Sunday, April 9, 2017

ನನ್ನ ನೆಚ್ಚಿನ ಪುಷ್ಪಾವತಿ ಮೇಡಂಗೊಂದು ಅಕ್ಷರ ನಮನ

"ಏನು ಮಧುಸೂದನ, ಪಾಠ ಮಾಡಿದ್ದು ಅರ್ಥ ಆಯಿತೋ ಇಲ್ಲ್ವೋ ?"- ಅಂತ ನನ್ನ ನೆಚ್ಚಿನ ವಿಜ್ಞಾನ ಶಿಕ್ಷಕಿ ಪುಷ್ಪಾವತಿ ಮೇಡಂ ಹೇಳಿದ್ದು ಇನ್ನೂ ನನ್ನ ಕಿವಿಗೆ ಕೇಳುತ್ತಾ ಇದೆ. ಮೊನ್ನೆ ನಾನು ಆಫೀಸಿನಲ್ಲಿ ಇದ್ದಾಗ ನನ್ನ ಅಮ್ಮ ಫೋನ್ ಕರೆಮಾಡಿ 'ಪುಷ್ಪಾವತಿ ಮೇಡಂ ಇನ್ನಿಲ್ಲ' ಅಂದಾಗ ನನಗೆ ನಂಬಲಾಗಲಿಲ್ಲ. ಗದ್ಗದಿತನಾದೆ. ಪಕ್ಕದಲ್ಲೇ ಇದ್ದ ಮೀಟಿಂಗ್ ರೂಮಿಗೆ ಹೊಕ್ಕು ಬಾಗಿಲು ಹಾಕಿಕೊಂಡು, ಒತ್ತಿ ಬರುತ್ತಿದ್ದ ಅಳುವನ್ನು ತಡೆಯಲು ಯತ್ನಿಸಿದೆ. 'ಇಲ್ಲ, ಸಾಧ್ಯವೇ ಇಲ್ಲ; ನನ್ನ ಅತ್ಯಂತ ನೆಚ್ಚಿನ ಮೇಡಂ ಇನ್ನೂ ಇದ್ದಾರೆ'- ಅನ್ನುತ್ತಿತ್ತು ನನ್ನ ಮನಸ್ಸು.
******
ಪುಷ್ಪಾವತಿ ಮೇಡಂ. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೇವರಿಟ್ ಟೀಚರ್. ನಾನು ಓದುತ್ತಿದ್ದ ಸಮಯದಲ್ಲಿ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಪಾಠ ಮಾಡುತ್ತಿದ್ದವರಲ್ಲಿ ಒಬ್ಬರು.  ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡವರು. ಯೋಚನಾ ಸ್ಪಷ್ಟತೆ, ಅದ್ಭುತ ವಾಕ್ಪಟುತ್ವ, ಭಾಷಾ ಪ್ರೌಢಿಮೆ, ವಿಜ್ಞಾನದ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸುವ ಪರಿ, ಅಚಲ ಆತ್ಮ ವಿಶ್ವಾಸ, ಮುಖದಲ್ಲಿ ಸದಾ ಮುಗುಳ್ನಗೆ, ಕೈಯಲ್ಲೊಂದು ಚಾಕ್ ಪೀಸ್, ಕತ್ತೆತ್ತಿ ಕೊನೆಯ ಬೆಂಚಿನವರನ್ನು ಸೂಕ್ಷ್ಮವಾಗಿ ಗಮನಿಸುವ ಪರಿ, ಗಂಧಕ-ರಂಜಕಗಳ ಸಮೀಕರಣವನ್ನು ಮನರಂಜಕವಾಗಿ ಪೂರ್ಣಗೊಳಿಸುವ ನೈಪುಣ್ಯ,... ಅಬ್ಬಾ, ಪುಷ್ಪಾವತಿ ಮೇಡಂಗೆ ಪುಷ್ಪಾವತಿ ಮೇಡಂ ಮಾತ್ರ ಸಾಟಿ. ಮೇಡಂ ಪಾಠ ಅರ್ಥ ಆಗ್ತಾ ಇಲ್ಲ ಎಂದು ಇಲ್ಲಿಯವರೆಗೆ ಅಂದವರೇ ಇಲ್ಲವೇನೋ.
ಹೈಸ್ಕೂಲ್ ಸೇರುವ ಹೊತ್ತಿಗೆ, 'ಮುಂದೆ ಪಿ ಯು ಕಾಲೇಜಿನಲ್ಲಿ ಕಲಾ ವಿಭಾಗ ತೆಗೆದುಕೊಂಡು ಸಾಹಿತ್ಯ ಸಂಶೋಧನೆ ಮಾಡಬೇಕು' ಎಂದುಕೊಂಡಿದ್ದ ನಾನು ಮುಂದೆ ವಿಜ್ಞಾನ ವಿದ್ಯಾರ್ಥಿಯಾಗುವಂತೆ ಮಾಡಿ, ನನ್ನ ಮುಂದಿನ ಜೀವನದ ಯಶಸ್ಸಿಗೆ ಮುಖ್ಯ ಕಾರಣ ಪುಷ್ಪವತಿ ಮೇಡಂ.
*****






*****
ನಾನು ಎಂಟನೇ ತರಗತಿಯಲ್ಲಿರುವಾಗ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆ. ಪುಷ್ಪಾವತಿ ಮೇಡಂ ತಯಾರಿ ಮಾಡಿದ ಪೇಪರ್  'ಜೈವಿಕ ತಂತ್ರಜ್ಞಾನ'ದ ಮೇಲಿತ್ತು. (ಅಲ್ಲಿಯವರೆಗೆ ಬರೀ ಭಾಷಣ ಮಾತ್ರ ಮಾಡುತ್ತಿದ್ದೆ). ಗೋಷ್ಠಿಯಲ್ಲಿ ನನ್ನ 'paper presentation' ಮುಗಿದು ಕೊನೆಗೆ ತೀರ್ಪುಗಾರರು viva ಪ್ರಶ್ನೆಗಳನ್ನು ಕೇಳಿದಾಗ ಪೆಚ್ಚಾಗಿ ಪುಷ್ಪಾವತಿ ಮೇಡಂ ಮುಖವನ್ನು ನೋಡುತ್ತಿದ್ದೆ. ನನ್ನ ಕೆಟ್ಟ ಪ್ರದರ್ಶನದಿಂದ ಬೇಸರಗೊಂಡಿದ್ದರು ಮೇಡಂ. ಮಂಗಳೂರಿನಿಂದ ಉಪ್ಪಿನಂಗಡಿವರೆಗಿನ ಬಸ್ಸು ಪ್ರಯಾಣದಲ್ಲಿ ಪೂರ್ತಿ ಕ್ಲಾಸ್ ತೆಗೆದುಕೊಂಡಿದ್ದರು. ಮುಂದಿನ ವರುಷದ ವಿಚಾರ ಸಂಕಿರಣದಲ್ಲಿ ನನ್ನ ವಿಚಾರ ಮಂಡನೆಯನ್ನು ಕಂಡು ತುಂಬಾ ಖುಷಿ ಪಟ್ಟಿದ್ದರು. ಪಾಠದ ಜೊತೆಗೆ ವಿಜ್ಞಾನ - ಸಾಹಿತ್ಯಕ ಚಟುವಟಿಕೆಗಳಿಗೂ ಸದಾ ಪ್ರೋತ್ಸಾಹಿಸುತ್ತಿದ್ದರು ಪುಷ್ಪಾವತಿ ಮೇಡಂ. ಅಂತರ್-ಶಾಲಾ ಸ್ಪರ್ಧಾ ಚಟುವಟಿಗೆಗಳು, ವಿಜ್ಞಾನ ಪ್ರಯೋಗ - ಪ್ರದರ್ಶನಗಳು ಪುತ್ತೂರಿನಲ್ಲಿ ನಡೆಯುತ್ತಿದ್ದಾಗ ನಾನೂ ಕೆಲವು ಬಾರಿ ಅವರ ಮನೆಯಲ್ಲಿ ಚಹಾ ತಿಂಡಿ ಮಾಡಿ 'rehearsal' ಮಾಡಿದ್ದೂ ಇದೆ.
*****
ಪುಷ್ಪಾವತಿ ಮೇಡಂ ಪಾಠದ ಹಲವು ಸಾಲುಗಳು ನನ್ನ ಮನದಲ್ಲಿ ಇಂದಿಗೂ ಅಚ್ಚಾಗಿವೆ. ವಿಜ್ಞಾನದ ಸಾಲುಗಳನ್ನು ಮನದಲ್ಲಿ ಎಂದಿಗೂ ಅಳಿಯದಂತೆ ಅಚ್ಚು ಹಾಕುವುದು ಸುಲಭದ ಮಾತಲ್ಲ. 'ರಾಸಾಯನಿಕ ಕ್ರಿಯಾವರ್ಧಕಗಳು' (catalysts) ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸುತ್ತಾ, "ನಾವು ಶಿಕ್ಷಕರಾಗಿ ನಿಮ್ಮ ವಿದ್ಯಾರ್ಜನೆಯ ವೇಗವನ್ನು ಹೆಚ್ಚಿಸಬಹುದಷ್ಟೇ. ಪರೀಕ್ಷೆ ಬರೆಯುವುದು ನಿಮ್ಮ ಸ್ವಂತ ಬುದ್ಧಿವಂತಿಕೆಯಲ್ಲಿ. ನಾವು ಕ್ರಿಯಾವರ್ಧಕಗಳು; ಅಷ್ಟೇ" ಅಂದಿದ್ದರು. ಜೀವಶಾಸ್ತ್ರ , ರಸಾಯನ ಶಾಸ್ತ್ರಗಳ ಮೂಲ ಅಂಶಗಳನ್ನು, ಹಲವು 'definition'ಗಳ ವಿಶೇಷತೆಯನ್ನು ಒಗಟುಗಳ ಮೂಲಕ ವಿವರಿಸುತ್ತಿದ್ದರು.
ನಾನು ತೀರಾ ಇತ್ತೀಚಿಗೆ ನನ್ನ ಶಾಲೆಗೆ ಭೇಟಿ ಕೊಟ್ಟಿದ್ದೆ. ಬೆಂಗಳೂರಿನಲ್ಲಿ ನಾನು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಉತ್ಸಾಹದಿಂದ ಮೇಡಂ ಜೊತೆಗೆ ಮಾತನಾಡಿದ್ದೆ. ಐಟಿ ಕ್ಷೇತ್ರದ ಬೆಳವಣಿಗೆಗಳನ್ನು ವಿವರಿಸುತ್ತಿದ್ದೆ, ನನಗೆ ತಿಳಿದ ಮಟ್ಟಿಗೆ. ಆ ದಿನ ಸಂಜೆ ವೇಳೆಗೆ ಪುಷ್ಪಾವತಿ ಮೇಡಂರ ದೂರವಾಣಿ ಕರೆ ನನಗೆ ಬಂದಿತ್ತು. "ಮಧುಸೂದನ, ಆ Network Elements ಅಂದ್ಯಲ್ಲ, ಅದನ್ನು ಹೇಗೆ ಮ್ಯಾನೇಜ್ ಮಾಡ್ತೀರಿ? ಸ್ವಲ್ಪ ಹೇಳ್ತೀಯ?" ಎಂದು ಕೇಳಿದ್ದರು. ಮೇಡಂ ಅಂದರೆ ಹಾಗೆ. 'ಕಲಿಯುವುದು ಎಲ್ಲರಿಂದಲೂ ಇದೆ' ಎಂದಿದ್ದರು.
*****

ನನ್ನ ನೆಚ್ಚಿನ ಪುಷ್ಪಾವತಿ ಮೇಡಂ,

ಹತ್ತನೇ ತರಗತಿಯಲ್ಲಿ ಪಾಠ ಮಾಡುತ್ತಾ ಒಂದು ಸಾರಿ ನೀವು "ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಅಮೆರಿಕನ್ನರಿಗಿಂತ ಇಪ್ಪತ್ತೈದು ವರುಷ ಹಿಂದೆ ಇದ್ದೇವೆ" ಅಂದಿದ್ದಿರಿ. ಮೊನ್ನೆ ಮಾತನಾಡಿದಾಗ 'ನಾವು ಕಲಿಯುವುದು ಬಹಳಷ್ಟಿದೆ' ಅಂದಿದ್ದಿರಿ. ನಿಮ್ಮಿಂದ ಕಲಿತುಕೊಳ್ಳುವುದು ಬಹಳಷ್ಟಿತ್ತು.
ಸದಾ ನಗುಮೊಗದಿಂದ ಸಮೀಕರಿಸುತ್ತಿದ್ದ ನಿಮ್ಮ ಸಮೀಕರಣಗಳು ಅರ್ಧದಲ್ಲಿ ಉಳಿದಿವೆ. ಹಲವು ಒಗಟುಗಳು ಉತ್ತರವಿಲ್ಲದೆ ಉಳಿದಿವೆ. ಡಾರ್ವಿನ್ನನ ಸಿದ್ಧಾಂತಗಳ ಬಗೆಗಿನ ನಿಮ್ಮ ಅದ್ಭುತ ಕತೆಗಳನ್ನು ಇನ್ನೂ ಕೇಳಬೇಕೆನಿಸಿದೆ.
ನೀವ್ಯಾಕೆ ಮೇಡಂ ಇಷ್ಟು ಬೇಗ ಪಾಠ ನಿಲ್ಲಿಸಿದಿರಿ?
****

Sunday, November 1, 2015

ಕಾಳು ಮತ್ತು ಟೈಗರ್!

ಆ ದಿನ ಪದ್ಮುಂಜದ ನನ್ನ ಮನೆಯಿಂದ ಬಸ್ಸಿಗಾಗಿ ಹೊರಡುವಾಗ ಸ್ವಲ್ಪ ತಡವಾಗಿತ್ತು. ಸಿಗುತ್ತದೋ ಇಲ್ಲವೋ ಎಂಬ ತರಾತುರಿಯಲ್ಲೇ ಧಡಬಡನೆ ಮನೆಯಿಂದ ಕಾಲ್ಕಿತ್ತೆ. ಐದು ನಿಮಿಷ ಬಸ್ಸಿನ ಮಾರ್ಗದ ಬಳಿಗೆ ಓಡಿದವನು ನಿಂತದ್ದು ಬಸ್ಸಿನ ಒಳಗಡೆಯೇ. "ಎಂತದು ಬಟ್ರೆ, ಇವತ್ತು ಎದ್ದದ್ದು ತಡವಯ್ತಾ" ಎಂದು ಕಂಡಕ್ಟರ್ ಕೇಳಿದ. 'ಹೌದು' ಎಂದು ಚೂರು ಸುಧಾರಿಸಿಕೊಂಡು ಅಮ್ಮನಿಗೆ ಫೋನ್ ಮಾಡಿದೆ- "ಬಸ್ಸು ಸಿಕ್ಕಿತು" ಎಂದೆ. "ಗೊತ್ತಾಯ್ತು,ಟೈಗರ್ ವಾಪಸ್ ಬಂದ" ಎಂದರು ಅಮ್ಮ.
ಈ ನಮ್ಮ ನಾಯಿ ಟೈಗರ್ ವಾಪಸ್ ಮನೆಗೆ ಬಂದರೆ ಅಲ್ಲಿ ಬಸ್ಸು ಸಿಕ್ಕಿತೆಂದೇ ಅರ್ಥ. ಅಮ್ಮನಿಗೆ ಭಾರೀ ವಿಶ್ವಾಸ ಈ ನಾಯಿಯ ಬಗ್ಗೆ. ಅದು ನೂರು ಪ್ರತಿಶತ ಸತ್ಯ ಸಹ.
*****
ಟೈಗರ್. ನಮ್ಮ ಮನೆಯ ಸ್ಮಾರ್ಟ್ ಸಾಕು ಪ್ರಾಣಿ ನಾಯಿ. ಸಾವಿರದ ಒಂಭೈನೂರ ತೊಂಭತ್ತಾರರಲ್ಲಿ ಅಮ್ಮ ಅದನ್ನು ಬೆಳಾಲಿನ ನನ್ನ ಅಜ್ಜಿ ಮನೆಯಿಂದ ಚೀಲದಲ್ಲಿ ಹೊತ್ತು ತಂದಿದ್ದರು. ಮನೆಯ ಜಗಲಿಯಲ್ಲಿ ಕಾದು ನಿಂತಿದ್ದ ನನ್ನನು ತಂಗೀಸು ಚೀಲದ ಸಂದಿನಿಂದಲೇ ಮುಖ ಮಾತ್ರ ಹೊರಗೆ ಹಾಕಿ ಇಣುಕಿ ನೋಡಿದ್ದು- ನಾನು ಅವನನ್ನು ನೋಡಿದ ಮೊದಲ ನೆನಪು. ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಕೆಂಪು-ಹಳದಿ-ಬಿಳಿ ಮಿಶ್ರಿತ ಬಣ್ಣದ ಪುಟ್ಟ ಮರಿ. 'ಟೈಗರ್' ಎಂಬ ಹೆಸರು ಆ ಕ್ಷಣಕ್ಕೆ ನನ್ನ ಮತ್ತು ನನ್ನ ಅಕ್ಕನ ತಲೆಗೆ ಹೊಳೆದದ್ದು. ಎಲ್ಲರ ಒಪ್ಪಿಗೆಯೂ ಸಿಕ್ಕಿತ್ತು, ಕ್ಷಣ ಮಾತ್ರದಲ್ಲಿ ನಾಮಕರಣವಾಯಿತು. ಮುಂದಿನದ್ದು ಟೈಗರ್ ಮತ್ತು ನಮ್ಮ ಕುಟುಂಬದ ಸದಸ್ಯರ ನಡುವಿನ ಮಧುರವಾದ ಪ್ರೇಮ ಕಥೆ.
*****
ನಾಯಿ, ಬೆಕ್ಕುಗಳೆಂದರೆ ಅಪ್ಪನಿಗೂ ಪ್ರೀತಿ. (ಆದರೆ ಅಪ್ಪ ಕೋಪದಲ್ಲಿದ್ದ ಸಂದರ್ಭದಲ್ಲಿ ರೇಗಿ ಬಿಡುತ್ತಿದ್ದರು). ನಮ್ಮ ಮನೆಯ ಬೆಕ್ಕುಗಳನ್ನು ನಾಯಿಗಳೊಂದಿಗೆ ದೋಸ್ತಿ ಮಾಡಿಸುತ್ತಿದ್ದರು. "ನೀವು ನಾಯಿಯನ್ನು ಬೆಕ್ಕಿನ ತರಹ ಸಾಕುತ್ತಿದ್ದೀರಿ" ಎಂದು ಅಮ್ಮ ಒಮ್ಮೊಮ್ಮೆ ಅಪ್ಪನಿಗೆ ಹೇಳಿದ್ದೂ ಉಂಟು.
ಟೈಗರ್ ನಮ್ಮ ಮನೆಗೆ ಬರುವುದಕ್ಕೂ ಮೊದಲು 'ಕಾಳು' ಎಂಬ ಹೆಸರಿನ ಕರಿನಾಯಿ ಒಂದಿತ್ತು. ಪಾಪದ ನಾಯಿ. ಟೈಗರ್ ಬಂದ ದಿನಗಳಲ್ಲಿ ಆದರೆ ಮೇಲೆ ಸುಖಾ ಸುಮ್ಮನೆ ragging ಮಾಡುತ್ತಿತ್ತು ಕಾಳು. ಅಮ್ಮ ಹತ್ತಿರದ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಅಮ್ಮ ಅಂದರೆ ಕಾಳುವಿಗೆ ಭಾರೀ ಇಷ್ಟ . ರಾತ್ರಿ ನಾಯಿಗಳನ್ನು ಕಟ್ಟದೆ ಬಿಡುತ್ತಿದ್ದೆವು. ಕೆಲವೊಂದು ದಿವಸ ಅಮ್ಮ ಶಾಲೆಗೆ ಹೊರಡುವ ವೇಳೆಗೆ ಕಾಳು ಸಹ ಹೊರಟು ನಿಲ್ಲುತ್ತಿತ್ತು. ಕಟ್ಟಲು ಹೋದರೆ ತಪ್ಪಿಸಿಕೊಳ್ಳುತ್ತಿತ್ತು. ಶಾಲೆಯ ಆಫೀಸು ರೂಮಿನ ಹೊರಗೆ ಸಂಜೆಯವರೆಗೆ ಮಲಗುತ್ತಿತ್ತು. ಹೆಡ್ ಮಾಷ್ಟರ್ ಮನೆಯ ನಾಯಿ ಎಂದು ಶಾಲಾ ಮಕ್ಕಳೂ ಸಹ ನಾಯಿಯನ್ನು ಮುದ್ದಿಸುತ್ತಿದರು. ಒಂದು ಮಳೆಗಾಲದಲ್ಲಿ ಜೋರಾಗಿ ಮಳೆ ಬರುತ್ತಿರುವಾಗ ಅಮ್ಮನ ಆಫೀಸು ಕೋಣೆಯ ಒಳಗೂ ನುಗ್ಗಲು ಇಣುಕುತ್ತಿದ್ದ ಕಾಳುವನ್ನು ಕಂಡು ಅಮ್ಮ ಪೇಚಿಗೆ ಸಿಕ್ಕಿದ್ದರು. ಆ ದಿನ ಇನ್ಸ್ಪೆಕರ್ ಸಾಹೇಬರೂ ಶಾಲೆಗೆ ಬಂದಿದ್ದರಂತೆ!
ಬರ ಬರುತ್ತಾ ಕಾಳು ಮತ್ತು ಟೈಗರ್ ಸ್ನೇಹಿತರಾದರು. ತೋಟದ ಬಾಳೆ, ಏಳನೀರುಗಳನ್ನು ಕದಿಯಲು ಬರುತ್ತಿದ್ದ ಮಂಗಗಳನ್ನು ಓಡಿಸುವುದರಲ್ಲಿ, ಪಕ್ಕದ ಮನೆಯವರು ಸಮಯ ನೋಡಿ ನಮ್ಮ ತೋಟಕ್ಕೆ ಬಿಡುತ್ತಿದ್ದ ದನಗಳನ್ನು ಓಡಿಸುವುದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದರು. ಅಮ್ಮ ದೇವರ ಕೋಣೆಯಲ್ಲಿ ಶಂಖ ಓದಿದಾಗ ತಾವೂ 'ಊ~ ಊ~ ಊ'  ಎಂದು ಸ್ಪರ್ಧೆಯಲ್ಲಿ ಅರಚುತ್ತಿದ್ದುದನ್ನು ಮಾತ್ರ ಸಹಿಸಲಾಗುತ್ತಿರಲಿಲ್ಲ.
ಈ ನಾಯಿಗಳಿಗೆ ನಮ್ಮ ಜಾಗದ ಗಡಿ ನಿಖರವಾಗಿ ಗೊತ್ತಿತ್ತು ಅನ್ನಿಸುತ್ತದೆ. ಅದರ ಹೊರಗಡೆ ಇವು walk, jog ಹಾಗೂ 'ಇನ್ನಿತರ' ಕೆಲಸಗಳಿಗೆ ಹೋಗಿ ಬರುತ್ತಿದ್ದವಾದರೂ ಹೊರಗಡೆ ಹೋಗಿ ಸಾರ್ವಜನಿಕರಿಗೆ ಬೊಗಳಿದ್ದು, ಕಚ್ಚಿದ್ದು ಇಲ್ಲವೇ ಇಲ್ಲ.
*****

ಒಂದು ದಿನ ಬೆಳ್ಳಂಬೆಳಗೆ ಟೈಗರ್ ಕುಯ್-ಕುಯ್-ಕುಯ್ ಎಂದು ಜೋರಾಗಿ ಅರಚುತ್ತಾ ಬಂತು. ನೋಡಿದರೆ ಕಣ್ಣಿನ ಬಳಿ ಮುಖದ ಒಳಗೆ ಹೊಕ್ಕಿದ್ದ ಎರಡು ಮುಳ್ಳುಗಳು. ಮುಳ್ಳು ಹಂದಿಯ ಮುಳ್ಳುಗಳು! ಕಾಳು ಕೂಡ ಬೊಗಳಿಕೊಂಡು ಬಂದ; ಅವನಿಗೇನೂ ಆಗಿರಲಿಲ್ಲ. ಈ ನಾಯಿಗಳು ಹೊರಗಿನ ಇತರ ಹಲವುಕೆಲವು ನಾಯಿಗಳ ಸಹಯೋಗದೊಂದಿಗೆ, ನಮ್ಮ ಗೇರು ಬೀಜದ ಮರವೊಂದರ ಅಡಿಯಲ್ಲಿ ಮುಳ್ಳು ಹಂದಿಯೊಂದನ್ನು ಕೊಂದು ಹಾಕಿದ್ದವು. ಗೊಳೋ ಎಂದು ಅಳುತ್ತಿದ್ದ ಟೈಗರ್ ಮುಖವನ್ನು ಬಿಗಿ ಹಿಡಿದು, ಅಪ್ಪಯ್ಯ ಆ ಮುಳ್ಳುಗಳನ್ನು ಎಳೆದು ಹೊರ ತೆಗೆದಿದ್ದರು. ಟೈಗರ್ ನಿರಾಳವಾಗಿದ್ದ. ಸುದ್ದಿ ಊರೆಲ್ಲ ಹಬ್ಬಿ ಜನ ಬಂದು ಸೇರಿ ಆ ಸತ್ತ ಮುಳ್ಳು ಹಂದಿಗೂ ಸರಿಯಾಗಿ ವೈಕುಂಠದ ದಾರಿ ತೋರಿಸಿದ್ದರು.
ನನ್ನ ಪಾಲಿಗಂತೂ ಟೈಗರ್ ಹೀರೋ ಆಗಿದ್ದ!

ಸಾವಿರದ ಒಂಭೈನೂರ ತೊಂಭತ್ತೆಂಟು. ಕಾಳು ಅಜ್ಜ ಆಗುತ್ತಿದ್ದ. ಕೊನೆ ಕ್ಷಣಗಳನ್ನು ಎಣಿಸುತ್ತಿದ್ದ. ಆತನ ಮೂರು ಹೊತ್ತಿನ ಊಟವನ್ನೂ ಅಮ್ಮ ಸರಿಯಾಗಿ ನುಜ್ಜಿ ಪುಡಿಮಾಡಿ, ಮೆದುಮಾಡಿ ಕೊಡುತ್ತಿದ್ದರು. ಹಲ್ಲಿಲ್ಲದ ಕಾಳುವಿಗೆ ಕೂಳು ತಿನ್ನುವುದು ಕಷ್ಟವಾಗುತ್ತಿತ್ತು. ಆಗಿನ್ನೂ ಮೂರು-ಮೂರೂವರೆ ವರ್ಷದ ಟೈಗರ್ ಕೂಡ, ತನ್ನ ಜೊತೆ ಆಡಲು, ಒಡಲು ಕಾಳು ಬರುತ್ತಿಲ್ಲ ಎಂದು ಬೇಸರಗೊಳ್ಳುತ್ತಿದ್ದ. ಒಂದು ದಿವಸ, ಹೆಚ್ಚು ನರಳದೆ ಕಾಳು ಸತ್ತ. ಬೇಸರದಿಂದ ಅವನನ್ನು ಮಣ್ಣು ಮಾಡಿದ್ದೆವು.
ಕಾಳು ಸತ್ತ ಆ ವಾರ ಊಟ ಬಿಟ್ಟಿದ್ದ ಟೈಗರ್.
*****
ಕೆಲವು ದಿನ ಅಂತರ್ಮುಖಿಯಾಗಿದ್ದ ಟೈಗರ್ ನಿಧಾನವಾಗಿ ಚೇತರಿಸಿಕೊಂಡ. ಮಂಗ, ದನ ಓಡಿಸುವ ವಿಷಯದಲ್ಲಿ ಏಕಾಂಗಿಯಾಗಿ ಹೋರಾಡಲಾರಂಭಿಸಿ ಯಶಸ್ವಿಯಾಗತೊಡಗಿದ. ಹಂದಿ ಮುಳ್ಳಿನ ಗುರುತು ಈಗ ಮುಖದಲ್ಲಿ ಮಚ್ಚೆಯ ತರಹ ಕಾಣುತ್ತಿತ್ತು. "ಬಟ್ರೆನ ಇಲ್ಲಡೆಡ್ ಕಪ್ಪು ಮಚ್ಚೆದ ಒಂಜಿ ನಾಯಿ ಉಂಡು. ಕಟ್ಟುದೆರಾ ಕೇಂಡ್ದು ಪೋಲೆ" (ಭಟ್ಟರ ಮನೆಯಲ್ಲಿ ಕಪ್ಪು ಮಚ್ಚೆಯ ನಾಯಿ ಉಂಟು. ಕಟ್ಟಿದ್ದಾರಾ ಅಂತ ವಿಚಾರಿಸಿ ಹೋಗಿ) ಅಂತ ಹೊಸದಾಗಿ ಬಂದು ಮನೆಗೆ ದಾರಿ ಕೇಳಿದವರಿಗೆ ನೆರೆಕರೆಯವರು ಎಚ್ಚರಿಸುತ್ತಿದರಂತೆ. ನಾಯಿಯ ಬಗ್ಗೆ ಸ್ವಲ್ಪ ಹೆದರಿಕೆ ಇದ್ದರೆ ಒಳ್ಳೆಯದು ಎಂದು ಅಪ್ಪ ಹೇಳುತ್ತಿದ್ದರು.
*****
ನಾನು ಪಿ.ಯು.ಸಿ ಮುಗಿಸುವ ಹೊತ್ತಿಗೆ ಟೈಗರ್ ಮುದುಕನಾಗಿದ್ದ. ಇಪ್ಪತ್ತು ವರುಷಗಳ ಯುವ ಜೀವನದ ಬಳಿಕ. ನಾನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದೆನಷ್ಟೇ. "ಟೈಗರ್ ಆಗಾಗ ಸುಮ್ಮನೆ, ವಿಷಯವಿಲ್ಲದೇ ಕುಯ್ ಅನ್ನುತ್ತದೆ" ಎಂದು ಅಮ್ಮ ಅನ್ನುತ್ತಿದ್ದರು. ಅಕ್ಕ ಮನೆ ಬಿಟ್ಟು ಮಂಗಳೂರು ವಿಶ್ವವಿದ್ಯಾಲಯ ಸೇರಿಕೊಂಡಾಗಲೂ "ಯಾರೋ ಮನೆಯಲ್ಲಿಲ್ಲ" ಎಂದು ಬೇಸರಗೊಂಡಿತ್ತಂತೆ. ತಿಂಗಳಿಗೊಂದು ಸಾರಿ ನಾನು ಮನೆಗೆ ಹೋದಾಗಲಂತೂ, ಟೈಗರ್ ಎರಡೂ ಕೈಗಳನ್ನು ಎತ್ತಿ ಸಂತಸ ಪಡುತ್ತಿತ್ತು. ನೆಕ್ಕಿ ಮುದ್ದಿಸಲು ಬರುತ್ತಿತ್ತು.
ಟೈಗರ್ ಇನ್ನು ಹೆಚ್ಚು ದಿವಸ ಬದುಕಲಾರದು ಎಂದು ಅಪ್ಪ ಒಂದುದಿನ ಫೋನ್ ಮಾಡಿ ಹೇಳಿದರು. ತುಂಬಾ ಬೇಸರಗೊಂಡೆ. ಆದರೆ ಅದಕ್ಕೂ ಹೆಚ್ಚು ಬೇಸರವಾದದ್ದು ಅದು ಅಸುನೀಗಿದ ರೀತಿ. ಜೋರು ಮಳೆ ಬರುತ್ತಿದ್ದ ಒಂದು ದಿವಸ, ಅಪ್ಪನೂ ಅಮ್ಮನೂ ಮನೆಯಲ್ಲಿರದ ಆ ದಿವಸ- ಕೆಲ ದಿನಗಳಿಂದ ಟೈಗರ್ ನನ್ನು ಕಟ್ಟದೇ ಬಿಟ್ಟಿದ್ದರಂತೆ- ಅಪ್ಪ ಪೇಟೆಯಿಂದ ವಾಪಸ್ ಬರುವಷ್ಟರಲ್ಲಿ ಮನೆಯ ಮಾಡಿನ ಧಾರೆ ನೀರು ಬೀಳುವ ಜಾಗದಲ್ಲಿ ಮಲಗಿ ಬಿದ್ದಿತ್ತಂತೆ. ಸಾಯುವ ಕ್ಷಣ ಯಾರೂ ಇರಲಿಲ್ಲ ಎಂದು ಅಪ್ಪನೂ ಅಮ್ಮನೂ ಮರುಗಿದರು.
ನಾನು ಕೆಲ ದಿನಗಳ ಬಳಿಕ ಮೈಸೂರಿಂದ ರಾತ್ರಿ ಬಸ್ ಏರಿ, ಮನೆಗೆ ಬರುವಾಗ ಸ್ವಾಗತಿಸಲು ಬರದ ನಾಯಿಯನ್ನು ನೆನೆದು ಒಂದು ಕ್ಷಣಕ್ಕೆ ಕಣ್ಣುಗಳು ತೇವವಾದವು. ನಿಧಾನಕ್ಕೆ ಸುಧಾರಿಸಿಕೊಂಡೆ.
ಅಂದ ಹಾಗೆ, ಈ ಕಾಳು ಮತ್ತು ಟೈಗರ್ ಎರಡೂ ಸಾಮಾನ್ಯ ತಳಿಯ ನಾಯಿಗಳು.ಸಾಮಾನ್ಯ ಭಾಷೆಯಲ್ಲಿ-ಕಾಟು ನಾಯಿಗಳು.  ಹೈಬ್ರೀಡ್ ಜಾತಿ ನಾಯಿಯಂತೆ ಇದ್ದ ಇವುಗಳ ಪ್ರೀತಿ, ಪ್ರಾಮಾಣಿಕತೆ, ಧೈರ್ಯ, ಬುದ್ಧಿವಂತಿಕೆ- ಅವನ್ನು ಮನಸ್ಸಿಗೆ ಹತ್ತಿರ ಮಾಡಿದ್ದವು.
*****
ಸದ್ಯಕ್ಕೆ ಮತ್ತೊಂದು ನಾಯಿಯಿದೆ. ರೂಬಿ. ಇರಲಿ, ಮುಂದೆ ಬರೆಯೋಣ!
*****

Sunday, July 27, 2014

ಪುತ್ತೂರಿನಲ್ಲಿ ಗಾಂಧೀಜಿ

ಇಸವಿ ಸಾವಿರದ ಒಂಭೈನೂರ ಇಪ್ಪತ್ತೇಳು ಇರಬೇಕು. ಪುತ್ತೂರಿನಿಂದ ಐದಾರು ಮೈಲಿ ದೂರದ ಮೇರಳ ಎಂಬ ಪುಟ್ಟ ಹಳ್ಳಿಯಲ್ಲಿ ನಾರಾಯಣ ಭಟ್ಟರ ವಾಸ.  ಭಟ್ಟರು ವರುಷಕ್ಕೆ ಹನ್ನೆರಡು ಸಾವಿರ ಆದಾಯ ಹೊಂದಿದ್ದವರು. ಆಗಿನ ಕಾಲದ ಶ್ರೀಮಂತ ಕೃಷಿಕರಲ್ಲಿ ಒಬ್ಬರಾಗಿದ್ದರು. ಅವರು ಸ್ವತಃ ಬೆವರಿಳಿಸಿ ದುಡಿದು ಬಾಳುವ ಪರಿಶ್ರಮಿ.
ನಿನ್ನೆ ರಾತ್ರಿ ತಾನೇ ಗೋಕುಲಾಷ್ಟಮಿಯಾಗಿದ್ದು, ಕೃಷ್ಣನಿಗೆ ಅರ್ಘ್ಯ ಕೊಟ್ಟು ಮಲಗುವಷ್ಟರಲ್ಲಿ ತಡವಾಗಿರಬೇಕು. ಅವರ ದೊಡ್ಡ ಮಗ ವಾಸುದೇವ ಬಿಟ್ಟರೆ ಉಳಿದವರು ಯಾರೂ ಇನ್ನೂ ಎದ್ದಿರಲ್ಲಿಲ್ಲ. ಆ ನವಮಿಯ ದಿವಸದ ನಿತ್ಯ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲೇ ಮುಗಿಸಿದ್ದರು ನಾರಾಯಣರು. ವಾಸುದೇವನ ದೈನಂದಿನ ಕೆಲಸವೆಂದರೆ ಬೆಳಗಿನ ಜಪ ಮುಗಿಸಿ, ಗಂಧ-ಚಂದನ ತೇದು ಕೊಡುವುದು. ಆಮೇಲೆ ಅಪ್ಪ ಪೂಜೆ ಮುಗಿಸುವವರೆಗೆ, ನಿನ್ನೆ ಕಲಿತಿದ್ದ ವೇದ ಮಂತ್ರಗಳನ್ನು ಮೆಲುಕು ಹಾಕುವುದು. ನಂತರ ಬೆಳಗಿನ ಉಪಹಾರ ಮುಗಿಸಿ ತೋಟದ ಕಡೆಗೆ ಒಂದು ಬಾರಿ ಹೋಗಿ ಬರುವುದು. 
ಅಂದು ತೋಟದ ಕಡೆಗೆ ಹೋಗಿದ್ದ ವಾಸುದೇವ ಸ್ವಲ್ಪ ಬೇಗನೇ ತಿರುಗಿ ಬಂದ. ನಾರಾಯಣ ಭಟ್ಟರು ಆಗಲೇ ಮನೆಯ ಅಂಗಳದಲ್ಲಿ ತಟ್ಟಿ ಮಡೆಯುತ್ತಿದ್ದರು. ವಾಸುದೇವ ಮನೆಗೆ ತಿರುಗಿ ಬಂದವನೇ ಅಮ್ಮನ ಬಳಿ ಏನೋ ತವಕವನ್ನು ತೋಡಿಕೊಳ್ಳಲು ಸಮಯ ನೋಡುತ್ತಿದ್ದ. ಅಪ್ಪನ ಬಳಿ ನೇರವಾಗಿ ಹೇಳಿದರೆ ಈ ಕೆಲಸ ಸುಲಭವಾಗಿ ನೆರವೇರುವುದಿಲ್ಲ ಅನ್ನುವುದು ಅವನಿಗೆ ಗೊತ್ತಿತ್ತು. 'ಅಮ್ಮ... ' ಎನ್ನುತ್ತಾ ಹಟ್ಟಿಯಲ್ಲಿ ಹಾಲು ಹಿಂಡುತಿದ್ದ ಅಮ್ಮನ ಹತ್ತಿರ ತುದಿಗಾಲಲ್ಲಿ ನಡೆಯುತ್ತಿರುವುದು ನಾರಾಯಣ ಭಟ್ಟರಿಗೆ ಕಂಡಿತು. 

"ಇಗೋ ವಾಸುದೇವ, ಬೆಳಗಿನ ಜಾವ ಹೇಳುತಿದ್ದ ಪುರುಷ ಸೂಕ್ತವನ್ನು ಮತ್ತೊಮ್ಮೆ ಹೇಳು ನೋಡೋಣ" ಎಂದರು ಭಟ್ಟರು. "ಸಹಸ್ರ ಶೀರ್ಷಃ ಪುರೂಷಃ ... " ಎಂದು ವಾಸುದೇವ ಶುರುಮಾಡುತ್ತಿದ್ದಾನಷ್ಟೇ; ತಟ್ಟಿಹೆಣೆಯುತ್ತಿದ್ದ ಭಟ್ಟರು ಕಚ್ಚೆ ಕಟ್ಟಿಕೊಂಡು ಎದ್ದು ರಪರಪನೆ ಬಂದು, "ಧರ್ ಧರ್" ಎಂದು ವಾಸುದೇವನ ಬೆನ್ನಿಗೆ ಬಾರೆ ಎಳೆದರು. "ಸ್ವರಿತ - ಅನುತತ್ತ್ವಗಳನ್ನು ಕ್ರಮಬದ್ಧವಾಗಿ ಉಚ್ಚರಿಸರಬೇಕು, ಸಹಸ್ರ ಅಲ್ಲ ಅದು ಸಹಸ್ರಾ ಅಂತ ನಿನಗೆ ಸಾವಿರ ಸಾರಿ ಹೇಳಿದರೂ ನಿಂಗೆ ಅರ್ಥ ಆಗುವುದಿಲ್ಲ. ಇನ್ನು ಪೆಟ್ಟೇ ಗತಿ ನಿಂಗೆ" ಅಂದರು. 
ಪಾಪ ವಾಸುದೇವ! ಅಮ್ಮನ ಬಳಿ ಹೇಳಬೇಕಿದ್ದ ವಿಷಯ ಈಗ ಮರೆತೇ ಹೋಗಿತ್ತು. ಅಂಗಳದ ಮೂಲೆಯಲ್ಲಿ ನಿಂತು ಮತ್ತೆ ಹತ್ತು ಬಾರಿ ಅಭ್ಯಾಸ ಮಾಡಿದ ಮೇಲೆಯೇ ಭಟ್ಟರು "ಹೂಂ, ಸಾಕು ಇವತ್ತಿಗೆ" ಅಂದಿದ್ದು.
*****

ವಾಸುದೇವನ ಸಹೋದರರೆಲ್ಲಾ ಅಷ್ಟು ಹೊತ್ತಿಗೆ ಎದ್ದಿದ್ದರು. ಬಹುಶಃ ನಾರಾಯಣ ಭಟ್ಟರ ಪೆಟ್ಟಿನ ಸದ್ದೂ, ವಾಸುದೇವನ ಅಳುವೂ ಉಳಿದವರನ್ನು ಎಬ್ಬಿಸಿರಬೇಕು. ಅಣ್ಣ ಬೆಳ್ಳಂಬೆಳಗೆ ಪೆಟ್ಟು ತಿನ್ನಿಸಿಕೊಂಡ ವಿಷಯ ಉಳಿದವರಿಗೂ ಗೊತ್ತಾಯಿತು. ಜೊತೆಗೆ ಅಪ್ಪನೂ ಭಾರೀ ಕೋಪದಲ್ಲಿ ಇದ್ದಾರೆ ಎನ್ನುವುದೂ ಅಷ್ಟೇ ಶುಭ್ರವಾಗಿತ್ತು. ನಿಜವಾಗಿ ನೋಡಿದರೆ, ಇನ್ನು ಕೆಲವೇ ದಿವಸಗಳಲ್ಲಿ ಬರಲಿರುವ ತಮ್ಮ ಎರಡನೇ ಮಗನ ಉಪನಯನದ ತಯ್ಯಾರಿ, ಇನ್ನೂ ಸಿದ್ಧವಾಗದ ತಟ್ಟಿಗಳು, ಹೀಗೆಲ್ಲಾ ಹಲವು ವಿಷಯಗಳು ತಲೆಯಲ್ಲಿರುವಾಗಲೇ ವಾಸುದೇವ ತಪ್ಪಿಸಿದ ಸ್ವರಿತ, ಭಟ್ಟರನ್ನು ಅಂಗಳದಿಂದ ಆಚೆ ಎಳೆದು ತಂದಿತ್ತು. 
ವಾಸುದೇವ ಆಗಿನ್ನೂಏಳು ವರುಷದ ಹುಡುಗ. ಆ ವರುಷದ ಮಳೆಗಾಲದಲ್ಲಿ ಜನ್ಮಾಷ್ಟಮಿಗಿಂತಲೂ ಮುಖ್ಯವಾದ ಸಂಗತಿಯೊಂದು ಪುತ್ತೂರಿನಲ್ಲಿ ಭಾರೀ ಸುದ್ದಿ ಮಾಡಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದದ್ದ ಗಾಂಧೀಜಿ ಪುತ್ತೂರಿಗೆ ಅಂದು ಬರುವವರಿದ್ದರು. ಚಕ್ಕುಲಿ ತಿನ್ನಲು ನಿನ್ನೆ ರಾತ್ರಿ ಮನೆಗೆ ಬಂದಿದ್ದ ಓರಗೆಯ ಹುಡುಗ ಕೃಷ್ಣಮೂರ್ತಿ ಗಾಂಧೀಜಿಯ ಬಗ್ಗೆ ತನಗೆ ಗೊತ್ತಿದ್ದ ಕತೆಗಳೆಲ್ಲವನ್ನೂ ನಿನ್ನೆಯೇ ವಾಸುದೇವನಿಗೆ ಹೇಳಿದ್ದ. ಅದನ್ನು ಕೇಳಿದ್ದ ವಾಸುದೇವ, ದ್ವಾಪರದ ಕೃಷ್ಣನಂತೆಯೇ ಗಾಂಧೀಜಿ ಇಂದಿನ ದೇವರು ಅಂದುಕೊಂಡಿದ್ದ. ಅದೂ ಅಲ್ಲದೆ, ಕೃಷ್ಣಮೂರ್ತಿಯು ಅವನ ಅಪ್ಪನ ಜೊತೆಗೆ ಮರುದಿವಸ ಪುತ್ತೂರಿಗೆ ಹೋಗಿ ಗಾಂಧೀಜಿಯನ್ನು ನೋಡುವವನಿದ್ದ. ಇದನ್ನು ತಿಳಿದ ವಾಸುದೇವನೂ ಅಪ್ಪನ ಜೊತೆಗೆ ಪೇಟೆಗೆ ಹೋಗುವ ಅಭಿಲಾಷೆ ಹೊಂದಿದ್ದ. 
ಆದರೆ, ಇವತ್ತು ಇನ್ನು ಅಪ್ಪನಿಗೆ ಹೇಗೆ ಹೇಳುವುದು? ಪೆಟ್ಟು ತಿಂದು ಹೆದರಿ ಕಂಗಾಲಾಗಿಬಿಟ್ಟಿದ್ದ ವಾಸುದೇವ. 
*****

ಹೊತ್ತು ನೆತ್ತಿಗೇರುತ್ತಿದೆ. ಗಾಂಧೀಜಿ ಆಗಲೇ ಬಂದಿದ್ದಿರಬಹುದು ಪುತ್ತೂರಿಗೆ. ಕೃಷ್ಣಮೂರ್ತಿ ಏನು ಮಾಡುತ್ತಿದ್ದನೋ ಏನೋ! ವಾಸುದೇವನಿಗೆ ಗಾಂಧೀಜಿಯ ಭಾಷಣ ಬೇಕಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಭಾರೀ ಕಿಚ್ಚೇನೂ ಪುತ್ತೂರಿಗೆ ಹತ್ತಿರಲಿಲ್ಲ. ಆದರೆ ಸ್ವಲ್ಪ ದೂರದ ಕಾಸರಗೋಡಿನ ಬಳಿ ಏನೋ ಗಲಾಟೆ ಆಗುತ್ತಿದೆ ಎಂದು ಕೆಲ ತಿಂಗಳ ಹಿಂದೆ ಎಲ್ಲೋ ಕೇಳಿದ್ದ ನೆನಪು ಅವನಿಗೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಅಂದರೆ ಏನೆಂದೂ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ಆದರೆ ಗಾಂಧೀಜಿಯ ಹೆಸರು ಸರಿಯಾಗಿ ಗೊತ್ತಿದೆ. ಎಲ್ಲರ ಬಾಯಿಯಲ್ಲೂ ಬರುತ್ತಿದ್ದ ಹೆಸರದು. ಒಮ್ಮೆ ನೋಡಬೇಕು ಅಂದುಕೊಂಡಿದ್ದ ವಾಸುದೇವನ ಆಸೆಯ ಬಳ್ಳಿಗೆ ಕೃಷ್ಣಮೂರ್ತಿ ನೀರೆರೆದಿದ್ದ ನಿನ್ನೆ. 
"ಊಟಕ್ಕೆ ಬನ್ನಿ... "ಎಂದು ಅಮ್ಮ ಕರೆದಾಗ ಇನ್ನಾಯಿತು ಅಂದುಕೊಂಡ ವಾಸುದೇವ. 
*****

ನಾರಾಯಣ ಭಟ್ಟರ ಊಟ ಮುಗಿಯುತ್ತಿದಂತೆ ಕೃಷ್ಣಮೂರ್ತಿಯ ಅಪ್ಪ ಗಂಗಾಧರ ಭಟ್ಟರು ಮನೆಯ ಕಡೆ ಬರುತ್ತಿದ್ದರು. ಮನೆಗೆ ಬಂದು ಶಾಲನ್ನು ಕೊಡವಿ "ಅಗುರ್ರ್ ... " ಎಂದು ತೇಗಿ ತಮ್ಮ ಊಟ ಆಗಲೇ ಆಯಿತೆಂದು ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು ಹೇಳಿದರು. ಎಲೆಯಡಿಕೆಯ ತಟ್ಟೆಯನ್ನು ಅತಿಥಿಗಳ ಎದುರಿಗಿಟ್ಟು ನಾರಾಯಣ ಭಟ್ಟರು ತಮ್ಮಕುರ್ಚಿಯ ಮೇಲೆ ಕುಳಿತರಷ್ಟೇ. ಆಗ ತಾನೇ ಊಟ ಮುಗಿಸಿ ತಟ್ಟೆ ಹಿಡಿದು ಹೊರಬಂದ ವಾಸುದೇವ "ಮಾಮ! ಗಾಂಧೀಜಿಯನ್ನು ನೋಡಿ ಆಯ್ತಾ? ಭಾರೀ ಗೌಜಿಯಾ?" ಎಂದು ಒಮ್ಮಿಂದೊಮ್ಮೆಲೇ ಕೇಳಿದ. ಕಣ್ಣು ಕೃಷ್ಣಮೂರ್ತಿ ಎಲ್ಲಿದ್ದಾನೆಂದು ಹುಡುಕುತ್ತಿತ್ತು. 
"ಇಲ್ಲ ವಾಸು. ಚಕ್ಕುಲಿ ಸರೀ ತಿಂದಿದ್ದ ಕೃಷ್ಣ ಅನಿಸ್ತದೆ. ಇವತ್ತು ಹೊಟ್ಟೆ ಸರಿ ಇಲ್ಲ ಅವನಿಗೆ. ಡಾಕ್ಟರರ ಬಳಿ ಹೋಗಿ ಬರುವಷ್ಟರಲ್ಲಿ ಹನ್ನೆರಡು ಗಂಟೆ ಆಯ್ತು. ಇನ್ನೆಂತ ಹೋಗುವುದು? ಭಾಷಣ ಮುಗ್ದಿರ್ತದೆ ಈಗ" ಅಂದರು ಗಂಗಾಧರ ಮಾವ. 

"ಗಾಂಧೀಜಿ ಬರುವುದು ಇವತ್ತಾ? ಹೌದಾ?" ಅಂದರು ಆಶ್ಚರ್ಯದಿಂದ ನಾರಾಯಣ ಭಟ್ಟರು. 
ಭಟ್ಟರಿಗೆ ರಾಜಕೀಯ, ಸ್ವಾತಂತ್ರ ಹೋರಾಟದ ವಿಷಯಗಳಲ್ಲಿ ಭಾರೀ ಆಸಕ್ತಿಯೂ ಇತ್ತು. ಕಾಸರಗೋಡಿನ ಬಳಿ ನಡೆದಿದ್ದ ಮಾಪಿಳ್ಳೆ ಕದನದಲ್ಲಿ ಸತ್ತು ಹೋದ ಅನೇಕರಲ್ಲಿ ಅವರ ಪರಿಚಯದವರೂ ಇದ್ದರು. 
ಗಾಂಧೀಜಿಯ ಜೀವನದ ಹಲವು ಕತೆಗಳನ್ನು ಊರಿನ ಹಲವು ಜನಗಳಿಗೆ ಆಗಾಗ ಇವರು ಹೇಳುತ್ತಿದ್ದರು. ವಾಸುದೇವನೂ ಇವನ್ನು ಕೇಳಿಸಿಕೊಳ್ಳುತ್ತಿದ್ದ. "ಅಪ್ಪಯ್ಯ, ಒಂದು ಸಾರಿ ಗಾಂಧೀಜಿಯನ್ನು ನೋಡ್ಲಿಕ್ಕೆ ಹೋಗುವ" ಎಂದು ಹಿಂದೊಂದು ಬಾರಿ ಹೇಳಿದ್ದ. "ಇವತ್ತು ನೀನು ಅಗ್ನಿ ಸೂಕ್ತ ಕಲಿತ್ರೆ, ಒಂದು ದಿವಸ ಗಾಂಧೀಜಿಯನ್ನು ನೋಡುವುದಕ್ಕೆ ಕರೆದುಕೊಂಡು ಹೋಗುತ್ತೇನೆ" - ಎಂದು ಅಂದು ಅಂದಿದ್ದರು ಭಟ್ಟರು. 
ಆದರೆ, ಇಂದು ಉಪನಯನದ ಕೆಲಸ, ಅಷ್ಟಮಿಯ ಚಕ್ಕುಲಿಯ ನಡುವೆ ಅದು ಹೇಗೋ ಗಾಂಧೀಜಿಯ ಆಗಮನವನ್ನು ಮರೆತಿದ್ದರು. 
ಬೈರಾಸು ಕಟ್ಟಿಕೊಂಡಿದ್ದ ವಾಸುದೇವ ಇನ್ನೂ ತಟ್ಟೆ ಕೈಯಲ್ಲಿ ಹಿಡಿದುಕೊಂಡು ಅಪ್ಪನ ಕಡೆ ಗುರ್ರೆಂದು ನೋಡುತ್ತಿದ್ದ. ಭಟ್ಟರಿಗೆ ಈಗ ಎಲ್ಲಾ ಅರ್ಥವಾಯಿತು; ಬೆಳಗಿನಿಂದ ವಾಸುದೇವನ ಮನದಲ್ಲಿದ್ದ ಕಸಿವಿಸಿಯನ್ನೂ, ಸ್ವರಿತ ತಪ್ಪಿದ್ದರ ಕಾರಣವನ್ನೂ ತಕ್ಷಣ ಅರಿತರು. 
ಸಮಯ ಮೀರುತ್ತಿದೆ ಎಂದು ಅನ್ನಿಸಿತು ಭಟ್ಟರಿಗೆ. ಆದರೂ ಒಂದು ಪ್ರಯತ್ನ ಮಾಡಿ ಬಿಡೋಣ ಎಂದು ಯೋಚಿಸಿ, "ಭಾವ, ಬನ್ನಿ ನಡಿಯಿರಿ, ಪುತ್ತೂರು ಕಡೆ ಒಮ್ಮೆ ಹೋಗಿ ಬರುವ" ಎಂದರು. 
ಇನ್ನೂ ತಟ್ಟೆ ತೊಳೆಯುತ್ತಿದ್ದ ವಾಸುದೇವನಿಗೆ, "ಅಂಗಿ ಹಾಕಿಕೋ, ಬಾ, ಹೋಗಿ ಬರುವ ಒಮ್ಮೆ" ಎಂದರು. 
*****

ಆತುರ ಆತುರದಲ್ಲೇ ವಾಸುದೇವನೂ ಹೊರಟು ನಿಂತ. ಚಾವಡಿಯಲ್ಲಿದ್ದ ಗಡಿಯಾರ ಢಣ್-ಢಣ್ ಎಂದು ಎರಡು ಬಾರಿ ಶಬ್ದ ಮಾಡಿತು. ಧಾರಾಕಾರ ಸುರಿಯುತ್ತಿದ್ದ ಆ ಮಳೆಯಲ್ಲಿ ವಾಸುದೆವನನ್ನು ಭಟ್ಟರು ಎತ್ತಿಕೊಂಡರು! ಬಹುಶಃ ತಾನೇನೂ ತಪ್ಪು ಮಾಡಿದೆ ಎಂದೆನಿಸಿ ಮಗನನ್ನು ಎತ್ತಿ ನಡೆಸುತ್ತಿದರೆನೋ!
ಗಂಗಾಧರ ಮಾವ ಹಿಂದೆ ನಡೆಯುತ್ತಿದ್ದರು. ಅಪ್ಪ ಹಾಕಿಕೊಂಡಿದ್ದ ಗೊರಬಿನ ನಡುವಿಂದ ಹಿಂದೆ ತಲೆ ಹಾಕಿ ವಾಸುದೇವ ಆಗಾಗ ಮಾವನ ಜೊತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದ. 

*****
ಮೇರಳ, ಪುತ್ತೂರಿನಿಂದ ಮಡಿಕೇರಿ ರಸ್ತೆಯ ಬದಿಯಲ್ಲಿನ ಹಳ್ಳಿ. ತಮ್ಮ ಗದ್ದೆಯ ಬದುಗಳಲ್ಲಿ ಹಾದು ಬರುತ್ತಿದ್ದಾಗ ಭಟ್ಟರಿಗೆ ಏನನ್ನಿಸಿತೋ ಏನೋ. ಭತ್ತದ ತೆನೆಯೊಂದನ್ನು ಕುಯ್ದುಕೊಂಡು ವಾಸುದೇವನ ಕೈಯಲ್ಲಿ ಕೊಟ್ಟರು. ಮಡಿಕೇರಿ ಕಡೆಯ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಮೂರು ಘಂಟೆಯಾಗಿರಬೇಕು. 
ಮಾರ್ಗದ ಎದುರುಗಡೆಯಿಂದ ಭಾರೀ ವಾದ್ಯ-ನಗಾರಿಗಳು ಕೇಳತೊಡಗಿದವು. ಎತ್ತರವಿದ್ದ ಆ ಮಾರ್ಗ ಹತ್ತುತ್ತಿದ್ದ ಭಟ್ಟರಿಗೆ ಮುಂದೆ ಏನಾಗುತ್ತಿದೆ ಎಂದು ಸ್ಪಷ್ಟವಾಗತೊಡಗಿತ್ತು. ಗಾಂಧೀಜಿ ಮುಂದೆ ಸಂಪಾಜೆ ಕಡೆ ಹೋಗುವವರಿದ್ದರು. ಅವರನ್ನು ಸುಳ್ಯ ತನಕವೂ ಮೆರವಣಿಗೆಯಲ್ಲಿ ಬಿಟ್ಟು ಕೊಡಲು ಜನ ನೆರೆದಿದ್ದರು. ತಡವಾಗಿದೆ, ಆದರೂ ಬೀಳ್ಕೊಡುಗೆಯನ್ನಾದರೂ ನೋಡುತ್ತೇನಲ್ಲಾ ಎಂದುಕೊಂಡರು ಭಟ್ಟರು. ವಾಸುದೇವ ಈಗ ಅಪ್ಪನ ಭುಜದಿಂದ ಕೆಳಗಿಳಿದಿದ್ದ. ಮಾರ್ಗದ ಬದಿಯಲ್ಲಿ ಇನ್ನೂ ಒಂದಷ್ಟು ಜನರು ಆಗ ನೆರೆದರು. ಅವರಲ್ಲಿ ಒಂದಾಗಿ ಭಟ್ಟರೂ ಸೇರಿಕೊಂಡರು. 
ಗಾಂಧೀಜಿ ಅಸ್ಪಷ್ಟದಿಂದ ಸ್ಪಷ್ಟವಾಗಿ ಕಾಣಿಸಲಾರಂಭಿಸಿದರು. ಪಲ್ಲಕ್ಕಿಯಲ್ಲಿ ಕೂತಿದ್ದ ಶ್ವೇತ ವಸ್ತ್ರದ ಗಾಂಧೀಜಿ ತಮ್ಮ ಕಣ್ಣಿನೆದುರು ಸಾಗುತ್ತಲೇ, "ಅಲ್ಲಿ ಅಲ್ಲಿ ನೋಡು ಮಗೂ, ಗಾಂಧೀಜಿ" ಎಂದು ವಾಸುದೇವನಿಗೆ ತೋರಿಸಿದರು. 
ಪಲ್ಲಕ್ಕಿ ಸರಿಯಾಗಿ ಎದುರು ಬರುತ್ತಿದಂತೆ ಭತ್ತದ ತೆನೆಯ ನಡುವೆ ಕೈಮುಗಿದ ವಾಸುದೇವ. ಮಂದಹಾಸದ ಗಾಂಧೀಜಿ ಒಮ್ಮಿಂದೊಮ್ಮೆಲೆ ಏನೋ ಪ್ರಶ್ನಾರ್ಥಕ ರೂಪದಿಂದ ವಾಸುದೇವನನ್ನು ನೋಡಿದರು. ಪಲ್ಲಕ್ಕಿ ಸ್ವಲ್ಪ ದೂರದಲ್ಲಿ ನಿಂತಿತು. ಕೆಳಗಿಳಿದ ಗಾಂಧೀಜಿ ಕೈಸನ್ನೆಯ ಮೂಲಕ ಬಾಲಕ ವಾಸುದೇವನನ್ನು ಕರೆದರು. ಭಯ ಸಂಕೋಚಗಳಿಂದ ಮುಂದೆ ನಡೆದ ಹುಡುಗ.ವಾಸುದೇವನ ಕೆನ್ನೆಯನ್ನು ಗಾಂಧೀಜಿ ಸವರಲು, ಭಟ್ಟರು ಓಡಿ ಬಂದು ಕೈಯಲ್ಲಿದ್ದ ತೆನೆಯನ್ನು ಗಾಂಧೀಜಿಗೆ ಕೊಡುವಂತೆ ಮಗನಿಗೆ ಹೇಳಿದರು. ಮುಗ್ಧ ನಗುವಿನಿಂದ ತೆನೆಯನ್ನು ಗಾಂಧಿಯ ಕೈಗಿತ್ತ ವಾಸುದೇವ. ಗಾಂಧಿಜಿ ಮುಗುಳ್ನಕ್ಕರು. 
ಪಲ್ಲಕ್ಕಿ ಮುಂದೆ ಸಾಗಿತು. 

[ಸತ್ಯ ಘಟನೆಗೆ ಅಲ್ಲಲ್ಲಿ ಸಾಂದರ್ಭಿಕ ಮಸಾಲೆ ಹಾಕಿದ್ದೇನೆ. ಗಾಂಧೀಜಿ, ಈಗಿನ ಪುತ್ತೂರು ಬಸ್ ಸ್ಟಾಂಡಿನಲ್ಲಿ ಅಂದು ಭಾಷಣ ಮಾಡಿದ್ದರಂತೆ. ಅದರ ನೆನಪಿಗಾಗಿ ಇದ್ದ ಗಾಂಧೀಜಿ ಪ್ರತಿಮೆ ಬಸ್ ಸ್ಟಾಂಡಿನ ಮೂಲೆಯ ಅಶ್ವತ್ಥ ಕಟ್ಟೆಯ ಬಳಿ ಈಗಲೂ ಇದೆ.]

Monday, December 16, 2013

'ಸಾರ್ಥಕ್ಯ'

ಇಳೆಯ ಒಡಲಿನೊಳಗಿನಿಂದ
ಪುಳಕಗೊಂಡು ಮೊಳಕೆಯೊಡೆದು
ಬೆಳೆದು ಬಂದು ನಗುತ ನಿಂತ ಕುಸುಮದಳಗಳು।
ಬೆಳಕು ಹರಿಯೆ ಪುಷ್ಪಪಾತ್ರೆ
ಯೊಳಗೆ ಸೇರಿ ಹರಿಯ ಪೂಜೆ
ಗಳಿಗೆಯಲ್ಲಿ ತೊಡಗಿಕೊಂಡು ಶ್ರೇಷ್ಠವಾದವು।।
***

ಮನದ ಬುಡದಿ ಕೊರೆಯುತಿದ್ದ
ದಿನವು ಭುಗಿಲು ಒಡೆಯುತ್ತಿದ್ದ
ತನ್ನ ಮಧುರ ಪ್ರೇಮ ಬಾಣ ಅಂದು ಹೂಡಲು।
ಜನುಮದರಸಗದುವು ತಾಗಿ
ತನುವು ಮನವು ಕರಗಿ ಕೃಷ್ಣ
ಬನದಿ ಹೊನಲಿನಲ್ಲಿ ಅಪ್ಪಿಕೊಂಡ ರಾಧೆಯ।।
***

ಷಟ್ಪದಿ: ಭೋಗ
______

Sunday, May 26, 2013

ಅಕ್ಕ

ನಾನು ಎರಡನೇ ಕ್ಲಾಸಿನಲ್ಲಿರುವಾಗ ನಡೆದ ಘಟನೆ. ನಾನಾಗ ನಮ್ಮ ಕ್ಲಾಸಿನ 'ಮಿನಿ ರೌಡಿ' ಎಂದು ಗುರುತಿಸಿಕೊಂಡಿದ್ದೆ. ಜನರನ್ನು ರೇಗಿಸೋದಂದರೆ ಏನೋ ಒಂದು ಖುಷಿ ಆಗ. ಅಸಂಬದ್ಧ ಶಬ್ದಗಳನ್ನು ಉಪಯೋಗಿಸಿ ಬಯ್ಯೋದೆಂದರಂತೂ ಖುಷಿಯೋ ಖುಷಿ.
ಅಕ್ಕನ ಜೊತೆಗೆ ಶಾಲೆಗೆ ನಡೆದು ಹೋಗುತ್ತಿದ್ದೆ. ಪಕ್ಕದ ಮನೆಯ ಮಾವ ಅನತಿ ದೂರದಲ್ಲಿ ಪದ್ಮುಂಜದ ಕಡೆಗೇ ಹೊರಟಿದ್ದರು.  ಸಿಕ್ಕಿದ್ದೇ ಚಾನ್ಸ್ ಅಂತ 'ಓಯ್! _____ ಮಾಮ' ಅಂತೆಲ್ಲಾ ಸುಮ್ಮನೇ ಬಯ್ದಿದ್ದೆ. ಅವರಿಗೇನೂ ಕೇಳಿಸಿರಲಿಲ್ಲ. ಕೇಳಬೇಕೆಂಬ ಉದ್ದೇಶವೂ ನನ್ನದಾಗಿರಲಿಲ್ಲ. ಸುಮ್ಮನೆ ಹುಚ್ಚು ಖುಷಿ ಅಷ್ಟೇ!
ಮಾವನಿಗೆ ಕೇಳದಿದ್ದರೂ ನನ್ನ ಅಕ್ಕ ಅದನ್ನು ಕೇಳಿಸಿಕೊಂಡಿದ್ದಳು. ತನ್ನ ಮುದ್ದಿನ ತಮ್ಮನ ಬಾಯಿಯಿಂದ ಬಂದಿದ್ದ ಅಪ್ಪಟ ಸಂಸ್ಕೃತ ಅವಳಿಗಂತೂ ಸುತಾರಾಂ ಇಷ್ಟವಾಗಿರಲಿಲ್ಲ.
ಸಂಜೆಯವರೆಗೆ ತೆಪ್ಪಗೆ ಶಾಲೆಯಲ್ಲಿದ್ದ ಅಕ್ಕ ಸಂಜೆ ಮನೆ ತಲುಪುತ್ತಲೇ ಅಪ್ಪನಿಗೆ ಸಂಪೂರ್ಣ ವರದಿ ಒಪ್ಪಿಸಿದಳು. ಅಪ್ಪನೋ ಸಂಜೆ ಹೊತ್ತಿಗೆ ಸಾಮಾನ್ಯವಾಗಿ ಕೋಪದಲ್ಲೇ ಇರುವವರು. ವಿಷಯ ತಿಳಿಯುತ್ತಲೇ ಅಕ್ಕನ ಎದುರಿಗೇ ನನ್ನನ್ನುಧರ್ರನೆ ಎಳೆದು ರಪ-ರಪ-ರಪ-ರಪನೆ ಬೆನ್ನಿಗೆ ಹೊಡೆದರು. ಬೆನ್ನಿನಲ್ಲಿ ಅಪ್ಪನ ಬರಿಗೈಯ ಕೆಂಪಾದ ಅಚ್ಚುಗಳು.
ಈ ಘಟನೆಯನ್ನು ಪ್ರತ್ಯಕ್ಷ ವೀಕ್ಷಿಸಿದ ಅಕ್ಕನಿಗಂತೂ ಗಳ-ಗಳನೆ ಅಳು! ಯಾಕಾದರೂ ದೂರು ಹೇಳಿದೆನೋ ಅಂತ. ಗಡಗಡನೆ ನಡುಗುತ್ತಿದ್ದಳು ಸಹ.
ಬಹುಶಃ ಅಕ್ಕ 'complaint' ಕೊಟ್ಟದ್ದು ಅದೇ ಮೊದಲು ಅದೇ ಕೊನೆ ಇರಬೇಕು. ನಾನೇನಾದರೂ ಮಾಡಿದ ಕೆಲಸ ಅವಳಿಗೆ ಸರಿ  ಎನಿಸಲಿಲ್ಲವೆಂದಾದರೆ ಅವಳೇ ಸರಿಯಾಗಿ ಹೇಳಿ ಕೊಡುತ್ತಿದ್ದಳು.
ಬರಬರುತ್ತಾ ನನ್ನ ಕಪಿ ಚೇಷ್ಟೆಗಳು ನಿಧಾನವಾಗಿ ಕಡಿಮೆಯಾದವು ಸಹ.
*****

ಅಕ್ಕ ಸಂಕೋಚ ಸ್ವಭಾವದವಳು. ನಾನಿನ್ನೂ ಬಾಲವಾಡಿಯಲ್ಲಿರಬೇಕಾದರೆ ಅಕ್ಕ ಎರಡನೇ ಕ್ಲಾಸು. ಅಕ್ಕನಿಗೆ ಶಾಲೆಯಲ್ಲಿ ಯಾವುದೋ ಸ್ಪರ್ಧೆಯೊಂದರಲ್ಲಿ ಪ್ರಥಮ ಸ್ಥಾನ ಬಂದಿತ್ತು-ಮೊದಲನೇ ಬಾರಿಯ 'competition' ಇರಬೇಕು. ಬಹುಮಾನ ವಿತರಣಾ ಸಮಾರಂಭ. 'ಪ್ರಥಮ ಸ್ಥಾನ- ಮಂಗಳಾ ಗೌರಿ' ಎಂದು ಉದ್ಘೋಷಕರು ಘೋಷಿಸಿದ್ದರು. ಅಲ್ಲೇ ಕೂತಿದ್ದ ಅಕ್ಕನಿಗೆ ಅದ್ಯಾಕೋ ಹೆದರಿಕೆ. ಎರಡನೇ ಸಾರಿ ಹೆಸರು ಕೂಗಿದಾಗಲೂ ಅಕ್ಕ ತನ್ನ ಜಾಗ ಬಿಟ್ಟು ಏಳಲಿಲ್ಲ.
ಮೂರನೇ ಬಾರಿ ಹೆಸರು ಕೂಗಿದಾಗ ನಾನು ಛಂಗನೆ ಎದ್ದು ಓಡಿ ಬಹುಮಾನ ಸ್ವೀಕರಿಸಿದ್ದೆ. ಹೇಗಿದ್ದರೂ ನಮ್ಮ ಮನೆಗೇ ಬರುವಂಥದ್ದು ಈ ಸ್ಟೀಲ್ ಗ್ಲಾಸು ಅನ್ನೋದಂತೂ ಖಂಡಿತ. ಯಾರು ತೆಗೆದುಕೊಂಡರೇನು!? -ಅಂದುಕೊಂಡಿದ್ದೆ ನಾನು.

ಅದಾದ ಮೇಲೆ ಯಾವುದೇ ಸ್ಪರ್ಧೆಯಲ್ಲಿ ಅಕ್ಕ ಗೆದ್ದರೂ ಹೆಡ್ ಮಾಸ್ಟರ್ ಕೆರ್ಮುಣ್ಣಾಯ ಮಾಸ್ಟರು 'ಈ ಬಲಣಿ; ಪ್ರೈಜ್ ಗೆತೋಣು' (ನೀನು ಬಾರೋ,ಪ್ರೈಜ್ ತೆಗೆದುಕೋ) ಅಂತ ನನ್ನನ್ನೇ ಕರೆಯುತ್ತಿದ್ದರು!

೨೦೦೭ರಲ್ಲಿ ಅಕ್ಕ ಉಜಿರೆಯ 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್'ನಿಂದ 'best out going student' ಪ್ರಶಸ್ತಿ ಸ್ವೀಕರಿಸುವಾಗ ನಾನಿದನ್ನು ಒಂದು ಸಾರಿ ನೆನಪಿಸಿಕೊಂಡಿದ್ದೆ!

*****

ನಾನು ಹೈಸ್ಕೂಲು ಕಲಿತದ್ದು ಉಪ್ಪಿನಂಗಡಿಯಲ್ಲಿ. ಪುತ್ತೂರು ತಾಲೂಕು. ಅಕ್ಕ ಹತ್ತನೇ ತರಗತಿ ಕಲಿತದ್ದು ದುರ್ಗಾಂಬಾ ಹೈಸ್ಕೂಲು ಆಲಂಕಾರಿನಲ್ಲಿ. ಪುತ್ತೂರು ತಾಲೂಕೇ. ನಾನು ಎಂಟನೇ ತರಗತಿಯಲ್ಲಿ ಇರಬೇಕಾದರೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯೊಂದರಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದೆ. ಅಕ್ಕನ ಶಾಲೆಯಿಂದ ಅಕ್ಕ. ಜಿಲ್ಲಾ 'ಮುಖ್ಯೋಪಾಧ್ಯಾಯರ ಮತ್ತು ಪ್ರಾಂಶುಪಾಲರ ಸಂಘ' ಪ್ರತಿ ವರುಷ ನಡೆಸುತ್ತಾ ಬರುತ್ತಿರುವ ಸ್ಪರ್ಧೆಗಳಲ್ಲಿ ಒಂದು. ನನಗೂ ಅಕ್ಕನಿಗೂ ಅಪ್ಪನೇ ಭಾಷಣ ಬರೆದು ಕೊಟ್ಟಿದ್ದರು. ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹೆಚ್ಚು ಕಮ್ಮಿ ಒಂದೇ  ಥರ ಇರುವ ಭಾಷಣ. ರೆಡಿ ಮೇಡ್.
ನನಗೆ ಪ್ರಥಮ ಸ್ಥಾನ; ಅಕ್ಕನಿಗೆ ದ್ವಿತೀಯ ಸ್ಥಾನ ಬಂದಿತ್ತು. ಇಬ್ಬರೂ ಮತ್ತೆ ಜಿಲ್ಲಾ ಮಟ್ಟದಲ್ಲಿ ಹೋರಾಡಿದ್ದೆವು.
ನನಗೆ ಬಹಳಷ್ಟು ಖುಷಿ ಕೊಟ್ಟ ಘಟನೆ ಇದು. ಅಕ್ಕನ ಮಾತಿಗಿಂತಲೂ ಲೇಖನಿ ತುಂಬಾ ಹರಿತವಾಗಿರುತ್ತಿತ್ತು.
ಬರ-ಬರುತ್ತಾ ಅಕ್ಕನ ಕೈಯಲ್ಲೇ ನಾನು ಭಾಷಣ ಬರೆಸಿಕೊಂಡು ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದೆ. ಈಗಲೂ ಕೆಲವೊಂದು ಸಾರಿ ಇದು ನಡೆಯುತ್ತಿದೆ!

*****
ಅಕ್ಕನ ಜೊತೆಗೆ ಗಲಾಟೆಅಥವಾ ಜಗಳ ಮಾಡಿದ್ದು ನೆನಪೇ ಇಲ್ಲ ಅನ್ನಬಹುದು. ನಮ್ಮ ಅಪ್ಪ ಅಮ್ಮ ಮನೆಯಲ್ಲಿ ನಮ್ಮನ್ನೇ ಬಿಟ್ಟು ಪೇಟೆಗೆ ಅಥವಾ ಸಂಬಂಧಿಕರ ಮನೆಗೆ ಹೊರಟರೆ, ನಾವೂ ಆಯಿತು;ಕಥೆ ಪುಸ್ತಕಗಳೂ ಆಯಿತು. ಸಂಜೆಯವರೆಗೆ ಪುಸ್ತಕಗಳ ರಾಶಿಯ ಜೊತೆ ಬಿದ್ದುಕೊಂಡಿರುತ್ತಿದ್ದೆವು. ಮದ್ಯಾಹ್ನದ ಊಟವನ್ನೂ ಮರೆತು! 'ಎಲಾ! ಅನ್ನ ಇನ್ನೂ ಹೀಗೇ ಇದೆ. ಇಬ್ಬರೂ ಊಟ ಮಾಡಲೇ ಇಲ್ಲ-ಸೋಮಾರಿಗಳು. ನಿಮ್ಮ ಈ ಕಥೆ ಪುಸ್ತಕಗಳನ್ನೆಲ್ಲಾ ಗುಜರಿಗೆ ಕೊಡುತ್ತೇವೆ' ಅಂತೆಲ್ಲಾ ಅಮ್ಮ ಹಲವು ಬಾರಿ ಕೂಗಾಡಿದ್ದು ಇದೆ. ಅಕ್ಕನಂತೂ ಪುಸ್ತಕಗಳನ್ನು ತುಂಬಾ ಹಚ್ಚಿಕೊಂಡಿದ್ದಳು. ನೆರೆಕರೆಯ ಕೆಲ ಮನೆಯಲ್ಲಂತೂ, ಅಕ್ಕ ಹೋದ ತಕ್ಷಣ ಪುಸ್ತಕಗಳ ರಾಶಿಯನ್ನು ಮನೆಯವರೇ ತಂದು ಹಾಕುತ್ತಿದ್ದರು.
ಶಾಲೆಯಲ್ಲಿ ಟೀಚರ್ ಹೇಳಿ ಕೊಟ್ಟದ್ದು ಸರಿ ಇಲ್ಲ ಎಂದುಕೆಲವು ಬಾರಿ ಟೀಚರ್ ಗಳ ಜೊತೆಗೆ ಚರ್ಚೆ ಮಾಡಿ, ಚರ್ಚೆ ಜಗಳವಾಗಿ ಬದಲಾಗಿ, ಅಪ್ಪ ಶಾಲೆಗೆ ಭೇಟಿ ಕೊಟ್ಟು, ಟೀಚರ್ ಒಬ್ಬರ 'ego' ಗೆ ಭಾರೀ ಪೆಟ್ಟಾಗಿ ಅಕ್ಕ ಶಾಲೆಯನ್ನೇ ಬದಲಾಯಿಸಿದ್ದೂ ಇದೆ.
ಓದಿದ ಪುಸ್ತಕಗಳನ್ನು ವಿಶ್ಲೇಷಿಸುವುದು, ನಂಬಬಹುದೇ ಇಲ್ಲವೇ ಎಂದು ತರ್ಕ ಹಾಕುವುದು ಅಕ್ಕನ ಸ್ಪೆಷಾಲಿಟಿ. ಈಗಲೂ ಸಹ.
*****
ಅಕ್ಕ ಹಲವು ವಿಷಯಗಳಲ್ಲಿ ನನಗೆ ಗುರು. ಅದು, 'beautiful'ನ ಸ್ಪೆಲ್ಲಿಂಗ್ ಅನ್ನು 'bea-uti-ful' ಎಂದು ಬಿಡಿಸಿ ಮನದಟ್ಟು ಮಾಡಿಸುವುದರಲ್ಲಿರಬಹುದು, ಗಣಿತದ ಪ್ರಮೇಯಗಳನ್ನು ಬಿಡಿ ಸುವುದರಲ್ಲಿರಬಹುದು. ನನಗೆ ಯಾವುದು ಕಷ್ಟವಾಗಿರುವಂಥದ್ದು ಎನ್ನುವುದು ಅಕ್ಕನಿಗೆ ಬಲು ಬೇಗ ಅರ್ಥವಾಗುತ್ತಿತ್ತು ಅನಿಸುತ್ತದೆ. ಅಕ್ಕನ 'teaching method' ನನಗೆ ತುಂಬಾ ಹಿಡಿಸುತ್ತಿತ್ತು.
'ಸ್ವದೇಸ್' ಫಿಲಂ ಬಂದುದರಲ್ಲಿ ಹೊಸತು. 'ಪಲ್ ಪಲ್ ಹೈ ಭಾರೀ ಓ... ' ಹಾಡನ್ನು ಕೇಳುತ್ತಿದ್ದೆ. ಹಾಡು ಮುಗಿದ ಮೇಲೆ, 'ಚೆನ್ನಾಗಿದೆ ಹಾಡು; ಅಲ್ವಾ?' ಎಂದು ಪಕ್ಕದಲ್ಲೇ ಕೂತಿದ್ದ ಅಕ್ಕನಲ್ಲಿ ಕೇಳಿದೆ. 'ಹ್ಞೂ. ಮನ್ ಸೇ ರಾವನ್ ಜೋ ನಿಕಾಲೇ ರಾಮ್ ಉಸ್ ಕೇ ಮನ್ ಹೈ... -ಚೆನ್ನಾಗಿದೆ ಸಾಲು' ಎಂದಳು. ಆ ಸಾಲು ಎಲ್ಲಿ ಬಂತು ಎಂದು ಕೇಳಿಸಿಕೊಳ್ಳಲು ಮತ್ತೊಂದು ಬಾರಿ ಹಾಡು ಕೇಳಿಸಿಕೊಂಡಿದ್ದೆ.
*****
ಕೆಲವೊಂದು ಸಾರಿ ಅಕ್ಕನಿಂದಾಗಿ ನಾನು ಬಯ್ಯಿಸಿಕೊಂಡದ್ದೂ ಇದೆ. ಪ್ರೈಮರಿ ಶಾಲೆಯಲ್ಲಿ ನನ್ನ ಕಳ್ಳ ಬುದ್ಧಿಗಳನ್ನು ನೋಡಿದವರು 'ಇವನಂತೂ ಅಕ್ಕನ ಥರ ಆಗುವವನಲ್ಲ' ಅಂತ ಸೀಲ್ ಹಾಕಿದ್ದಿದೆ. ನನ್ನ ಕೆಟ್ಟ ಕೈ-ಬರಹವನ್ನು ನೋಡಿ 'ಅಕ್ಕನನ್ನು ನೋಡಿ ಸ್ವಲ್ಪ ಕಲಿ' ಎಂದು ಅಪ್ಪ-ಅಮ್ಮನೂ ಆಗಾಗ ಎಚ್ಚರಿಸುತ್ತಿದ್ದರು. ಅಕ್ಕ ಇವತ್ತಿನ ಕೆಲಸವನ್ನು ಇವತ್ತೇ ಮಾಡಿ ಮುಗಿಸುವವಳು. ನಾನು 'procrastination' ಕಲಾ ನಿಪುಣ. ಅಕ್ಕ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ಗರಿಷ್ಠ ಅಂಕ ಪಡೆದಾಗ 'ಮಧು, ನೀನೂ ನೋಡಿ ಕಲಿ' ಅಂತೆಲ್ಲಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಸ್ಕೂಲ್ ಟೀಚರ್. ಅಂತಹ ಬಹಳಷ್ಟು ಸಂದರ್ಭಗಳಲ್ಲಿ ನಿರೀಕ್ಷೆ ಠುಸ್ ಆಗಿದ್ದೇ ಜಾಸ್ತಿ.
ಬಹಳಷ್ಟು ಪ್ರಯತ್ನಗಳ ಬಳಿಕವೂ ನನ್ನ ಕೈ ಬರಹ ಇನ್ನೂ ಸುಧಾರಿಸಿಲ್ಲ. ಅಕ್ಕ ಪಿಯುಸಿಯಲ್ಲಿ ಜೀವಶಾಸ್ತ್ರ (Biology) ಆರಿಸಿಕೊಂಡಿದ್ದಳು. ಮೊದಲೇ ಕಾಗೆ ಕಾಲಿನ ಕೈ ಬರಹಕ್ಕೆ ಪ್ರಸಿದ್ಧನಾದ ನಾನು ಜೀವಶಾಸ್ತ್ರ ತೆಗೆದುಕೊಳ್ಳುವ ಕೆಲಸಕ್ಕೆ ಮಾತ್ರ ಹೋಗಲ್ಲಿಲ್ಲ. ಅಕ್ಕ ಪ್ರತಿ ದಿನವೂ ಶ್ರದ್ಧೆಯಿಂದ ಬಿಡಿಸುತ್ತಿದ್ದ ಜೀವಶಾಸ್ತ್ರದ ರೆಕಾರ್ಡುಗಳನ್ನು ನೋಡಿದಾಗ 'ನಾನು ಈ ವಿಷಯ ಆರಿಸಿಕೊಂಡರೆ ಖಂಡಿತಾ ಫೇಲ್ ಆಗುತ್ತೇನೆ' ಅನ್ನಿಸುತಿತ್ತು. ಅಕ್ಕನ ಪಿಯುಸಿ Biology ಮಾರ್ಕು ತೊಂಭತ್ತು ದಾಟಿತ್ತು.
*****
ಅಕ್ಕ ಮೂಲ ವಿಜ್ಞಾನವನ್ನು ಆರಿಸಿಕೊಂಡು ಭೌತಶಾಸ್ತ್ರ(Physics)ದಲ್ಲಿ ಎಂ.ಎಸ್ಸಿ ಮುಗಿಸಿದವಳು. ನಾನು ನನ್ನ ಇಂಜಿನಿಯರಿಂಗ್ ಜೀವನದುದ್ದಕ್ಕೂ ಅಕ್ಕನ ಪಾಠವನ್ನು ಮಿಸ್ ಮಾಡಿಕೊಂಡುಬಿಟ್ಟೆ. ಅಕ್ಕನೂ ಇಂಜಿನಿಯರಿಂಗ್ ಬಂದಿದ್ದರೆ ನಾನಂತೂ ಇನ್ನೂ ಚೆನ್ನಾಗಿ ಕಲಿಯಬಹುದಿತ್ತು ಅಂತ ಹಲವು ಬಾರಿ ಅನ್ನಿಸಿದ್ದಿದೆ.
ಅಕ್ಕ ತುಂಬಾ ಮುಂದುವರೆದಿದ್ದಾಳೆ. ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದಾಳೆ. ಖಂಡಿತವಾಗಿಯೂ ಚೆನ್ನಾಗೇ ಪಾಠ ಮಾಡುತ್ತಾಳೆ. ಕ್ವಾಂಟಮ್ ಸಿದ್ದಾಂತ, ಗುರುತ್ವಾಕರ್ಷಣೆ, ನ್ಯೂಕ್ಲಿಯರ್ ಫಿಸಿಕ್ಸ್ ಗಳಲ್ಲಿ ಅಕ್ಕನಿಗೆ ಅತೀವ ಆಸಕ್ತಿ.
ಇರಲಿ. ಇಲ್ಲಿಗೆ ಎರಡು ವರುಷದ ಹಿಂದೆ ಅಕ್ಕನ ಮದುವೆಯೂ ಆಗಿದೆ. ಅಕ್ಕ ಇದೀಗ ಒಂದು ಮುದ್ದು ಮಗುವಿನ ತಾಯಿಯಾಗಿದ್ದಾಳೆ. ಅಕ್ಕ ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾಳೆ. ಅವಳಿಗೆ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು. 


[ಕೆಂಡಸಂಪಿಗೆಯಲ್ಲಿ ಪ್ರಕಟಿತ ಬರಹ. ಅಲ್ಲಿಗೆ ಲಿಂಕ್ ಇಲ್ಲಿದೆ: http://kendasampige.com/article.php?id=6270]

Wednesday, March 20, 2013

ಕೆಲ ಸಾಲುಗಳು


ಕನಸು:

ಗರಿ ಬಿಚ್ಚಿ ಹಾರುವ ಕನಸು ನನಗೂ ಇತ್ತು. ಬರುಬರುತ್ತಾ ಆಗಸಕ್ಕಿಂತ ಭುವಿಯೇ ಸುಖವೆನಿಸಿತು. 

ಮೌನ:

ನನಗಂತೂ ಮೌನ ತುಂಬಾ ನೆಮ್ಮದಿ ಕೊಡುತ್ತಿತ್ತು. ಆದರೆ ಜನ ಯಾವಾಗ ಮನಮೋಹನನನ ಜೊತೆ ಹೋಲಿಸಲಾರಂಭಿಸಿದರೋ ನಾನು ಮಾತನಾಡಲಾರಂಭಿಸಿದೆ. 

Wednesday, February 6, 2013

ಶಬ್ದ!

'ಬಂಧುಗಳೇ ! ಭಗಿನಿಯರೇ ' ಎಂದನಾ  ಸಿದ್ಧ
ಸಂತೆಯಲೂ ಸಾಸಿವೆ ಶಬ್ದ! ಕೇಳಲೋಸುಗ ಶಬ್ದ-ಶುದ್ಧ 
ಆರ್ಡರು ಮಾಡಿದಾತ ಬಸವಳಿದು ತಾ ಬಿದ್ದ 
ಗೆದ್ದವನಲ್ಲ ಸಿದ್ಧ! ಗೆದ್ದದ್ದು ಶಬ್ದ!
*****

ಶಬ್ದ ಗುಚ್ಛಗಳಲ್ಲಿ ಯಾವುದದು ಪ್ರಥಮ?
ಜಿಜ್ಞಾಸೆ ಮೂಡೆ, ಉತ್ತರಿಸಿದನು ಮಹಿಮ-
ದೇಶ ಕಾಲವ ನೋಡಿ ಆಡುವವ ಗರಿಮ 
ಬಲ್ಲವನೇ ಬಲ್ಲ ಶಬ್ದಗಳ ಮರ್ಮ!
*****


ಬೆಳೆದು ಮಾತಿಗೆ ಮಾತು ಸಮರಕೂ ಸಿದ್ಧ!
'ಪೆದ್ದ! ಯೋಚಿಸು ಮುನ್ನ!' ಸಂಧಾನದಲಿ ಬುದ್ಧ 
'ಮಾತಿನಿಂ ಕಲ್ಯಾಣ; ಪ್ರಳಯ ಬೇಕಿಲ್ಲ'
ಶಾಂತವಾಯಿತು ಜನತೆ. ಮತ್ತೆ-ಗೆದ್ದದ್ದು ಶಬ್ದ!
*****

[ಎಸ್ -ಜೆ-ಸಿ-ಇ ಕಾಲೇಜಿನ ವಾರ್ಷಿಕ ಸಾಹಿತ್ಯಕ ಹಬ್ಬ ।।ಶಬ್ದ್।। ಸಂದರ್ಭ ಬರೆದ 'instant' ಕವಿತೆ ]

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...