Sunday, November 1, 2015

ಕಾಳು ಮತ್ತು ಟೈಗರ್!

ಆ ದಿನ ಪದ್ಮುಂಜದ ನನ್ನ ಮನೆಯಿಂದ ಬಸ್ಸಿಗಾಗಿ ಹೊರಡುವಾಗ ಸ್ವಲ್ಪ ತಡವಾಗಿತ್ತು. ಸಿಗುತ್ತದೋ ಇಲ್ಲವೋ ಎಂಬ ತರಾತುರಿಯಲ್ಲೇ ಧಡಬಡನೆ ಮನೆಯಿಂದ ಕಾಲ್ಕಿತ್ತೆ. ಐದು ನಿಮಿಷ ಬಸ್ಸಿನ ಮಾರ್ಗದ ಬಳಿಗೆ ಓಡಿದವನು ನಿಂತದ್ದು ಬಸ್ಸಿನ ಒಳಗಡೆಯೇ. "ಎಂತದು ಬಟ್ರೆ, ಇವತ್ತು ಎದ್ದದ್ದು ತಡವಯ್ತಾ" ಎಂದು ಕಂಡಕ್ಟರ್ ಕೇಳಿದ. 'ಹೌದು' ಎಂದು ಚೂರು ಸುಧಾರಿಸಿಕೊಂಡು ಅಮ್ಮನಿಗೆ ಫೋನ್ ಮಾಡಿದೆ- "ಬಸ್ಸು ಸಿಕ್ಕಿತು" ಎಂದೆ. "ಗೊತ್ತಾಯ್ತು,ಟೈಗರ್ ವಾಪಸ್ ಬಂದ" ಎಂದರು ಅಮ್ಮ.
ಈ ನಮ್ಮ ನಾಯಿ ಟೈಗರ್ ವಾಪಸ್ ಮನೆಗೆ ಬಂದರೆ ಅಲ್ಲಿ ಬಸ್ಸು ಸಿಕ್ಕಿತೆಂದೇ ಅರ್ಥ. ಅಮ್ಮನಿಗೆ ಭಾರೀ ವಿಶ್ವಾಸ ಈ ನಾಯಿಯ ಬಗ್ಗೆ. ಅದು ನೂರು ಪ್ರತಿಶತ ಸತ್ಯ ಸಹ.
*****
ಟೈಗರ್. ನಮ್ಮ ಮನೆಯ ಸ್ಮಾರ್ಟ್ ಸಾಕು ಪ್ರಾಣಿ ನಾಯಿ. ಸಾವಿರದ ಒಂಭೈನೂರ ತೊಂಭತ್ತಾರರಲ್ಲಿ ಅಮ್ಮ ಅದನ್ನು ಬೆಳಾಲಿನ ನನ್ನ ಅಜ್ಜಿ ಮನೆಯಿಂದ ಚೀಲದಲ್ಲಿ ಹೊತ್ತು ತಂದಿದ್ದರು. ಮನೆಯ ಜಗಲಿಯಲ್ಲಿ ಕಾದು ನಿಂತಿದ್ದ ನನ್ನನು ತಂಗೀಸು ಚೀಲದ ಸಂದಿನಿಂದಲೇ ಮುಖ ಮಾತ್ರ ಹೊರಗೆ ಹಾಕಿ ಇಣುಕಿ ನೋಡಿದ್ದು- ನಾನು ಅವನನ್ನು ನೋಡಿದ ಮೊದಲ ನೆನಪು. ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಕೆಂಪು-ಹಳದಿ-ಬಿಳಿ ಮಿಶ್ರಿತ ಬಣ್ಣದ ಪುಟ್ಟ ಮರಿ. 'ಟೈಗರ್' ಎಂಬ ಹೆಸರು ಆ ಕ್ಷಣಕ್ಕೆ ನನ್ನ ಮತ್ತು ನನ್ನ ಅಕ್ಕನ ತಲೆಗೆ ಹೊಳೆದದ್ದು. ಎಲ್ಲರ ಒಪ್ಪಿಗೆಯೂ ಸಿಕ್ಕಿತ್ತು, ಕ್ಷಣ ಮಾತ್ರದಲ್ಲಿ ನಾಮಕರಣವಾಯಿತು. ಮುಂದಿನದ್ದು ಟೈಗರ್ ಮತ್ತು ನಮ್ಮ ಕುಟುಂಬದ ಸದಸ್ಯರ ನಡುವಿನ ಮಧುರವಾದ ಪ್ರೇಮ ಕಥೆ.
*****
ನಾಯಿ, ಬೆಕ್ಕುಗಳೆಂದರೆ ಅಪ್ಪನಿಗೂ ಪ್ರೀತಿ. (ಆದರೆ ಅಪ್ಪ ಕೋಪದಲ್ಲಿದ್ದ ಸಂದರ್ಭದಲ್ಲಿ ರೇಗಿ ಬಿಡುತ್ತಿದ್ದರು). ನಮ್ಮ ಮನೆಯ ಬೆಕ್ಕುಗಳನ್ನು ನಾಯಿಗಳೊಂದಿಗೆ ದೋಸ್ತಿ ಮಾಡಿಸುತ್ತಿದ್ದರು. "ನೀವು ನಾಯಿಯನ್ನು ಬೆಕ್ಕಿನ ತರಹ ಸಾಕುತ್ತಿದ್ದೀರಿ" ಎಂದು ಅಮ್ಮ ಒಮ್ಮೊಮ್ಮೆ ಅಪ್ಪನಿಗೆ ಹೇಳಿದ್ದೂ ಉಂಟು.
ಟೈಗರ್ ನಮ್ಮ ಮನೆಗೆ ಬರುವುದಕ್ಕೂ ಮೊದಲು 'ಕಾಳು' ಎಂಬ ಹೆಸರಿನ ಕರಿನಾಯಿ ಒಂದಿತ್ತು. ಪಾಪದ ನಾಯಿ. ಟೈಗರ್ ಬಂದ ದಿನಗಳಲ್ಲಿ ಆದರೆ ಮೇಲೆ ಸುಖಾ ಸುಮ್ಮನೆ ragging ಮಾಡುತ್ತಿತ್ತು ಕಾಳು. ಅಮ್ಮ ಹತ್ತಿರದ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಅಮ್ಮ ಅಂದರೆ ಕಾಳುವಿಗೆ ಭಾರೀ ಇಷ್ಟ . ರಾತ್ರಿ ನಾಯಿಗಳನ್ನು ಕಟ್ಟದೆ ಬಿಡುತ್ತಿದ್ದೆವು. ಕೆಲವೊಂದು ದಿವಸ ಅಮ್ಮ ಶಾಲೆಗೆ ಹೊರಡುವ ವೇಳೆಗೆ ಕಾಳು ಸಹ ಹೊರಟು ನಿಲ್ಲುತ್ತಿತ್ತು. ಕಟ್ಟಲು ಹೋದರೆ ತಪ್ಪಿಸಿಕೊಳ್ಳುತ್ತಿತ್ತು. ಶಾಲೆಯ ಆಫೀಸು ರೂಮಿನ ಹೊರಗೆ ಸಂಜೆಯವರೆಗೆ ಮಲಗುತ್ತಿತ್ತು. ಹೆಡ್ ಮಾಷ್ಟರ್ ಮನೆಯ ನಾಯಿ ಎಂದು ಶಾಲಾ ಮಕ್ಕಳೂ ಸಹ ನಾಯಿಯನ್ನು ಮುದ್ದಿಸುತ್ತಿದರು. ಒಂದು ಮಳೆಗಾಲದಲ್ಲಿ ಜೋರಾಗಿ ಮಳೆ ಬರುತ್ತಿರುವಾಗ ಅಮ್ಮನ ಆಫೀಸು ಕೋಣೆಯ ಒಳಗೂ ನುಗ್ಗಲು ಇಣುಕುತ್ತಿದ್ದ ಕಾಳುವನ್ನು ಕಂಡು ಅಮ್ಮ ಪೇಚಿಗೆ ಸಿಕ್ಕಿದ್ದರು. ಆ ದಿನ ಇನ್ಸ್ಪೆಕರ್ ಸಾಹೇಬರೂ ಶಾಲೆಗೆ ಬಂದಿದ್ದರಂತೆ!
ಬರ ಬರುತ್ತಾ ಕಾಳು ಮತ್ತು ಟೈಗರ್ ಸ್ನೇಹಿತರಾದರು. ತೋಟದ ಬಾಳೆ, ಏಳನೀರುಗಳನ್ನು ಕದಿಯಲು ಬರುತ್ತಿದ್ದ ಮಂಗಗಳನ್ನು ಓಡಿಸುವುದರಲ್ಲಿ, ಪಕ್ಕದ ಮನೆಯವರು ಸಮಯ ನೋಡಿ ನಮ್ಮ ತೋಟಕ್ಕೆ ಬಿಡುತ್ತಿದ್ದ ದನಗಳನ್ನು ಓಡಿಸುವುದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದರು. ಅಮ್ಮ ದೇವರ ಕೋಣೆಯಲ್ಲಿ ಶಂಖ ಓದಿದಾಗ ತಾವೂ 'ಊ~ ಊ~ ಊ'  ಎಂದು ಸ್ಪರ್ಧೆಯಲ್ಲಿ ಅರಚುತ್ತಿದ್ದುದನ್ನು ಮಾತ್ರ ಸಹಿಸಲಾಗುತ್ತಿರಲಿಲ್ಲ.
ಈ ನಾಯಿಗಳಿಗೆ ನಮ್ಮ ಜಾಗದ ಗಡಿ ನಿಖರವಾಗಿ ಗೊತ್ತಿತ್ತು ಅನ್ನಿಸುತ್ತದೆ. ಅದರ ಹೊರಗಡೆ ಇವು walk, jog ಹಾಗೂ 'ಇನ್ನಿತರ' ಕೆಲಸಗಳಿಗೆ ಹೋಗಿ ಬರುತ್ತಿದ್ದವಾದರೂ ಹೊರಗಡೆ ಹೋಗಿ ಸಾರ್ವಜನಿಕರಿಗೆ ಬೊಗಳಿದ್ದು, ಕಚ್ಚಿದ್ದು ಇಲ್ಲವೇ ಇಲ್ಲ.
*****

ಒಂದು ದಿನ ಬೆಳ್ಳಂಬೆಳಗೆ ಟೈಗರ್ ಕುಯ್-ಕುಯ್-ಕುಯ್ ಎಂದು ಜೋರಾಗಿ ಅರಚುತ್ತಾ ಬಂತು. ನೋಡಿದರೆ ಕಣ್ಣಿನ ಬಳಿ ಮುಖದ ಒಳಗೆ ಹೊಕ್ಕಿದ್ದ ಎರಡು ಮುಳ್ಳುಗಳು. ಮುಳ್ಳು ಹಂದಿಯ ಮುಳ್ಳುಗಳು! ಕಾಳು ಕೂಡ ಬೊಗಳಿಕೊಂಡು ಬಂದ; ಅವನಿಗೇನೂ ಆಗಿರಲಿಲ್ಲ. ಈ ನಾಯಿಗಳು ಹೊರಗಿನ ಇತರ ಹಲವುಕೆಲವು ನಾಯಿಗಳ ಸಹಯೋಗದೊಂದಿಗೆ, ನಮ್ಮ ಗೇರು ಬೀಜದ ಮರವೊಂದರ ಅಡಿಯಲ್ಲಿ ಮುಳ್ಳು ಹಂದಿಯೊಂದನ್ನು ಕೊಂದು ಹಾಕಿದ್ದವು. ಗೊಳೋ ಎಂದು ಅಳುತ್ತಿದ್ದ ಟೈಗರ್ ಮುಖವನ್ನು ಬಿಗಿ ಹಿಡಿದು, ಅಪ್ಪಯ್ಯ ಆ ಮುಳ್ಳುಗಳನ್ನು ಎಳೆದು ಹೊರ ತೆಗೆದಿದ್ದರು. ಟೈಗರ್ ನಿರಾಳವಾಗಿದ್ದ. ಸುದ್ದಿ ಊರೆಲ್ಲ ಹಬ್ಬಿ ಜನ ಬಂದು ಸೇರಿ ಆ ಸತ್ತ ಮುಳ್ಳು ಹಂದಿಗೂ ಸರಿಯಾಗಿ ವೈಕುಂಠದ ದಾರಿ ತೋರಿಸಿದ್ದರು.
ನನ್ನ ಪಾಲಿಗಂತೂ ಟೈಗರ್ ಹೀರೋ ಆಗಿದ್ದ!

ಸಾವಿರದ ಒಂಭೈನೂರ ತೊಂಭತ್ತೆಂಟು. ಕಾಳು ಅಜ್ಜ ಆಗುತ್ತಿದ್ದ. ಕೊನೆ ಕ್ಷಣಗಳನ್ನು ಎಣಿಸುತ್ತಿದ್ದ. ಆತನ ಮೂರು ಹೊತ್ತಿನ ಊಟವನ್ನೂ ಅಮ್ಮ ಸರಿಯಾಗಿ ನುಜ್ಜಿ ಪುಡಿಮಾಡಿ, ಮೆದುಮಾಡಿ ಕೊಡುತ್ತಿದ್ದರು. ಹಲ್ಲಿಲ್ಲದ ಕಾಳುವಿಗೆ ಕೂಳು ತಿನ್ನುವುದು ಕಷ್ಟವಾಗುತ್ತಿತ್ತು. ಆಗಿನ್ನೂ ಮೂರು-ಮೂರೂವರೆ ವರ್ಷದ ಟೈಗರ್ ಕೂಡ, ತನ್ನ ಜೊತೆ ಆಡಲು, ಒಡಲು ಕಾಳು ಬರುತ್ತಿಲ್ಲ ಎಂದು ಬೇಸರಗೊಳ್ಳುತ್ತಿದ್ದ. ಒಂದು ದಿವಸ, ಹೆಚ್ಚು ನರಳದೆ ಕಾಳು ಸತ್ತ. ಬೇಸರದಿಂದ ಅವನನ್ನು ಮಣ್ಣು ಮಾಡಿದ್ದೆವು.
ಕಾಳು ಸತ್ತ ಆ ವಾರ ಊಟ ಬಿಟ್ಟಿದ್ದ ಟೈಗರ್.
*****
ಕೆಲವು ದಿನ ಅಂತರ್ಮುಖಿಯಾಗಿದ್ದ ಟೈಗರ್ ನಿಧಾನವಾಗಿ ಚೇತರಿಸಿಕೊಂಡ. ಮಂಗ, ದನ ಓಡಿಸುವ ವಿಷಯದಲ್ಲಿ ಏಕಾಂಗಿಯಾಗಿ ಹೋರಾಡಲಾರಂಭಿಸಿ ಯಶಸ್ವಿಯಾಗತೊಡಗಿದ. ಹಂದಿ ಮುಳ್ಳಿನ ಗುರುತು ಈಗ ಮುಖದಲ್ಲಿ ಮಚ್ಚೆಯ ತರಹ ಕಾಣುತ್ತಿತ್ತು. "ಬಟ್ರೆನ ಇಲ್ಲಡೆಡ್ ಕಪ್ಪು ಮಚ್ಚೆದ ಒಂಜಿ ನಾಯಿ ಉಂಡು. ಕಟ್ಟುದೆರಾ ಕೇಂಡ್ದು ಪೋಲೆ" (ಭಟ್ಟರ ಮನೆಯಲ್ಲಿ ಕಪ್ಪು ಮಚ್ಚೆಯ ನಾಯಿ ಉಂಟು. ಕಟ್ಟಿದ್ದಾರಾ ಅಂತ ವಿಚಾರಿಸಿ ಹೋಗಿ) ಅಂತ ಹೊಸದಾಗಿ ಬಂದು ಮನೆಗೆ ದಾರಿ ಕೇಳಿದವರಿಗೆ ನೆರೆಕರೆಯವರು ಎಚ್ಚರಿಸುತ್ತಿದರಂತೆ. ನಾಯಿಯ ಬಗ್ಗೆ ಸ್ವಲ್ಪ ಹೆದರಿಕೆ ಇದ್ದರೆ ಒಳ್ಳೆಯದು ಎಂದು ಅಪ್ಪ ಹೇಳುತ್ತಿದ್ದರು.
*****
ನಾನು ಪಿ.ಯು.ಸಿ ಮುಗಿಸುವ ಹೊತ್ತಿಗೆ ಟೈಗರ್ ಮುದುಕನಾಗಿದ್ದ. ಇಪ್ಪತ್ತು ವರುಷಗಳ ಯುವ ಜೀವನದ ಬಳಿಕ. ನಾನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದೆನಷ್ಟೇ. "ಟೈಗರ್ ಆಗಾಗ ಸುಮ್ಮನೆ, ವಿಷಯವಿಲ್ಲದೇ ಕುಯ್ ಅನ್ನುತ್ತದೆ" ಎಂದು ಅಮ್ಮ ಅನ್ನುತ್ತಿದ್ದರು. ಅಕ್ಕ ಮನೆ ಬಿಟ್ಟು ಮಂಗಳೂರು ವಿಶ್ವವಿದ್ಯಾಲಯ ಸೇರಿಕೊಂಡಾಗಲೂ "ಯಾರೋ ಮನೆಯಲ್ಲಿಲ್ಲ" ಎಂದು ಬೇಸರಗೊಂಡಿತ್ತಂತೆ. ತಿಂಗಳಿಗೊಂದು ಸಾರಿ ನಾನು ಮನೆಗೆ ಹೋದಾಗಲಂತೂ, ಟೈಗರ್ ಎರಡೂ ಕೈಗಳನ್ನು ಎತ್ತಿ ಸಂತಸ ಪಡುತ್ತಿತ್ತು. ನೆಕ್ಕಿ ಮುದ್ದಿಸಲು ಬರುತ್ತಿತ್ತು.
ಟೈಗರ್ ಇನ್ನು ಹೆಚ್ಚು ದಿವಸ ಬದುಕಲಾರದು ಎಂದು ಅಪ್ಪ ಒಂದುದಿನ ಫೋನ್ ಮಾಡಿ ಹೇಳಿದರು. ತುಂಬಾ ಬೇಸರಗೊಂಡೆ. ಆದರೆ ಅದಕ್ಕೂ ಹೆಚ್ಚು ಬೇಸರವಾದದ್ದು ಅದು ಅಸುನೀಗಿದ ರೀತಿ. ಜೋರು ಮಳೆ ಬರುತ್ತಿದ್ದ ಒಂದು ದಿವಸ, ಅಪ್ಪನೂ ಅಮ್ಮನೂ ಮನೆಯಲ್ಲಿರದ ಆ ದಿವಸ- ಕೆಲ ದಿನಗಳಿಂದ ಟೈಗರ್ ನನ್ನು ಕಟ್ಟದೇ ಬಿಟ್ಟಿದ್ದರಂತೆ- ಅಪ್ಪ ಪೇಟೆಯಿಂದ ವಾಪಸ್ ಬರುವಷ್ಟರಲ್ಲಿ ಮನೆಯ ಮಾಡಿನ ಧಾರೆ ನೀರು ಬೀಳುವ ಜಾಗದಲ್ಲಿ ಮಲಗಿ ಬಿದ್ದಿತ್ತಂತೆ. ಸಾಯುವ ಕ್ಷಣ ಯಾರೂ ಇರಲಿಲ್ಲ ಎಂದು ಅಪ್ಪನೂ ಅಮ್ಮನೂ ಮರುಗಿದರು.
ನಾನು ಕೆಲ ದಿನಗಳ ಬಳಿಕ ಮೈಸೂರಿಂದ ರಾತ್ರಿ ಬಸ್ ಏರಿ, ಮನೆಗೆ ಬರುವಾಗ ಸ್ವಾಗತಿಸಲು ಬರದ ನಾಯಿಯನ್ನು ನೆನೆದು ಒಂದು ಕ್ಷಣಕ್ಕೆ ಕಣ್ಣುಗಳು ತೇವವಾದವು. ನಿಧಾನಕ್ಕೆ ಸುಧಾರಿಸಿಕೊಂಡೆ.
ಅಂದ ಹಾಗೆ, ಈ ಕಾಳು ಮತ್ತು ಟೈಗರ್ ಎರಡೂ ಸಾಮಾನ್ಯ ತಳಿಯ ನಾಯಿಗಳು.ಸಾಮಾನ್ಯ ಭಾಷೆಯಲ್ಲಿ-ಕಾಟು ನಾಯಿಗಳು.  ಹೈಬ್ರೀಡ್ ಜಾತಿ ನಾಯಿಯಂತೆ ಇದ್ದ ಇವುಗಳ ಪ್ರೀತಿ, ಪ್ರಾಮಾಣಿಕತೆ, ಧೈರ್ಯ, ಬುದ್ಧಿವಂತಿಕೆ- ಅವನ್ನು ಮನಸ್ಸಿಗೆ ಹತ್ತಿರ ಮಾಡಿದ್ದವು.
*****
ಸದ್ಯಕ್ಕೆ ಮತ್ತೊಂದು ನಾಯಿಯಿದೆ. ರೂಬಿ. ಇರಲಿ, ಮುಂದೆ ಬರೆಯೋಣ!
*****

1 comment:

  1. tumba olleya padagalanna balasidddiya..nanna maneyallu eredu nayigaliddavu..ega avilla...manasige tumba hattiravada kathe idu..tumba chennagi varnane madiddiya.
    -manu

    ReplyDelete

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...