದು ಸರಿ ಇಲ್ಲ ಎಂದುಕೆಲವು ಬಾರಿ ಟೀಚರ್ ಗಳ ಜೊತೆಗೆ ಚರ್ಚೆ ಮಾಡಿ, ಚರ್ಚೆ ಜಗಳವಾಗಿ ಬದಲಾಗಿ, ಅಪ್ಪ ಶಾಲೆಗೆ ಭೇಟಿ ಕೊಟ್ಟು, ಟೀಚರ್ ಒಬ್ಬರ 'ego' ಗೆ ಭಾರೀ ಪೆಟ್ಟಾಗಿ ಅಕ್ಕ ಶಾಲೆಯನ್ನೇ ಬದಲಾಯಿಸಿದ್ದೂ ಇದೆ.
ಓದಿದ ಪುಸ್ತಕಗಳನ್ನು ವಿಶ್ಲೇಷಿಸುವುದು, ನಂಬಬಹುದೇ ಇಲ್ಲವೇ ಎಂದು ತರ್ಕ ಹಾಕುವುದು ಅಕ್ಕನ ಸ್ಪೆಷಾಲಿಟಿ. ಈಗಲೂ ಸಹ.
*****
ಅಕ್ಕ ಹಲವು ವಿಷಯಗಳಲ್ಲಿ ನನಗೆ ಗುರು. ಅದು, 'beautiful'ನ ಸ್ಪೆಲ್ಲಿಂಗ್ ಅನ್ನು 'bea-uti-ful' ಎಂದು ಬಿಡಿಸಿ ಮನದಟ್ಟು ಮಾಡಿಸುವುದರಲ್ಲಿರಬಹುದು, ಗಣಿತದ ಪ್ರಮೇಯಗಳನ್ನು ಬಿಡಿ ಸುವುದರಲ್ಲಿರಬಹುದು. ನನಗೆ ಯಾವುದು ಕಷ್ಟವಾಗಿರುವಂಥದ್ದು ಎನ್ನುವುದು ಅಕ್ಕನಿಗೆ ಬಲು ಬೇಗ ಅರ್ಥವಾಗುತ್ತಿತ್ತು ಅನಿಸುತ್ತದೆ. ಅಕ್ಕನ 'teaching method' ನನಗೆ ತುಂಬಾ ಹಿಡಿಸುತ್ತಿತ್ತು.
'ಸ್ವದೇಸ್' ಫಿಲಂ ಬಂದುದರಲ್ಲಿ ಹೊಸತು. 'ಪಲ್ ಪಲ್ ಹೈ ಭಾರೀ ಓ... ' ಹಾಡನ್ನು ಕೇಳುತ್ತಿದ್ದೆ. ಹಾಡು ಮುಗಿದ ಮೇಲೆ, 'ಚೆನ್ನಾಗಿದೆ ಹಾಡು; ಅಲ್ವಾ?' ಎಂದು ಪಕ್ಕದಲ್ಲೇ ಕೂತಿದ್ದ ಅಕ್ಕನಲ್ಲಿ ಕೇಳಿದೆ. 'ಹ್ಞೂ. ಮನ್ ಸೇ ರಾವನ್ ಜೋ ನಿಕಾಲೇ ರಾಮ್ ಉಸ್ ಕೇ ಮನ್ ಹೈ... -ಚೆನ್ನಾಗಿದೆ ಸಾಲು' ಎಂದಳು. ಆ ಸಾಲು ಎಲ್ಲಿ ಬಂತು ಎಂದು ಕೇಳಿಸಿಕೊಳ್ಳಲು ಮತ್ತೊಂದು ಬಾರಿ ಹಾಡು ಕೇಳಿಸಿಕೊಂಡಿದ್ದೆ.
*****
ಕೆಲವೊಂದು ಸಾರಿ ಅಕ್ಕನಿಂದಾಗಿ ನಾನು ಬಯ್ಯಿಸಿಕೊಂಡದ್ದೂ ಇದೆ. ಪ್ರೈಮರಿ ಶಾಲೆಯಲ್ಲಿ ನನ್ನ ಕಳ್ಳ ಬುದ್ಧಿಗಳನ್ನು ನೋಡಿದವರು 'ಇವನಂತೂ ಅಕ್ಕನ ಥರ ಆಗುವವನಲ್ಲ' ಅಂತ ಸೀಲ್ ಹಾಕಿದ್ದಿದೆ. ನನ್ನ ಕೆಟ್ಟ ಕೈ-ಬರಹವನ್ನು ನೋಡಿ 'ಅಕ್ಕನನ್ನು ನೋಡಿ ಸ್ವಲ್ಪ ಕಲಿ' ಎಂದು ಅಪ್ಪ-ಅಮ್ಮನೂ ಆಗಾಗ ಎಚ್ಚರಿಸುತ್ತಿದ್ದರು. ಅಕ್ಕ ಇವತ್ತಿನ ಕೆಲಸವನ್ನು ಇವತ್ತೇ ಮಾಡಿ ಮುಗಿಸುವವಳು. ನಾನು 'procrastination' ಕಲಾ ನಿಪುಣ. ಅಕ್ಕ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ಗರಿಷ್ಠ ಅಂಕ ಪಡೆದಾಗ 'ಮಧು, ನೀನೂ ನೋಡಿ ಕಲಿ' ಅಂತೆಲ್ಲಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಸ್ಕೂಲ್ ಟೀಚರ್. ಅಂತಹ ಬಹಳಷ್ಟು ಸಂದರ್ಭಗಳಲ್ಲಿ ನಿರೀಕ್ಷೆ ಠುಸ್ ಆಗಿದ್ದೇ ಜಾಸ್ತಿ.
ಬಹಳಷ್ಟು ಪ್ರಯತ್ನಗಳ ಬಳಿಕವೂ ನನ್ನ ಕೈ ಬರಹ ಇನ್ನೂ ಸುಧಾರಿಸಿಲ್ಲ. ಅಕ್ಕ ಪಿಯುಸಿಯಲ್ಲಿ ಜೀವಶಾಸ್ತ್ರ (Biology) ಆರಿಸಿಕೊಂಡಿದ್ದಳು. ಮೊದಲೇ ಕಾಗೆ ಕಾಲಿನ ಕೈ ಬರಹಕ್ಕೆ ಪ್ರಸಿದ್ಧನಾದ ನಾನು ಜೀವಶಾಸ್ತ್ರ ತೆಗೆದುಕೊಳ್ಳುವ ಕೆಲಸಕ್ಕೆ ಮಾತ್ರ ಹೋಗಲ್ಲಿಲ್ಲ. ಅಕ್ಕ ಪ್ರತಿ ದಿನವೂ ಶ್ರದ್ಧೆಯಿಂದ ಬಿಡಿಸುತ್ತಿದ್ದ ಜೀವಶಾಸ್ತ್ರದ ರೆಕಾರ್ಡುಗಳನ್ನು ನೋಡಿದಾಗ 'ನಾನು ಈ ವಿಷಯ ಆರಿಸಿಕೊಂಡರೆ ಖಂಡಿತಾ ಫೇಲ್ ಆಗುತ್ತೇನೆ' ಅನ್ನಿಸುತಿತ್ತು. ಅಕ್ಕನ ಪಿಯುಸಿ Biology ಮಾರ್ಕು ತೊಂಭತ್ತು ದಾಟಿತ್ತು.
*****
ಅಕ್ಕ ಮೂಲ ವಿಜ್ಞಾನವನ್ನು ಆರಿಸಿಕೊಂಡು ಭೌತಶಾಸ್ತ್ರ(Physics)ದಲ್ಲಿ ಎಂ.ಎಸ್ಸಿ ಮುಗಿಸಿದವಳು. ನಾನು ನನ್ನ ಇಂಜಿನಿಯರಿಂಗ್ ಜೀವನದುದ್ದಕ್ಕೂ ಅಕ್ಕನ ಪಾಠವನ್ನು ಮಿಸ್ ಮಾಡಿಕೊಂಡುಬಿಟ್ಟೆ. ಅಕ್ಕನೂ ಇಂಜಿನಿಯರಿಂಗ್ ಬಂದಿದ್ದರೆ ನಾನಂತೂ ಇನ್ನೂ ಚೆನ್ನಾಗಿ ಕಲಿಯಬಹುದಿತ್ತು ಅಂತ ಹಲವು ಬಾರಿ ಅನ್ನಿಸಿದ್ದಿದೆ.
ಅಕ್ಕ ತುಂಬಾ ಮುಂದುವರೆದಿದ್ದಾಳೆ. ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದಾಳೆ. ಖಂಡಿತವಾಗಿಯೂ ಚೆನ್ನಾಗೇ ಪಾಠ ಮಾಡುತ್ತಾಳೆ. ಕ್ವಾಂಟಮ್ ಸಿದ್ದಾಂತ, ಗುರುತ್ವಾಕರ್ಷಣೆ, ನ್ಯೂಕ್ಲಿಯರ್ ಫಿಸಿಕ್ಸ್ ಗಳಲ್ಲಿ ಅಕ್ಕನಿಗೆ ಅತೀವ ಆಸಕ್ತಿ.
ಇರಲಿ. ಇಲ್ಲಿಗೆ ಎರಡು ವರುಷದ ಹಿಂದೆ ಅಕ್ಕನ ಮದುವೆಯೂ ಆಗಿದೆ. ಅಕ್ಕ ಇದೀಗ ಒಂದು ಮುದ್ದು ಮಗುವಿನ ತಾಯಿಯಾಗಿದ್ದಾಳೆ. ಅಕ್ಕ ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾಳೆ. ಅವಳಿಗೆ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.