Tuesday, March 22, 2022

ಕನಸಿನ ಕೃಷಿ



ನಿನ್ನೆ ನೆಟ್ಟ ಕನಸುಗಳು 
ಇಂದು ನೀರನ್ನು ಅರಸುತ್ತಿವೆ,
ಮನವೆಂಬ ಬಾವಿ ಆರಿದೆ. 
ದಿನ ನೂಕುತ್ತಿವೆ ಮಳೆಯ ನಿರೀಕ್ಷೆಯಲ್ಲಿ. 

ಮಳೆಗಾಲ ಬರುತಲಿದೆ. 
ನೆಟ್ಟ ಗಿಡಗಳು ಬಾಡಲು,
ಬರಿಯ ಸಿಡಿಲ ಸದ್ದಷ್ಟೇ ಕೇಳಲು,
ಕನಸು ಕೇಳುತಿದೆ ಮನವ-
ನೀರಿಲ್ಲದೂರಲ್ಲಿ ನನ್ನ ನೆಟ್ಟದ್ದು ಏಕೆ?

ಅದಕೆ ಉತ್ತರವಿಲ್ಲ 
ಮನದ ನೀರವ ಮೌನ 
ಕನಸು ಮುದುಡಲು,
ಮನವು ಆಗಸವನ್ನೇ ನೋಡುತಿದೆ. 
ಇಲ್ಲ, ಇನ್ನೂ ಬರೀ ಸಿಡಿಲು
ಎಲ್ಲೋ ಚಂಡಮಾರುತವಂತೆ... 
*******

ಅದೋ! ಬಂದಿದೆ ಧೋ-ಧೋ ಮಳೆ! 
ಕನಸುಗಳಿಗೆ ಚಿಗುರು ಬಂದಿದೆ!
ಬರಿದಾದ ಬಾವಿ ತುಳುಕಿದೆ!
ನೆಟ್ಟದ್ದು ಕೆಡದು ಮನದ ಬಾವಿ ತುಂಬಿರೆ. 

ಹೂವಾಗಿ ಹಣ್ಣಾಗಿ 
ನೆರಳಾಗಿ ತಂಪಾಗಿ 
ಕನಸ ಬೇರದು ಇನ್ನಷ್ಟು ಕಡೆ ಟಿಸಿದು 
ಹಲವು ಮರಿಗನಸುಗಳು ಹುಟ್ಟಿವೆ ಮಳೆಗೆ. 
*****
  
ಕನಸು ಕೃಷಿ ಕ್ಷೇತ್ರದಲಿ 
ತಾಳ್ವಿಕೆಯ ಬಲ ಬೇಕು 
ನನಸೆಂಬ ಫಸಲು ಮುದ್ದಾಗಿ ಬರಲು 
ಮನದಾಳದ ಮಣ್ಣು ಸ್ಥಿರವಾಗಿ ದೃಢವಾಗಿ 
ಆಗಸವ ದಿಟ್ಟಿಸಲು, ಕನಸ ಸಂತೈಸಲು,
ಕನಸಿಗೆಲ್ಲಿಯ ಚಿಂತೆ ಬೇಸಿಗೆಯ ಧಗೆಗೆ!


No comments:

Post a Comment

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...