Sunday, July 27, 2014

ಪುತ್ತೂರಿನಲ್ಲಿ ಗಾಂಧೀಜಿ

ಇಸವಿ ಸಾವಿರದ ಒಂಭೈನೂರ ಇಪ್ಪತ್ತೇಳು ಇರಬೇಕು. ಪುತ್ತೂರಿನಿಂದ ಐದಾರು ಮೈಲಿ ದೂರದ ಮೇರಳ ಎಂಬ ಪುಟ್ಟ ಹಳ್ಳಿಯಲ್ಲಿ ನಾರಾಯಣ ಭಟ್ಟರ ವಾಸ.  ಭಟ್ಟರು ವರುಷಕ್ಕೆ ಹನ್ನೆರಡು ಸಾವಿರ ಆದಾಯ ಹೊಂದಿದ್ದವರು. ಆಗಿನ ಕಾಲದ ಶ್ರೀಮಂತ ಕೃಷಿಕರಲ್ಲಿ ಒಬ್ಬರಾಗಿದ್ದರು. ಅವರು ಸ್ವತಃ ಬೆವರಿಳಿಸಿ ದುಡಿದು ಬಾಳುವ ಪರಿಶ್ರಮಿ.
ನಿನ್ನೆ ರಾತ್ರಿ ತಾನೇ ಗೋಕುಲಾಷ್ಟಮಿಯಾಗಿದ್ದು, ಕೃಷ್ಣನಿಗೆ ಅರ್ಘ್ಯ ಕೊಟ್ಟು ಮಲಗುವಷ್ಟರಲ್ಲಿ ತಡವಾಗಿರಬೇಕು. ಅವರ ದೊಡ್ಡ ಮಗ ವಾಸುದೇವ ಬಿಟ್ಟರೆ ಉಳಿದವರು ಯಾರೂ ಇನ್ನೂ ಎದ್ದಿರಲ್ಲಿಲ್ಲ. ಆ ನವಮಿಯ ದಿವಸದ ನಿತ್ಯ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲೇ ಮುಗಿಸಿದ್ದರು ನಾರಾಯಣರು. ವಾಸುದೇವನ ದೈನಂದಿನ ಕೆಲಸವೆಂದರೆ ಬೆಳಗಿನ ಜಪ ಮುಗಿಸಿ, ಗಂಧ-ಚಂದನ ತೇದು ಕೊಡುವುದು. ಆಮೇಲೆ ಅಪ್ಪ ಪೂಜೆ ಮುಗಿಸುವವರೆಗೆ, ನಿನ್ನೆ ಕಲಿತಿದ್ದ ವೇದ ಮಂತ್ರಗಳನ್ನು ಮೆಲುಕು ಹಾಕುವುದು. ನಂತರ ಬೆಳಗಿನ ಉಪಹಾರ ಮುಗಿಸಿ ತೋಟದ ಕಡೆಗೆ ಒಂದು ಬಾರಿ ಹೋಗಿ ಬರುವುದು. 
ಅಂದು ತೋಟದ ಕಡೆಗೆ ಹೋಗಿದ್ದ ವಾಸುದೇವ ಸ್ವಲ್ಪ ಬೇಗನೇ ತಿರುಗಿ ಬಂದ. ನಾರಾಯಣ ಭಟ್ಟರು ಆಗಲೇ ಮನೆಯ ಅಂಗಳದಲ್ಲಿ ತಟ್ಟಿ ಮಡೆಯುತ್ತಿದ್ದರು. ವಾಸುದೇವ ಮನೆಗೆ ತಿರುಗಿ ಬಂದವನೇ ಅಮ್ಮನ ಬಳಿ ಏನೋ ತವಕವನ್ನು ತೋಡಿಕೊಳ್ಳಲು ಸಮಯ ನೋಡುತ್ತಿದ್ದ. ಅಪ್ಪನ ಬಳಿ ನೇರವಾಗಿ ಹೇಳಿದರೆ ಈ ಕೆಲಸ ಸುಲಭವಾಗಿ ನೆರವೇರುವುದಿಲ್ಲ ಅನ್ನುವುದು ಅವನಿಗೆ ಗೊತ್ತಿತ್ತು. 'ಅಮ್ಮ... ' ಎನ್ನುತ್ತಾ ಹಟ್ಟಿಯಲ್ಲಿ ಹಾಲು ಹಿಂಡುತಿದ್ದ ಅಮ್ಮನ ಹತ್ತಿರ ತುದಿಗಾಲಲ್ಲಿ ನಡೆಯುತ್ತಿರುವುದು ನಾರಾಯಣ ಭಟ್ಟರಿಗೆ ಕಂಡಿತು. 

"ಇಗೋ ವಾಸುದೇವ, ಬೆಳಗಿನ ಜಾವ ಹೇಳುತಿದ್ದ ಪುರುಷ ಸೂಕ್ತವನ್ನು ಮತ್ತೊಮ್ಮೆ ಹೇಳು ನೋಡೋಣ" ಎಂದರು ಭಟ್ಟರು. "ಸಹಸ್ರ ಶೀರ್ಷಃ ಪುರೂಷಃ ... " ಎಂದು ವಾಸುದೇವ ಶುರುಮಾಡುತ್ತಿದ್ದಾನಷ್ಟೇ; ತಟ್ಟಿಹೆಣೆಯುತ್ತಿದ್ದ ಭಟ್ಟರು ಕಚ್ಚೆ ಕಟ್ಟಿಕೊಂಡು ಎದ್ದು ರಪರಪನೆ ಬಂದು, "ಧರ್ ಧರ್" ಎಂದು ವಾಸುದೇವನ ಬೆನ್ನಿಗೆ ಬಾರೆ ಎಳೆದರು. "ಸ್ವರಿತ - ಅನುತತ್ತ್ವಗಳನ್ನು ಕ್ರಮಬದ್ಧವಾಗಿ ಉಚ್ಚರಿಸರಬೇಕು, ಸಹಸ್ರ ಅಲ್ಲ ಅದು ಸಹಸ್ರಾ ಅಂತ ನಿನಗೆ ಸಾವಿರ ಸಾರಿ ಹೇಳಿದರೂ ನಿಂಗೆ ಅರ್ಥ ಆಗುವುದಿಲ್ಲ. ಇನ್ನು ಪೆಟ್ಟೇ ಗತಿ ನಿಂಗೆ" ಅಂದರು. 
ಪಾಪ ವಾಸುದೇವ! ಅಮ್ಮನ ಬಳಿ ಹೇಳಬೇಕಿದ್ದ ವಿಷಯ ಈಗ ಮರೆತೇ ಹೋಗಿತ್ತು. ಅಂಗಳದ ಮೂಲೆಯಲ್ಲಿ ನಿಂತು ಮತ್ತೆ ಹತ್ತು ಬಾರಿ ಅಭ್ಯಾಸ ಮಾಡಿದ ಮೇಲೆಯೇ ಭಟ್ಟರು "ಹೂಂ, ಸಾಕು ಇವತ್ತಿಗೆ" ಅಂದಿದ್ದು.
*****

ವಾಸುದೇವನ ಸಹೋದರರೆಲ್ಲಾ ಅಷ್ಟು ಹೊತ್ತಿಗೆ ಎದ್ದಿದ್ದರು. ಬಹುಶಃ ನಾರಾಯಣ ಭಟ್ಟರ ಪೆಟ್ಟಿನ ಸದ್ದೂ, ವಾಸುದೇವನ ಅಳುವೂ ಉಳಿದವರನ್ನು ಎಬ್ಬಿಸಿರಬೇಕು. ಅಣ್ಣ ಬೆಳ್ಳಂಬೆಳಗೆ ಪೆಟ್ಟು ತಿನ್ನಿಸಿಕೊಂಡ ವಿಷಯ ಉಳಿದವರಿಗೂ ಗೊತ್ತಾಯಿತು. ಜೊತೆಗೆ ಅಪ್ಪನೂ ಭಾರೀ ಕೋಪದಲ್ಲಿ ಇದ್ದಾರೆ ಎನ್ನುವುದೂ ಅಷ್ಟೇ ಶುಭ್ರವಾಗಿತ್ತು. ನಿಜವಾಗಿ ನೋಡಿದರೆ, ಇನ್ನು ಕೆಲವೇ ದಿವಸಗಳಲ್ಲಿ ಬರಲಿರುವ ತಮ್ಮ ಎರಡನೇ ಮಗನ ಉಪನಯನದ ತಯ್ಯಾರಿ, ಇನ್ನೂ ಸಿದ್ಧವಾಗದ ತಟ್ಟಿಗಳು, ಹೀಗೆಲ್ಲಾ ಹಲವು ವಿಷಯಗಳು ತಲೆಯಲ್ಲಿರುವಾಗಲೇ ವಾಸುದೇವ ತಪ್ಪಿಸಿದ ಸ್ವರಿತ, ಭಟ್ಟರನ್ನು ಅಂಗಳದಿಂದ ಆಚೆ ಎಳೆದು ತಂದಿತ್ತು. 
ವಾಸುದೇವ ಆಗಿನ್ನೂಏಳು ವರುಷದ ಹುಡುಗ. ಆ ವರುಷದ ಮಳೆಗಾಲದಲ್ಲಿ ಜನ್ಮಾಷ್ಟಮಿಗಿಂತಲೂ ಮುಖ್ಯವಾದ ಸಂಗತಿಯೊಂದು ಪುತ್ತೂರಿನಲ್ಲಿ ಭಾರೀ ಸುದ್ದಿ ಮಾಡಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದದ್ದ ಗಾಂಧೀಜಿ ಪುತ್ತೂರಿಗೆ ಅಂದು ಬರುವವರಿದ್ದರು. ಚಕ್ಕುಲಿ ತಿನ್ನಲು ನಿನ್ನೆ ರಾತ್ರಿ ಮನೆಗೆ ಬಂದಿದ್ದ ಓರಗೆಯ ಹುಡುಗ ಕೃಷ್ಣಮೂರ್ತಿ ಗಾಂಧೀಜಿಯ ಬಗ್ಗೆ ತನಗೆ ಗೊತ್ತಿದ್ದ ಕತೆಗಳೆಲ್ಲವನ್ನೂ ನಿನ್ನೆಯೇ ವಾಸುದೇವನಿಗೆ ಹೇಳಿದ್ದ. ಅದನ್ನು ಕೇಳಿದ್ದ ವಾಸುದೇವ, ದ್ವಾಪರದ ಕೃಷ್ಣನಂತೆಯೇ ಗಾಂಧೀಜಿ ಇಂದಿನ ದೇವರು ಅಂದುಕೊಂಡಿದ್ದ. ಅದೂ ಅಲ್ಲದೆ, ಕೃಷ್ಣಮೂರ್ತಿಯು ಅವನ ಅಪ್ಪನ ಜೊತೆಗೆ ಮರುದಿವಸ ಪುತ್ತೂರಿಗೆ ಹೋಗಿ ಗಾಂಧೀಜಿಯನ್ನು ನೋಡುವವನಿದ್ದ. ಇದನ್ನು ತಿಳಿದ ವಾಸುದೇವನೂ ಅಪ್ಪನ ಜೊತೆಗೆ ಪೇಟೆಗೆ ಹೋಗುವ ಅಭಿಲಾಷೆ ಹೊಂದಿದ್ದ. 
ಆದರೆ, ಇವತ್ತು ಇನ್ನು ಅಪ್ಪನಿಗೆ ಹೇಗೆ ಹೇಳುವುದು? ಪೆಟ್ಟು ತಿಂದು ಹೆದರಿ ಕಂಗಾಲಾಗಿಬಿಟ್ಟಿದ್ದ ವಾಸುದೇವ. 
*****

ಹೊತ್ತು ನೆತ್ತಿಗೇರುತ್ತಿದೆ. ಗಾಂಧೀಜಿ ಆಗಲೇ ಬಂದಿದ್ದಿರಬಹುದು ಪುತ್ತೂರಿಗೆ. ಕೃಷ್ಣಮೂರ್ತಿ ಏನು ಮಾಡುತ್ತಿದ್ದನೋ ಏನೋ! ವಾಸುದೇವನಿಗೆ ಗಾಂಧೀಜಿಯ ಭಾಷಣ ಬೇಕಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಭಾರೀ ಕಿಚ್ಚೇನೂ ಪುತ್ತೂರಿಗೆ ಹತ್ತಿರಲಿಲ್ಲ. ಆದರೆ ಸ್ವಲ್ಪ ದೂರದ ಕಾಸರಗೋಡಿನ ಬಳಿ ಏನೋ ಗಲಾಟೆ ಆಗುತ್ತಿದೆ ಎಂದು ಕೆಲ ತಿಂಗಳ ಹಿಂದೆ ಎಲ್ಲೋ ಕೇಳಿದ್ದ ನೆನಪು ಅವನಿಗೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಅಂದರೆ ಏನೆಂದೂ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ಆದರೆ ಗಾಂಧೀಜಿಯ ಹೆಸರು ಸರಿಯಾಗಿ ಗೊತ್ತಿದೆ. ಎಲ್ಲರ ಬಾಯಿಯಲ್ಲೂ ಬರುತ್ತಿದ್ದ ಹೆಸರದು. ಒಮ್ಮೆ ನೋಡಬೇಕು ಅಂದುಕೊಂಡಿದ್ದ ವಾಸುದೇವನ ಆಸೆಯ ಬಳ್ಳಿಗೆ ಕೃಷ್ಣಮೂರ್ತಿ ನೀರೆರೆದಿದ್ದ ನಿನ್ನೆ. 
"ಊಟಕ್ಕೆ ಬನ್ನಿ... "ಎಂದು ಅಮ್ಮ ಕರೆದಾಗ ಇನ್ನಾಯಿತು ಅಂದುಕೊಂಡ ವಾಸುದೇವ. 
*****

ನಾರಾಯಣ ಭಟ್ಟರ ಊಟ ಮುಗಿಯುತ್ತಿದಂತೆ ಕೃಷ್ಣಮೂರ್ತಿಯ ಅಪ್ಪ ಗಂಗಾಧರ ಭಟ್ಟರು ಮನೆಯ ಕಡೆ ಬರುತ್ತಿದ್ದರು. ಮನೆಗೆ ಬಂದು ಶಾಲನ್ನು ಕೊಡವಿ "ಅಗುರ್ರ್ ... " ಎಂದು ತೇಗಿ ತಮ್ಮ ಊಟ ಆಗಲೇ ಆಯಿತೆಂದು ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು ಹೇಳಿದರು. ಎಲೆಯಡಿಕೆಯ ತಟ್ಟೆಯನ್ನು ಅತಿಥಿಗಳ ಎದುರಿಗಿಟ್ಟು ನಾರಾಯಣ ಭಟ್ಟರು ತಮ್ಮಕುರ್ಚಿಯ ಮೇಲೆ ಕುಳಿತರಷ್ಟೇ. ಆಗ ತಾನೇ ಊಟ ಮುಗಿಸಿ ತಟ್ಟೆ ಹಿಡಿದು ಹೊರಬಂದ ವಾಸುದೇವ "ಮಾಮ! ಗಾಂಧೀಜಿಯನ್ನು ನೋಡಿ ಆಯ್ತಾ? ಭಾರೀ ಗೌಜಿಯಾ?" ಎಂದು ಒಮ್ಮಿಂದೊಮ್ಮೆಲೇ ಕೇಳಿದ. ಕಣ್ಣು ಕೃಷ್ಣಮೂರ್ತಿ ಎಲ್ಲಿದ್ದಾನೆಂದು ಹುಡುಕುತ್ತಿತ್ತು. 
"ಇಲ್ಲ ವಾಸು. ಚಕ್ಕುಲಿ ಸರೀ ತಿಂದಿದ್ದ ಕೃಷ್ಣ ಅನಿಸ್ತದೆ. ಇವತ್ತು ಹೊಟ್ಟೆ ಸರಿ ಇಲ್ಲ ಅವನಿಗೆ. ಡಾಕ್ಟರರ ಬಳಿ ಹೋಗಿ ಬರುವಷ್ಟರಲ್ಲಿ ಹನ್ನೆರಡು ಗಂಟೆ ಆಯ್ತು. ಇನ್ನೆಂತ ಹೋಗುವುದು? ಭಾಷಣ ಮುಗ್ದಿರ್ತದೆ ಈಗ" ಅಂದರು ಗಂಗಾಧರ ಮಾವ. 

"ಗಾಂಧೀಜಿ ಬರುವುದು ಇವತ್ತಾ? ಹೌದಾ?" ಅಂದರು ಆಶ್ಚರ್ಯದಿಂದ ನಾರಾಯಣ ಭಟ್ಟರು. 
ಭಟ್ಟರಿಗೆ ರಾಜಕೀಯ, ಸ್ವಾತಂತ್ರ ಹೋರಾಟದ ವಿಷಯಗಳಲ್ಲಿ ಭಾರೀ ಆಸಕ್ತಿಯೂ ಇತ್ತು. ಕಾಸರಗೋಡಿನ ಬಳಿ ನಡೆದಿದ್ದ ಮಾಪಿಳ್ಳೆ ಕದನದಲ್ಲಿ ಸತ್ತು ಹೋದ ಅನೇಕರಲ್ಲಿ ಅವರ ಪರಿಚಯದವರೂ ಇದ್ದರು. 
ಗಾಂಧೀಜಿಯ ಜೀವನದ ಹಲವು ಕತೆಗಳನ್ನು ಊರಿನ ಹಲವು ಜನಗಳಿಗೆ ಆಗಾಗ ಇವರು ಹೇಳುತ್ತಿದ್ದರು. ವಾಸುದೇವನೂ ಇವನ್ನು ಕೇಳಿಸಿಕೊಳ್ಳುತ್ತಿದ್ದ. "ಅಪ್ಪಯ್ಯ, ಒಂದು ಸಾರಿ ಗಾಂಧೀಜಿಯನ್ನು ನೋಡ್ಲಿಕ್ಕೆ ಹೋಗುವ" ಎಂದು ಹಿಂದೊಂದು ಬಾರಿ ಹೇಳಿದ್ದ. "ಇವತ್ತು ನೀನು ಅಗ್ನಿ ಸೂಕ್ತ ಕಲಿತ್ರೆ, ಒಂದು ದಿವಸ ಗಾಂಧೀಜಿಯನ್ನು ನೋಡುವುದಕ್ಕೆ ಕರೆದುಕೊಂಡು ಹೋಗುತ್ತೇನೆ" - ಎಂದು ಅಂದು ಅಂದಿದ್ದರು ಭಟ್ಟರು. 
ಆದರೆ, ಇಂದು ಉಪನಯನದ ಕೆಲಸ, ಅಷ್ಟಮಿಯ ಚಕ್ಕುಲಿಯ ನಡುವೆ ಅದು ಹೇಗೋ ಗಾಂಧೀಜಿಯ ಆಗಮನವನ್ನು ಮರೆತಿದ್ದರು. 
ಬೈರಾಸು ಕಟ್ಟಿಕೊಂಡಿದ್ದ ವಾಸುದೇವ ಇನ್ನೂ ತಟ್ಟೆ ಕೈಯಲ್ಲಿ ಹಿಡಿದುಕೊಂಡು ಅಪ್ಪನ ಕಡೆ ಗುರ್ರೆಂದು ನೋಡುತ್ತಿದ್ದ. ಭಟ್ಟರಿಗೆ ಈಗ ಎಲ್ಲಾ ಅರ್ಥವಾಯಿತು; ಬೆಳಗಿನಿಂದ ವಾಸುದೇವನ ಮನದಲ್ಲಿದ್ದ ಕಸಿವಿಸಿಯನ್ನೂ, ಸ್ವರಿತ ತಪ್ಪಿದ್ದರ ಕಾರಣವನ್ನೂ ತಕ್ಷಣ ಅರಿತರು. 
ಸಮಯ ಮೀರುತ್ತಿದೆ ಎಂದು ಅನ್ನಿಸಿತು ಭಟ್ಟರಿಗೆ. ಆದರೂ ಒಂದು ಪ್ರಯತ್ನ ಮಾಡಿ ಬಿಡೋಣ ಎಂದು ಯೋಚಿಸಿ, "ಭಾವ, ಬನ್ನಿ ನಡಿಯಿರಿ, ಪುತ್ತೂರು ಕಡೆ ಒಮ್ಮೆ ಹೋಗಿ ಬರುವ" ಎಂದರು. 
ಇನ್ನೂ ತಟ್ಟೆ ತೊಳೆಯುತ್ತಿದ್ದ ವಾಸುದೇವನಿಗೆ, "ಅಂಗಿ ಹಾಕಿಕೋ, ಬಾ, ಹೋಗಿ ಬರುವ ಒಮ್ಮೆ" ಎಂದರು. 
*****

ಆತುರ ಆತುರದಲ್ಲೇ ವಾಸುದೇವನೂ ಹೊರಟು ನಿಂತ. ಚಾವಡಿಯಲ್ಲಿದ್ದ ಗಡಿಯಾರ ಢಣ್-ಢಣ್ ಎಂದು ಎರಡು ಬಾರಿ ಶಬ್ದ ಮಾಡಿತು. ಧಾರಾಕಾರ ಸುರಿಯುತ್ತಿದ್ದ ಆ ಮಳೆಯಲ್ಲಿ ವಾಸುದೆವನನ್ನು ಭಟ್ಟರು ಎತ್ತಿಕೊಂಡರು! ಬಹುಶಃ ತಾನೇನೂ ತಪ್ಪು ಮಾಡಿದೆ ಎಂದೆನಿಸಿ ಮಗನನ್ನು ಎತ್ತಿ ನಡೆಸುತ್ತಿದರೆನೋ!
ಗಂಗಾಧರ ಮಾವ ಹಿಂದೆ ನಡೆಯುತ್ತಿದ್ದರು. ಅಪ್ಪ ಹಾಕಿಕೊಂಡಿದ್ದ ಗೊರಬಿನ ನಡುವಿಂದ ಹಿಂದೆ ತಲೆ ಹಾಕಿ ವಾಸುದೇವ ಆಗಾಗ ಮಾವನ ಜೊತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದ. 

*****
ಮೇರಳ, ಪುತ್ತೂರಿನಿಂದ ಮಡಿಕೇರಿ ರಸ್ತೆಯ ಬದಿಯಲ್ಲಿನ ಹಳ್ಳಿ. ತಮ್ಮ ಗದ್ದೆಯ ಬದುಗಳಲ್ಲಿ ಹಾದು ಬರುತ್ತಿದ್ದಾಗ ಭಟ್ಟರಿಗೆ ಏನನ್ನಿಸಿತೋ ಏನೋ. ಭತ್ತದ ತೆನೆಯೊಂದನ್ನು ಕುಯ್ದುಕೊಂಡು ವಾಸುದೇವನ ಕೈಯಲ್ಲಿ ಕೊಟ್ಟರು. ಮಡಿಕೇರಿ ಕಡೆಯ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಮೂರು ಘಂಟೆಯಾಗಿರಬೇಕು. 
ಮಾರ್ಗದ ಎದುರುಗಡೆಯಿಂದ ಭಾರೀ ವಾದ್ಯ-ನಗಾರಿಗಳು ಕೇಳತೊಡಗಿದವು. ಎತ್ತರವಿದ್ದ ಆ ಮಾರ್ಗ ಹತ್ತುತ್ತಿದ್ದ ಭಟ್ಟರಿಗೆ ಮುಂದೆ ಏನಾಗುತ್ತಿದೆ ಎಂದು ಸ್ಪಷ್ಟವಾಗತೊಡಗಿತ್ತು. ಗಾಂಧೀಜಿ ಮುಂದೆ ಸಂಪಾಜೆ ಕಡೆ ಹೋಗುವವರಿದ್ದರು. ಅವರನ್ನು ಸುಳ್ಯ ತನಕವೂ ಮೆರವಣಿಗೆಯಲ್ಲಿ ಬಿಟ್ಟು ಕೊಡಲು ಜನ ನೆರೆದಿದ್ದರು. ತಡವಾಗಿದೆ, ಆದರೂ ಬೀಳ್ಕೊಡುಗೆಯನ್ನಾದರೂ ನೋಡುತ್ತೇನಲ್ಲಾ ಎಂದುಕೊಂಡರು ಭಟ್ಟರು. ವಾಸುದೇವ ಈಗ ಅಪ್ಪನ ಭುಜದಿಂದ ಕೆಳಗಿಳಿದಿದ್ದ. ಮಾರ್ಗದ ಬದಿಯಲ್ಲಿ ಇನ್ನೂ ಒಂದಷ್ಟು ಜನರು ಆಗ ನೆರೆದರು. ಅವರಲ್ಲಿ ಒಂದಾಗಿ ಭಟ್ಟರೂ ಸೇರಿಕೊಂಡರು. 
ಗಾಂಧೀಜಿ ಅಸ್ಪಷ್ಟದಿಂದ ಸ್ಪಷ್ಟವಾಗಿ ಕಾಣಿಸಲಾರಂಭಿಸಿದರು. ಪಲ್ಲಕ್ಕಿಯಲ್ಲಿ ಕೂತಿದ್ದ ಶ್ವೇತ ವಸ್ತ್ರದ ಗಾಂಧೀಜಿ ತಮ್ಮ ಕಣ್ಣಿನೆದುರು ಸಾಗುತ್ತಲೇ, "ಅಲ್ಲಿ ಅಲ್ಲಿ ನೋಡು ಮಗೂ, ಗಾಂಧೀಜಿ" ಎಂದು ವಾಸುದೇವನಿಗೆ ತೋರಿಸಿದರು. 
ಪಲ್ಲಕ್ಕಿ ಸರಿಯಾಗಿ ಎದುರು ಬರುತ್ತಿದಂತೆ ಭತ್ತದ ತೆನೆಯ ನಡುವೆ ಕೈಮುಗಿದ ವಾಸುದೇವ. ಮಂದಹಾಸದ ಗಾಂಧೀಜಿ ಒಮ್ಮಿಂದೊಮ್ಮೆಲೆ ಏನೋ ಪ್ರಶ್ನಾರ್ಥಕ ರೂಪದಿಂದ ವಾಸುದೇವನನ್ನು ನೋಡಿದರು. ಪಲ್ಲಕ್ಕಿ ಸ್ವಲ್ಪ ದೂರದಲ್ಲಿ ನಿಂತಿತು. ಕೆಳಗಿಳಿದ ಗಾಂಧೀಜಿ ಕೈಸನ್ನೆಯ ಮೂಲಕ ಬಾಲಕ ವಾಸುದೇವನನ್ನು ಕರೆದರು. ಭಯ ಸಂಕೋಚಗಳಿಂದ ಮುಂದೆ ನಡೆದ ಹುಡುಗ.ವಾಸುದೇವನ ಕೆನ್ನೆಯನ್ನು ಗಾಂಧೀಜಿ ಸವರಲು, ಭಟ್ಟರು ಓಡಿ ಬಂದು ಕೈಯಲ್ಲಿದ್ದ ತೆನೆಯನ್ನು ಗಾಂಧೀಜಿಗೆ ಕೊಡುವಂತೆ ಮಗನಿಗೆ ಹೇಳಿದರು. ಮುಗ್ಧ ನಗುವಿನಿಂದ ತೆನೆಯನ್ನು ಗಾಂಧಿಯ ಕೈಗಿತ್ತ ವಾಸುದೇವ. ಗಾಂಧಿಜಿ ಮುಗುಳ್ನಕ್ಕರು. 
ಪಲ್ಲಕ್ಕಿ ಮುಂದೆ ಸಾಗಿತು. 

[ಸತ್ಯ ಘಟನೆಗೆ ಅಲ್ಲಲ್ಲಿ ಸಾಂದರ್ಭಿಕ ಮಸಾಲೆ ಹಾಕಿದ್ದೇನೆ. ಗಾಂಧೀಜಿ, ಈಗಿನ ಪುತ್ತೂರು ಬಸ್ ಸ್ಟಾಂಡಿನಲ್ಲಿ ಅಂದು ಭಾಷಣ ಮಾಡಿದ್ದರಂತೆ. ಅದರ ನೆನಪಿಗಾಗಿ ಇದ್ದ ಗಾಂಧೀಜಿ ಪ್ರತಿಮೆ ಬಸ್ ಸ್ಟಾಂಡಿನ ಮೂಲೆಯ ಅಶ್ವತ್ಥ ಕಟ್ಟೆಯ ಬಳಿ ಈಗಲೂ ಇದೆ.]

Monday, December 16, 2013

'ಸಾರ್ಥಕ್ಯ'

ಇಳೆಯ ಒಡಲಿನೊಳಗಿನಿಂದ
ಪುಳಕಗೊಂಡು ಮೊಳಕೆಯೊಡೆದು
ಬೆಳೆದು ಬಂದು ನಗುತ ನಿಂತ ಕುಸುಮದಳಗಳು।
ಬೆಳಕು ಹರಿಯೆ ಪುಷ್ಪಪಾತ್ರೆ
ಯೊಳಗೆ ಸೇರಿ ಹರಿಯ ಪೂಜೆ
ಗಳಿಗೆಯಲ್ಲಿ ತೊಡಗಿಕೊಂಡು ಶ್ರೇಷ್ಠವಾದವು।।
***

ಮನದ ಬುಡದಿ ಕೊರೆಯುತಿದ್ದ
ದಿನವು ಭುಗಿಲು ಒಡೆಯುತ್ತಿದ್ದ
ತನ್ನ ಮಧುರ ಪ್ರೇಮ ಬಾಣ ಅಂದು ಹೂಡಲು।
ಜನುಮದರಸಗದುವು ತಾಗಿ
ತನುವು ಮನವು ಕರಗಿ ಕೃಷ್ಣ
ಬನದಿ ಹೊನಲಿನಲ್ಲಿ ಅಪ್ಪಿಕೊಂಡ ರಾಧೆಯ।।
***

ಷಟ್ಪದಿ: ಭೋಗ
______

Sunday, May 26, 2013

ಅಕ್ಕ

ನಾನು ಎರಡನೇ ಕ್ಲಾಸಿನಲ್ಲಿರುವಾಗ ನಡೆದ ಘಟನೆ. ನಾನಾಗ ನಮ್ಮ ಕ್ಲಾಸಿನ 'ಮಿನಿ ರೌಡಿ' ಎಂದು ಗುರುತಿಸಿಕೊಂಡಿದ್ದೆ. ಜನರನ್ನು ರೇಗಿಸೋದಂದರೆ ಏನೋ ಒಂದು ಖುಷಿ ಆಗ. ಅಸಂಬದ್ಧ ಶಬ್ದಗಳನ್ನು ಉಪಯೋಗಿಸಿ ಬಯ್ಯೋದೆಂದರಂತೂ ಖುಷಿಯೋ ಖುಷಿ.
ಅಕ್ಕನ ಜೊತೆಗೆ ಶಾಲೆಗೆ ನಡೆದು ಹೋಗುತ್ತಿದ್ದೆ. ಪಕ್ಕದ ಮನೆಯ ಮಾವ ಅನತಿ ದೂರದಲ್ಲಿ ಪದ್ಮುಂಜದ ಕಡೆಗೇ ಹೊರಟಿದ್ದರು.  ಸಿಕ್ಕಿದ್ದೇ ಚಾನ್ಸ್ ಅಂತ 'ಓಯ್! _____ ಮಾಮ' ಅಂತೆಲ್ಲಾ ಸುಮ್ಮನೇ ಬಯ್ದಿದ್ದೆ. ಅವರಿಗೇನೂ ಕೇಳಿಸಿರಲಿಲ್ಲ. ಕೇಳಬೇಕೆಂಬ ಉದ್ದೇಶವೂ ನನ್ನದಾಗಿರಲಿಲ್ಲ. ಸುಮ್ಮನೆ ಹುಚ್ಚು ಖುಷಿ ಅಷ್ಟೇ!
ಮಾವನಿಗೆ ಕೇಳದಿದ್ದರೂ ನನ್ನ ಅಕ್ಕ ಅದನ್ನು ಕೇಳಿಸಿಕೊಂಡಿದ್ದಳು. ತನ್ನ ಮುದ್ದಿನ ತಮ್ಮನ ಬಾಯಿಯಿಂದ ಬಂದಿದ್ದ ಅಪ್ಪಟ ಸಂಸ್ಕೃತ ಅವಳಿಗಂತೂ ಸುತಾರಾಂ ಇಷ್ಟವಾಗಿರಲಿಲ್ಲ.
ಸಂಜೆಯವರೆಗೆ ತೆಪ್ಪಗೆ ಶಾಲೆಯಲ್ಲಿದ್ದ ಅಕ್ಕ ಸಂಜೆ ಮನೆ ತಲುಪುತ್ತಲೇ ಅಪ್ಪನಿಗೆ ಸಂಪೂರ್ಣ ವರದಿ ಒಪ್ಪಿಸಿದಳು. ಅಪ್ಪನೋ ಸಂಜೆ ಹೊತ್ತಿಗೆ ಸಾಮಾನ್ಯವಾಗಿ ಕೋಪದಲ್ಲೇ ಇರುವವರು. ವಿಷಯ ತಿಳಿಯುತ್ತಲೇ ಅಕ್ಕನ ಎದುರಿಗೇ ನನ್ನನ್ನುಧರ್ರನೆ ಎಳೆದು ರಪ-ರಪ-ರಪ-ರಪನೆ ಬೆನ್ನಿಗೆ ಹೊಡೆದರು. ಬೆನ್ನಿನಲ್ಲಿ ಅಪ್ಪನ ಬರಿಗೈಯ ಕೆಂಪಾದ ಅಚ್ಚುಗಳು.
ಈ ಘಟನೆಯನ್ನು ಪ್ರತ್ಯಕ್ಷ ವೀಕ್ಷಿಸಿದ ಅಕ್ಕನಿಗಂತೂ ಗಳ-ಗಳನೆ ಅಳು! ಯಾಕಾದರೂ ದೂರು ಹೇಳಿದೆನೋ ಅಂತ. ಗಡಗಡನೆ ನಡುಗುತ್ತಿದ್ದಳು ಸಹ.
ಬಹುಶಃ ಅಕ್ಕ 'complaint' ಕೊಟ್ಟದ್ದು ಅದೇ ಮೊದಲು ಅದೇ ಕೊನೆ ಇರಬೇಕು. ನಾನೇನಾದರೂ ಮಾಡಿದ ಕೆಲಸ ಅವಳಿಗೆ ಸರಿ  ಎನಿಸಲಿಲ್ಲವೆಂದಾದರೆ ಅವಳೇ ಸರಿಯಾಗಿ ಹೇಳಿ ಕೊಡುತ್ತಿದ್ದಳು.
ಬರಬರುತ್ತಾ ನನ್ನ ಕಪಿ ಚೇಷ್ಟೆಗಳು ನಿಧಾನವಾಗಿ ಕಡಿಮೆಯಾದವು ಸಹ.
*****

ಅಕ್ಕ ಸಂಕೋಚ ಸ್ವಭಾವದವಳು. ನಾನಿನ್ನೂ ಬಾಲವಾಡಿಯಲ್ಲಿರಬೇಕಾದರೆ ಅಕ್ಕ ಎರಡನೇ ಕ್ಲಾಸು. ಅಕ್ಕನಿಗೆ ಶಾಲೆಯಲ್ಲಿ ಯಾವುದೋ ಸ್ಪರ್ಧೆಯೊಂದರಲ್ಲಿ ಪ್ರಥಮ ಸ್ಥಾನ ಬಂದಿತ್ತು-ಮೊದಲನೇ ಬಾರಿಯ 'competition' ಇರಬೇಕು. ಬಹುಮಾನ ವಿತರಣಾ ಸಮಾರಂಭ. 'ಪ್ರಥಮ ಸ್ಥಾನ- ಮಂಗಳಾ ಗೌರಿ' ಎಂದು ಉದ್ಘೋಷಕರು ಘೋಷಿಸಿದ್ದರು. ಅಲ್ಲೇ ಕೂತಿದ್ದ ಅಕ್ಕನಿಗೆ ಅದ್ಯಾಕೋ ಹೆದರಿಕೆ. ಎರಡನೇ ಸಾರಿ ಹೆಸರು ಕೂಗಿದಾಗಲೂ ಅಕ್ಕ ತನ್ನ ಜಾಗ ಬಿಟ್ಟು ಏಳಲಿಲ್ಲ.
ಮೂರನೇ ಬಾರಿ ಹೆಸರು ಕೂಗಿದಾಗ ನಾನು ಛಂಗನೆ ಎದ್ದು ಓಡಿ ಬಹುಮಾನ ಸ್ವೀಕರಿಸಿದ್ದೆ. ಹೇಗಿದ್ದರೂ ನಮ್ಮ ಮನೆಗೇ ಬರುವಂಥದ್ದು ಈ ಸ್ಟೀಲ್ ಗ್ಲಾಸು ಅನ್ನೋದಂತೂ ಖಂಡಿತ. ಯಾರು ತೆಗೆದುಕೊಂಡರೇನು!? -ಅಂದುಕೊಂಡಿದ್ದೆ ನಾನು.

ಅದಾದ ಮೇಲೆ ಯಾವುದೇ ಸ್ಪರ್ಧೆಯಲ್ಲಿ ಅಕ್ಕ ಗೆದ್ದರೂ ಹೆಡ್ ಮಾಸ್ಟರ್ ಕೆರ್ಮುಣ್ಣಾಯ ಮಾಸ್ಟರು 'ಈ ಬಲಣಿ; ಪ್ರೈಜ್ ಗೆತೋಣು' (ನೀನು ಬಾರೋ,ಪ್ರೈಜ್ ತೆಗೆದುಕೋ) ಅಂತ ನನ್ನನ್ನೇ ಕರೆಯುತ್ತಿದ್ದರು!

೨೦೦೭ರಲ್ಲಿ ಅಕ್ಕ ಉಜಿರೆಯ 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್'ನಿಂದ 'best out going student' ಪ್ರಶಸ್ತಿ ಸ್ವೀಕರಿಸುವಾಗ ನಾನಿದನ್ನು ಒಂದು ಸಾರಿ ನೆನಪಿಸಿಕೊಂಡಿದ್ದೆ!

*****

ನಾನು ಹೈಸ್ಕೂಲು ಕಲಿತದ್ದು ಉಪ್ಪಿನಂಗಡಿಯಲ್ಲಿ. ಪುತ್ತೂರು ತಾಲೂಕು. ಅಕ್ಕ ಹತ್ತನೇ ತರಗತಿ ಕಲಿತದ್ದು ದುರ್ಗಾಂಬಾ ಹೈಸ್ಕೂಲು ಆಲಂಕಾರಿನಲ್ಲಿ. ಪುತ್ತೂರು ತಾಲೂಕೇ. ನಾನು ಎಂಟನೇ ತರಗತಿಯಲ್ಲಿ ಇರಬೇಕಾದರೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯೊಂದರಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದೆ. ಅಕ್ಕನ ಶಾಲೆಯಿಂದ ಅಕ್ಕ. ಜಿಲ್ಲಾ 'ಮುಖ್ಯೋಪಾಧ್ಯಾಯರ ಮತ್ತು ಪ್ರಾಂಶುಪಾಲರ ಸಂಘ' ಪ್ರತಿ ವರುಷ ನಡೆಸುತ್ತಾ ಬರುತ್ತಿರುವ ಸ್ಪರ್ಧೆಗಳಲ್ಲಿ ಒಂದು. ನನಗೂ ಅಕ್ಕನಿಗೂ ಅಪ್ಪನೇ ಭಾಷಣ ಬರೆದು ಕೊಟ್ಟಿದ್ದರು. ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹೆಚ್ಚು ಕಮ್ಮಿ ಒಂದೇ  ಥರ ಇರುವ ಭಾಷಣ. ರೆಡಿ ಮೇಡ್.
ನನಗೆ ಪ್ರಥಮ ಸ್ಥಾನ; ಅಕ್ಕನಿಗೆ ದ್ವಿತೀಯ ಸ್ಥಾನ ಬಂದಿತ್ತು. ಇಬ್ಬರೂ ಮತ್ತೆ ಜಿಲ್ಲಾ ಮಟ್ಟದಲ್ಲಿ ಹೋರಾಡಿದ್ದೆವು.
ನನಗೆ ಬಹಳಷ್ಟು ಖುಷಿ ಕೊಟ್ಟ ಘಟನೆ ಇದು. ಅಕ್ಕನ ಮಾತಿಗಿಂತಲೂ ಲೇಖನಿ ತುಂಬಾ ಹರಿತವಾಗಿರುತ್ತಿತ್ತು.
ಬರ-ಬರುತ್ತಾ ಅಕ್ಕನ ಕೈಯಲ್ಲೇ ನಾನು ಭಾಷಣ ಬರೆಸಿಕೊಂಡು ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದೆ. ಈಗಲೂ ಕೆಲವೊಂದು ಸಾರಿ ಇದು ನಡೆಯುತ್ತಿದೆ!

*****
ಅಕ್ಕನ ಜೊತೆಗೆ ಗಲಾಟೆಅಥವಾ ಜಗಳ ಮಾಡಿದ್ದು ನೆನಪೇ ಇಲ್ಲ ಅನ್ನಬಹುದು. ನಮ್ಮ ಅಪ್ಪ ಅಮ್ಮ ಮನೆಯಲ್ಲಿ ನಮ್ಮನ್ನೇ ಬಿಟ್ಟು ಪೇಟೆಗೆ ಅಥವಾ ಸಂಬಂಧಿಕರ ಮನೆಗೆ ಹೊರಟರೆ, ನಾವೂ ಆಯಿತು;ಕಥೆ ಪುಸ್ತಕಗಳೂ ಆಯಿತು. ಸಂಜೆಯವರೆಗೆ ಪುಸ್ತಕಗಳ ರಾಶಿಯ ಜೊತೆ ಬಿದ್ದುಕೊಂಡಿರುತ್ತಿದ್ದೆವು. ಮದ್ಯಾಹ್ನದ ಊಟವನ್ನೂ ಮರೆತು! 'ಎಲಾ! ಅನ್ನ ಇನ್ನೂ ಹೀಗೇ ಇದೆ. ಇಬ್ಬರೂ ಊಟ ಮಾಡಲೇ ಇಲ್ಲ-ಸೋಮಾರಿಗಳು. ನಿಮ್ಮ ಈ ಕಥೆ ಪುಸ್ತಕಗಳನ್ನೆಲ್ಲಾ ಗುಜರಿಗೆ ಕೊಡುತ್ತೇವೆ' ಅಂತೆಲ್ಲಾ ಅಮ್ಮ ಹಲವು ಬಾರಿ ಕೂಗಾಡಿದ್ದು ಇದೆ. ಅಕ್ಕನಂತೂ ಪುಸ್ತಕಗಳನ್ನು ತುಂಬಾ ಹಚ್ಚಿಕೊಂಡಿದ್ದಳು. ನೆರೆಕರೆಯ ಕೆಲ ಮನೆಯಲ್ಲಂತೂ, ಅಕ್ಕ ಹೋದ ತಕ್ಷಣ ಪುಸ್ತಕಗಳ ರಾಶಿಯನ್ನು ಮನೆಯವರೇ ತಂದು ಹಾಕುತ್ತಿದ್ದರು.
ಶಾಲೆಯಲ್ಲಿ ಟೀಚರ್ ಹೇಳಿ ಕೊಟ್ಟದ್ದು ಸರಿ ಇಲ್ಲ ಎಂದುಕೆಲವು ಬಾರಿ ಟೀಚರ್ ಗಳ ಜೊತೆಗೆ ಚರ್ಚೆ ಮಾಡಿ, ಚರ್ಚೆ ಜಗಳವಾಗಿ ಬದಲಾಗಿ, ಅಪ್ಪ ಶಾಲೆಗೆ ಭೇಟಿ ಕೊಟ್ಟು, ಟೀಚರ್ ಒಬ್ಬರ 'ego' ಗೆ ಭಾರೀ ಪೆಟ್ಟಾಗಿ ಅಕ್ಕ ಶಾಲೆಯನ್ನೇ ಬದಲಾಯಿಸಿದ್ದೂ ಇದೆ.
ಓದಿದ ಪುಸ್ತಕಗಳನ್ನು ವಿಶ್ಲೇಷಿಸುವುದು, ನಂಬಬಹುದೇ ಇಲ್ಲವೇ ಎಂದು ತರ್ಕ ಹಾಕುವುದು ಅಕ್ಕನ ಸ್ಪೆಷಾಲಿಟಿ. ಈಗಲೂ ಸಹ.
*****
ಅಕ್ಕ ಹಲವು ವಿಷಯಗಳಲ್ಲಿ ನನಗೆ ಗುರು. ಅದು, 'beautiful'ನ ಸ್ಪೆಲ್ಲಿಂಗ್ ಅನ್ನು 'bea-uti-ful' ಎಂದು ಬಿಡಿಸಿ ಮನದಟ್ಟು ಮಾಡಿಸುವುದರಲ್ಲಿರಬಹುದು, ಗಣಿತದ ಪ್ರಮೇಯಗಳನ್ನು ಬಿಡಿ ಸುವುದರಲ್ಲಿರಬಹುದು. ನನಗೆ ಯಾವುದು ಕಷ್ಟವಾಗಿರುವಂಥದ್ದು ಎನ್ನುವುದು ಅಕ್ಕನಿಗೆ ಬಲು ಬೇಗ ಅರ್ಥವಾಗುತ್ತಿತ್ತು ಅನಿಸುತ್ತದೆ. ಅಕ್ಕನ 'teaching method' ನನಗೆ ತುಂಬಾ ಹಿಡಿಸುತ್ತಿತ್ತು.
'ಸ್ವದೇಸ್' ಫಿಲಂ ಬಂದುದರಲ್ಲಿ ಹೊಸತು. 'ಪಲ್ ಪಲ್ ಹೈ ಭಾರೀ ಓ... ' ಹಾಡನ್ನು ಕೇಳುತ್ತಿದ್ದೆ. ಹಾಡು ಮುಗಿದ ಮೇಲೆ, 'ಚೆನ್ನಾಗಿದೆ ಹಾಡು; ಅಲ್ವಾ?' ಎಂದು ಪಕ್ಕದಲ್ಲೇ ಕೂತಿದ್ದ ಅಕ್ಕನಲ್ಲಿ ಕೇಳಿದೆ. 'ಹ್ಞೂ. ಮನ್ ಸೇ ರಾವನ್ ಜೋ ನಿಕಾಲೇ ರಾಮ್ ಉಸ್ ಕೇ ಮನ್ ಹೈ... -ಚೆನ್ನಾಗಿದೆ ಸಾಲು' ಎಂದಳು. ಆ ಸಾಲು ಎಲ್ಲಿ ಬಂತು ಎಂದು ಕೇಳಿಸಿಕೊಳ್ಳಲು ಮತ್ತೊಂದು ಬಾರಿ ಹಾಡು ಕೇಳಿಸಿಕೊಂಡಿದ್ದೆ.
*****
ಕೆಲವೊಂದು ಸಾರಿ ಅಕ್ಕನಿಂದಾಗಿ ನಾನು ಬಯ್ಯಿಸಿಕೊಂಡದ್ದೂ ಇದೆ. ಪ್ರೈಮರಿ ಶಾಲೆಯಲ್ಲಿ ನನ್ನ ಕಳ್ಳ ಬುದ್ಧಿಗಳನ್ನು ನೋಡಿದವರು 'ಇವನಂತೂ ಅಕ್ಕನ ಥರ ಆಗುವವನಲ್ಲ' ಅಂತ ಸೀಲ್ ಹಾಕಿದ್ದಿದೆ. ನನ್ನ ಕೆಟ್ಟ ಕೈ-ಬರಹವನ್ನು ನೋಡಿ 'ಅಕ್ಕನನ್ನು ನೋಡಿ ಸ್ವಲ್ಪ ಕಲಿ' ಎಂದು ಅಪ್ಪ-ಅಮ್ಮನೂ ಆಗಾಗ ಎಚ್ಚರಿಸುತ್ತಿದ್ದರು. ಅಕ್ಕ ಇವತ್ತಿನ ಕೆಲಸವನ್ನು ಇವತ್ತೇ ಮಾಡಿ ಮುಗಿಸುವವಳು. ನಾನು 'procrastination' ಕಲಾ ನಿಪುಣ. ಅಕ್ಕ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ಗರಿಷ್ಠ ಅಂಕ ಪಡೆದಾಗ 'ಮಧು, ನೀನೂ ನೋಡಿ ಕಲಿ' ಅಂತೆಲ್ಲಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಸ್ಕೂಲ್ ಟೀಚರ್. ಅಂತಹ ಬಹಳಷ್ಟು ಸಂದರ್ಭಗಳಲ್ಲಿ ನಿರೀಕ್ಷೆ ಠುಸ್ ಆಗಿದ್ದೇ ಜಾಸ್ತಿ.
ಬಹಳಷ್ಟು ಪ್ರಯತ್ನಗಳ ಬಳಿಕವೂ ನನ್ನ ಕೈ ಬರಹ ಇನ್ನೂ ಸುಧಾರಿಸಿಲ್ಲ. ಅಕ್ಕ ಪಿಯುಸಿಯಲ್ಲಿ ಜೀವಶಾಸ್ತ್ರ (Biology) ಆರಿಸಿಕೊಂಡಿದ್ದಳು. ಮೊದಲೇ ಕಾಗೆ ಕಾಲಿನ ಕೈ ಬರಹಕ್ಕೆ ಪ್ರಸಿದ್ಧನಾದ ನಾನು ಜೀವಶಾಸ್ತ್ರ ತೆಗೆದುಕೊಳ್ಳುವ ಕೆಲಸಕ್ಕೆ ಮಾತ್ರ ಹೋಗಲ್ಲಿಲ್ಲ. ಅಕ್ಕ ಪ್ರತಿ ದಿನವೂ ಶ್ರದ್ಧೆಯಿಂದ ಬಿಡಿಸುತ್ತಿದ್ದ ಜೀವಶಾಸ್ತ್ರದ ರೆಕಾರ್ಡುಗಳನ್ನು ನೋಡಿದಾಗ 'ನಾನು ಈ ವಿಷಯ ಆರಿಸಿಕೊಂಡರೆ ಖಂಡಿತಾ ಫೇಲ್ ಆಗುತ್ತೇನೆ' ಅನ್ನಿಸುತಿತ್ತು. ಅಕ್ಕನ ಪಿಯುಸಿ Biology ಮಾರ್ಕು ತೊಂಭತ್ತು ದಾಟಿತ್ತು.
*****
ಅಕ್ಕ ಮೂಲ ವಿಜ್ಞಾನವನ್ನು ಆರಿಸಿಕೊಂಡು ಭೌತಶಾಸ್ತ್ರ(Physics)ದಲ್ಲಿ ಎಂ.ಎಸ್ಸಿ ಮುಗಿಸಿದವಳು. ನಾನು ನನ್ನ ಇಂಜಿನಿಯರಿಂಗ್ ಜೀವನದುದ್ದಕ್ಕೂ ಅಕ್ಕನ ಪಾಠವನ್ನು ಮಿಸ್ ಮಾಡಿಕೊಂಡುಬಿಟ್ಟೆ. ಅಕ್ಕನೂ ಇಂಜಿನಿಯರಿಂಗ್ ಬಂದಿದ್ದರೆ ನಾನಂತೂ ಇನ್ನೂ ಚೆನ್ನಾಗಿ ಕಲಿಯಬಹುದಿತ್ತು ಅಂತ ಹಲವು ಬಾರಿ ಅನ್ನಿಸಿದ್ದಿದೆ.
ಅಕ್ಕ ತುಂಬಾ ಮುಂದುವರೆದಿದ್ದಾಳೆ. ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದಾಳೆ. ಖಂಡಿತವಾಗಿಯೂ ಚೆನ್ನಾಗೇ ಪಾಠ ಮಾಡುತ್ತಾಳೆ. ಕ್ವಾಂಟಮ್ ಸಿದ್ದಾಂತ, ಗುರುತ್ವಾಕರ್ಷಣೆ, ನ್ಯೂಕ್ಲಿಯರ್ ಫಿಸಿಕ್ಸ್ ಗಳಲ್ಲಿ ಅಕ್ಕನಿಗೆ ಅತೀವ ಆಸಕ್ತಿ.
ಇರಲಿ. ಇಲ್ಲಿಗೆ ಎರಡು ವರುಷದ ಹಿಂದೆ ಅಕ್ಕನ ಮದುವೆಯೂ ಆಗಿದೆ. ಅಕ್ಕ ಇದೀಗ ಒಂದು ಮುದ್ದು ಮಗುವಿನ ತಾಯಿಯಾಗಿದ್ದಾಳೆ. ಅಕ್ಕ ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾಳೆ. ಅವಳಿಗೆ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು. 


[ಕೆಂಡಸಂಪಿಗೆಯಲ್ಲಿ ಪ್ರಕಟಿತ ಬರಹ. ಅಲ್ಲಿಗೆ ಲಿಂಕ್ ಇಲ್ಲಿದೆ: http://kendasampige.com/article.php?id=6270]

Wednesday, March 20, 2013

ಕೆಲ ಸಾಲುಗಳು


ಕನಸು:

ಗರಿ ಬಿಚ್ಚಿ ಹಾರುವ ಕನಸು ನನಗೂ ಇತ್ತು. ಬರುಬರುತ್ತಾ ಆಗಸಕ್ಕಿಂತ ಭುವಿಯೇ ಸುಖವೆನಿಸಿತು. 

ಮೌನ:

ನನಗಂತೂ ಮೌನ ತುಂಬಾ ನೆಮ್ಮದಿ ಕೊಡುತ್ತಿತ್ತು. ಆದರೆ ಜನ ಯಾವಾಗ ಮನಮೋಹನನನ ಜೊತೆ ಹೋಲಿಸಲಾರಂಭಿಸಿದರೋ ನಾನು ಮಾತನಾಡಲಾರಂಭಿಸಿದೆ. 

Wednesday, February 6, 2013

ಶಬ್ದ!

'ಬಂಧುಗಳೇ ! ಭಗಿನಿಯರೇ ' ಎಂದನಾ  ಸಿದ್ಧ
ಸಂತೆಯಲೂ ಸಾಸಿವೆ ಶಬ್ದ! ಕೇಳಲೋಸುಗ ಶಬ್ದ-ಶುದ್ಧ 
ಆರ್ಡರು ಮಾಡಿದಾತ ಬಸವಳಿದು ತಾ ಬಿದ್ದ 
ಗೆದ್ದವನಲ್ಲ ಸಿದ್ಧ! ಗೆದ್ದದ್ದು ಶಬ್ದ!
*****

ಶಬ್ದ ಗುಚ್ಛಗಳಲ್ಲಿ ಯಾವುದದು ಪ್ರಥಮ?
ಜಿಜ್ಞಾಸೆ ಮೂಡೆ, ಉತ್ತರಿಸಿದನು ಮಹಿಮ-
ದೇಶ ಕಾಲವ ನೋಡಿ ಆಡುವವ ಗರಿಮ 
ಬಲ್ಲವನೇ ಬಲ್ಲ ಶಬ್ದಗಳ ಮರ್ಮ!
*****


ಬೆಳೆದು ಮಾತಿಗೆ ಮಾತು ಸಮರಕೂ ಸಿದ್ಧ!
'ಪೆದ್ದ! ಯೋಚಿಸು ಮುನ್ನ!' ಸಂಧಾನದಲಿ ಬುದ್ಧ 
'ಮಾತಿನಿಂ ಕಲ್ಯಾಣ; ಪ್ರಳಯ ಬೇಕಿಲ್ಲ'
ಶಾಂತವಾಯಿತು ಜನತೆ. ಮತ್ತೆ-ಗೆದ್ದದ್ದು ಶಬ್ದ!
*****

[ಎಸ್ -ಜೆ-ಸಿ-ಇ ಕಾಲೇಜಿನ ವಾರ್ಷಿಕ ಸಾಹಿತ್ಯಕ ಹಬ್ಬ ।।ಶಬ್ದ್।। ಸಂದರ್ಭ ಬರೆದ 'instant' ಕವಿತೆ ]

Thursday, December 20, 2012

ಮೋದಿ ಗುಜರಾತಿಗೆ ಮಾತ್ರವಲ್ಲ ; ಭಾರತಕ್ಕೂ ಬೇಕು


ನಾನೇನೂ ಬಿಜೆಪಿ ಬೆಂಬಲಿಗನಲ್ಲ ; ಪ್ರಜಾಪ್ರಭುತ್ವ ಹೊಂದಿರುವ ಭವ್ಯ ಭಾರತದ ಸಾಮಾನ್ಯ  ಪ್ರಜೆಯಷ್ಟೇ .
ಗುಜರಾತ್ ಬಗ್ಗೆ ಕೇಳಿದ್ದೇನೆ, ನರೇಂದ್ರ  ಮೋದಿ (ನಮೋ) ಬಗ್ಗೆ ಕೇಳಿದ್ದೇನೆ. ಹತ್ತು ವರುಷಗಳಲ್ಲಿ ಗುಜರಾತ್ ಕಂಡ ಅಭೂತಪೂರ್ವ ಯಶಸ್ಸನ್ನು ನೋಡುತ್ತಿದ್ದೇನೆ.
ಭಾರತವನ್ನೂ ನೋಡುತ್ತಿದ್ದೇನೆ.

2G, ಕಾಮನ್ ವೆಲ್ತ್  ಗೇಮ್ಸ್ ಹಗರಣಗಳು, ಪೆಟ್ರೋಲ್ ರೇಟು ಏರಿಕೆ, ಯುರೇನಿಯಂ  ಹಗರಣವನ್ನೇ ಮುಚ್ಚಿ ಹಾಕಿದ್ದು ನಮ್ಮೆದುರೇ ನಡೆದೇ ಇದೆ.
ಭಾರತದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಕೇವಲ ಒಂದು ಶೇಕಡಾ ಎಂದು ಪ್ರಧಾನಿ ಬೇಜಾರು ಮಾಡಿಕೊಂಡಿದ್ದಾರೆ. ಅದು ಸತ್ಯವೂ  ಕೂಡ.
ಅಲ್ಲ! ಗುಜರಾತ್ ನಲ್ಲಿ ಮಾತ್ರ ಅದೇಗೆ ಹದಿನಾರು ಶೇಕಡಾ ಪ್ರಗತಿ ಕೃಷಿ ಕ್ಷೇತ್ರದಲ್ಲಿ?

http://pmindia.gov.in/index.php, http://www.narendramodi.in ವೆಬ್ ಸೈಟ್ ಗಳನ್ನು ನೋಡುತ್ತಾ ಇದ್ದೇನೆ.
ಮನಮೋಹನ ಸಿಂಗರ ವೆಬ್ ಪೇಜ್ ನಲ್ಲಿ ಆಕರ್ಷಣೀಯವಾದ ಒಂದೇ ಒಂದು ಪುಟ ಇಲ್ಲ. ಅದೇ ನರೇಂದ್ರ ಮೋದಿಯ ಒಂದೊಂದು ಭಾಷಣದ ವೀಡಿಯೊ ಕೂಡ ಗುಜರಾತ್ ಬೆಳೆದು ಬಂದ  ದಾರಿಯನ್ನು ಸಾರಿ ಹೇಳುತ್ತಿವೆ.

ಬಂಡವಾಳಶಾಹಿಗಳು ಗುಜರಾತ್ ಎಂದರೆ ಮುಗಿ ಬೀಳುತ್ತಿದ್ದಾರೆ. ಆದರೂ ನಮೋ ಸ್ವಾರ್ಥಿಯಲ್ಲ. ದೇಶದ ಒಳಿತಿಗಾಗಿ ಅದೆಷ್ಟೋ ಬಹು ದೊಡ್ಡ ಕೈಗಾರಿಕೆಗಳನ್ನು ಬೇರೆ ರಾಜ್ಯಗಳಿಗೂ ಕಳುಹಿಸಿ ಕೊಟ್ಟಿದ್ದಾರೆ.
ಇಂಥವರು ನಮಗೆ ಬೇಕು.ಭಾರತಕ್ಕೆ ಬೇಕು.
ಮೌನ ಯುಗ ಮುಗಿಯಬೇಕು. ಅದು ಸಾಕಾಗಿದೆ.

ಕಾಡು ನೋಡೋಣ!

Sunday, June 10, 2012

ಭಾಷೆ, ಭಾಷಾಂತರ ಮತ್ತು ಅವಾಂತರ !

ನನ್ನ ಮನೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ 'ಪದ್ಮುಂಜ' ಎನ್ನುವ ಹಳ್ಳಿಯೊಂದರಲ್ಲಿ. ನನ್ನ ಅಪ್ಪ-ಅಮ್ಮ ಇಬ್ಬರೂ ಹಿಂದಿ ಭಾಷೆಯ ಪದವೀಧರರು. ಅಪ್ಪ ಕೃಷಿಕ; ಅಮ್ಮ ಹಿಂದಿ ಶಿಕ್ಷಕಿ. ಹೀಗಾಗಿ, ರಜಾ ದಿನಗಳಲ್ಲಿ ಕೆಲವಷ್ಟು ಹುಡುಗರು 'ಹಿಂದಿ ಪಾಠ' ಹೇಳಿಸಿಕೊಳ್ಳಲು ಆಗಾಗ ಮನೆಗೆ ಬರುತ್ತಿದ್ದರು. ಮನೆಗೆ ಯಾರೇ ಬರಲಿ; ಬಂದವರ ಜೊತೆ ಹಿಂದಿಯಲ್ಲೇ ಮಾತನಾಡಬೇಕೆಂದು ಮನೆಪಾಠಕ್ಕೆ ಬರುವ ಹುಡುಗರಿಗೆ ಅಪ್ಪ-ಅಮ್ಮ ಖಡಕ್ಕಾಗಿ ಹೇಳಿಯಾಗಿತ್ತು.


ಆ ದಿನ ಸಂಜೆ ವೇಳೆ ಪಕ್ಕದ ಮನೆಯ ಹರೀಶಣ್ಣ ಒಂದು ದೂರು ಕೊಡೋದಕ್ಕೋಸ್ಕರ ಮನೆಗೆ ಬಂದಿದ್ದರು. 'ನಮ್ಮ ಮನೆಯ ದನ ಅವರ ತೋಟದಲ್ಲಿ ಮೇಯುತ್ತಾ ಇದೆ' ಅನ್ನೋದು ಆ ದೂರು. ಹರೀಶಣ್ಣನೂ ಒಂದು ಕಾಲದಲ್ಲಿ ಅಮ್ಮನ ವಿದ್ಯಾರ್ಥಿಯೇ! ಹೀಗಾಗಿ, ಆ ದೂರನ್ನು 'ಹಿಂದೀಕರಿಸಿ' ಹೇಳಿದ್ದು ಹೀಗೆ:
"ಹಮಾರೇ ಪೆತ್ತ ತುಮ್ಹಾರೆ ಪಿತ್ತಿಲ್ ಮೇ ಮೇಯ್ತಾ ಹೈ. ಕ್ಯಾ ಕರ್ನಾ?"
'ಪೆತ್ತ' ಎಂದರೆ ತುಳುವಿನಲ್ಲಿ ದನ. ಪಿತ್ತಿಲ್ ಎಂದರೆ ಹಿತ್ತಿಲು. ಹರೀಶಣ್ಣನ ದೂರನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗು ಬಂದಿತ್ತು!

*****

ಪತ್ರ ಬರೆಯುವ ಕಲೆ, ಈಗಿನ ಬಹು ಮಂದಿಗೆ ಗೊತ್ತೇ ಇಲ್ಲವೇನೋ! ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಅಪ್ಪ ಆಗಾಗ ಅಂಚೆ ಕಾರ್ಡ್ಗಳನ್ನೂ ತಂದಿತ್ತು, ಅಜ್ಜಿ, ಮಾವಂದಿರಿಗೆ ನಮ್ಮ ಕೈಯಲ್ಲಿ ಪತ್ರ ಬರೆಸುತ್ತಿದ್ದರು.
ಅದು ನಾನು ಬರೆದ ಮೊದಲ ಪತ್ರ. ನನ್ನ ಅಜ್ಜಿ (ಅಪ್ಪನ ಅಮ್ಮ)ಗೆ ಆ ಪತ್ರ ಬರೆದಿದ್ದೆ. ಬರೆದ ನಂತರ ಪರಿಶೀಲನೆಗಾಗಿ ಅಪ್ಪನ ಕೈಗಿತ್ತೆ. ಮನಸೊಳಗೇ ನಕ್ಕ ಅಪ್ಪ, ಆ ಪತ್ರವನ್ನು ಅಮ್ಮನ ಕೈಗಿತ್ತರು. ಅಮ್ಮ ನಕ್ಕರೂ ಗುಟ್ಟು ಬಿಟ್ಟು ಕೊಡಲಿಲ್ಲ. ನಾನು ಮತ್ತೆರಡು ಬಾರಿ ಪತ್ರ ಓದಿಕೊಂಡರೂ ತಪ್ಪೇನೆನ್ನುವುದು ತಿಳಿಯಲೇ ಇಲ್ಲ. ಮರುದಿನ ನನ್ನ ತರಗತಿಯಲ್ಲಿ (ಅಮ್ಮ ನನ್ನ ಶಿಕ್ಷಕಿಯಾಗಿದ್ದರು ಕೂಡ) ಎಲ್ಲರೆದುರು ಮರ್ಯಾದೆ ತೆಗೆಯಬೇಕೆ?!


"ಅಜ್ಜಿಯವರಲ್ಲಿ ಬೇಡುವ ಆಶೀರ್ವಾದಗಳು"- ಎನ್ನಬೇಕಾಗಿದ್ದದ್ದು "ಅಜ್ಜಿಯವರಿಗೆ ಮಾಡುವ ಆಶೀರ್ವಾದಗಳು" ಎಂದಾಗಿತ್ತು. ಬರೆಯಬೇಕಾದರೆ ನನ್ನ ಭಾವನೆ ಸರಿಯಾಗಿತ್ತು. ಅಕ್ಷರದ ರೂಪ ಬೇರೆಯಾಗಿತ್ತು!


"ಮನುಷ್ಯನ ಮಾತಿಗೆ ಅರ್ಥವಿಲ್ಲ; ಭಾವನೆಗೆ ಅರ್ಥವಿರೋದು" ಅಂತ ಕವಿಯೊಬ್ಬರು ಹೇಳಿದ್ದಾರೆ. ಹೌದು; 'ಕುಡಿಯುವ ನೀರು' ಅಂತ ಬೋರ್ಡು ಇರುತ್ತೆ; ನೀರನ್ನು ಕುಡಿಯಬಹುದು ಅಂತ ಅರ್ಥ. 'ಕಚ್ಚುವ ನಾಯಿ' ಅಂತ ಬೋರ್ಡು ಇರುತ್ತೆ; ನಾಯಿಯನ್ನು ಕಚ್ಚ ಬಹುದು ಅಂತಲೇ ?!


*****


ಶಾಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ, ಅಮ್ಮ ಉತ್ತರ ಪತ್ರಿಕೆಗಳನ್ನು ತಿದ್ದಲು ಮನೆಗೆ ತರುವುದು ಮಾಮೂಲು. ಮೊನ್ನೆ ಊರಿಗೆ ಹೋಗಿದ್ದಾಗ, ಅಮ್ಮನ ಮೇಜಿನ ಮೇಲೆ ಒಂದಷ್ಟು ಉತ್ತರ ಪತ್ರಿಕೆಗಳು ಕಂಡವು. 'ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ' ಎಂಬ ಮುಖ್ಯ ಪ್ರಶ್ನೆಯತ್ತ ಕುತೂಹಲದಿಂದ ಕಣ್ಣಾಡಿಸಿದೆ. "ತುಲಸೀ ಹರ್ ಘರ್ ಕೀ ಆಂಗನ್ ಕೀ ಶೋಭಾ ಹೋತೀ ಹೈ" - ಎನ್ನುವುದನ್ನು ಹೀಗೆಲ್ಲಾ ಅನುವಾದಿಸಲಾಗಿತ್ತು. :


-> "ತುಳಸೀ ದಾಸರು ಪ್ರತಿ ಮನೆಯ ಅಂಗಳದಲ್ಲೂ ಶೋಭಿಸುತ್ತಾರೆ"


-> "ತುಳಸೀ ಗಿಡ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುತ್ತದೆ" (greenhouse effect???)


-> "ತುಳಸಿ ಮನೆಯ ಅಂಗಳದ ತುಂಬೆಲ್ಲಾ ಶೋಭಿಸುತ್ತಿರುತ್ತದೆ"


ಪ್ರತಿ ವರುಷ ತುಲಸೀ ದಾಸರ 'ದೋಹಾ'ದ ಮೇಲೆ ಪ್ರಶ್ನೆ ಖಾಯಂ ಆಗಿ ಬರುತ್ತದಂತೆ. ಈ ವರುಷ ಇದೇ ಆ ಪ್ರಶ್ನೆ ಎಂದುಕೊಂಡ ವಿದ್ಯಾರ್ಥಿಗಳು ಹೀಗೆಲ್ಲಾ ಅನುವಾದಿಸಿದ್ದರು!!!


*****


ಭಾಷೆಯನ್ನೋದೇ ಹಾಗೆ. ಅದರ ಶೈಲಿ, ನಾವು ಯೋಚಿಸುವ ಶೈಲಿ ಎರಡೂ ಒಂದೇ ನೇರ ರೇಖೆಯಲ್ಲಿರುತ್ತವೆ. ಮಾತಿನಲ್ಲಿ ಕನ್ನಡ, ಇಂಗ್ಲೀಷ್ ಎಂದೆಲ್ಲಾ ಇರುವ ಹಾಗೆ ನಮ್ಮ ಸಾಫ್ಟ್ ವೇರ್ ಭಾಷೆಗಳಲ್ಲೂ ಸಿ, ಸಿ ಪ್ಲಸ್ ಪ್ಲಸ್, ಜಾವ ಎಂದೆಲ್ಲಾ ಹಲವು ಪ್ರಬೇಧಗಳು. ಒಬ್ಬ ಯಾವುದಾದರೂ ಒಂದು ಭಾಷಾ ನಿಷ್ಣಾತ ಆಗಿದ್ದರೆ ಸಾಕು, ಆತನನ್ನು  ಬುದ್ದಿವಂತ ಎಂದು ಪರಿಗಣಿಸಲಾಗುತ್ತದೆ. ಉಳಿದ ಭಾಷೆಗಳಲ್ಲೂ ಅದೇ ರೀತಿಯ 'logic'ಗಳು ಇರುತ್ತವೆ ಅನ್ನೋದು ಹಿಂಬದಿಯ ಸತ್ಯ.
ಇನ್ನು ನಮ್ಮ ಎಫ್ ಎಂ ರೇಡಿಯೋ ಕಾರ್ಯಕ್ರಮ ನಿರೂಪಕರ ವಿಷಯಕ್ಕೆ ಬರೋಣ. ಹಲವು ಭಾಷೆಗಳನ್ನು ಕಟ್ ಪೇಸ್ಟ್ ಮಾಡಿ, ಕೊನೆಯಲ್ಲೊಂದಷ್ಟು ಅಚ್ಚಗನ್ನಡದ ಒಗ್ಗರಣೆ ಹಾಕಿ ರಾತ್ರೋ ರಾತ್ರಿ ಜನಪ್ರಿಯರಾಗುತ್ತಾರೆ ಇವರು! ಮೊನ್ನೆ ಒಂದು ಎಫ್ ಎಂ ರೇಡಿಯೋ ನಿರೂಪಕ ಮಹಾಶಯನೊಬ್ಬ "ಈಗ sky is bending ಹಾಡು ಬರ್ತಾ ಇದೆ...  ಕೇಳಿ ಕೇಳಿಸ್ತಾ ಇರಿ" ಅಂದ. "ಗಗನವೇ ಬಾಗಿ ಭುವಿಯನು ... "ಎನ್ನುವ ಹಾಡು ಬಂದಾಗ ನಾನೊಮ್ಮೆ ದಂಗಾಗಿ ಬಿಟ್ಟೆ!


ತಪ್ಪಾಗಿ ಮಾತನಾಡುವುದು ಮಾಮೂಲಿಯಾಗಿ ಬಿಟ್ಟಿದೆ, ರೂಢಿಯಾಗಿ ಬಿಟ್ಟಿದೆ. 'ಬೃಹತ್ ಮಹಿಳೆಯರ ಸಮಾವೇಶ', 'ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ', 'ಉಚಿತ ಕಣ್ಣಿನ ಶಸ್ತ್ರ  ಚಿಕಿತ್ಸೆ', 'ಮಾಜಿ ಕರ್ನಾಟಕದ ಮುಖ್ಯ ಮಂತ್ರಿ' ಮುಂತಾದ ಪದಪುಂಜಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. 'ಬೃಹತ್ ಮಹಿಳೆಯರು' ಎಂದರೇನು? ಭಾಗವಹಿಸಲು ಬೇಕಾದ 'ಮಿನಿಮಮ್ ಸೈಜ್' ಅರ್ಹತೆಯನ್ನೂ ಅಲ್ಲಿಯೇ ನಮೂದಿಸಬೇಕಲ್ಲವೇ?!


*****


ರಾಜ್ಯಗಳನ್ನು ಭಾಷಾವಾರು ಹಂಚಿಕೆ ಮಾಡಿ ತುಂಬಾ ಸಮಯವಾಯಿತು. ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳಿ. ಶಾಸ್ತ್ರೀಯ ಸ್ಥಾನ-ಮಾನ ಪಡೆದ, ಪಡೆಯದ ಎಲ್ಲಾ ಭಾಷೆಗಳೂ ಇಲ್ಲಿ ಗುಯ್ ಗುಡುತ್ತಿರುತ್ತವೆ. ನಮ್ಮ ವಿಶಾಲ ಹೃದಯವಂತಿಕೆ ಗೊತ್ತೇ ಇದೆಯಲ್ಲ? ನಾವಾಗಿಯೇ ಅನ್ಯರ ಭಾಷೆಯನ್ನು ಗೌರವಿಸಿ ಅದರಲ್ಲೇ ಮಾತನಾಡಿಸುತ್ತೇವೆ. ತಪ್ಪು-ಸರಿಗಳ ಲೆಕ್ಕಾಚಾರ ನಿಮಗೆ ಬಿಟ್ಟದ್ದು. ಆದರೆ ಮಾತನಾಡುವ 'ಭಾವನೆ' ಮಾತ್ರ ಸ್ವಂತದ್ದಾಗಿದ್ದರೆ ಚೆಂದ.


*****


ನಾನು ಮನೆ ಬಿಟ್ಟು ಮೈಸೂರು ಬಂದ ದಿನಗಳಲ್ಲಿ ನನ್ನ 'ಮಂಗಳೂರು ಕನ್ನಡ'ದ ಬಗ್ಗೆ ಹಲವಾರು 'ಕಮೆಂಟು'ಗಳು ಬಂದಿದ್ದವು. "ಎಂತದು ಮಾರಾಯರೇ? ಮಂಡೆ ಬೆಚ್ಚ ಮಾಡಬೇಡಿ" ಎಂಬ ತಮಾಷೆಯ ಪ್ರತಿಕ್ರಿಯೆಯ ಜೊತೆಗೆ "ಅದೇನಪ್ಪ? ಬರೆದದ್ದನ್ನೇ ಮಾತನಾಡುತ್ತೀರಾ!" ಅಂತ ಆಶ್ಚರ್ಯವೂ ಜೊತೆಗೂಡುತ್ತಿತ್ತು. ಬರೆದಂತೆಯೇ ಮಾತನಾಡಬಹುದಾದ ಕೆಲವೇ ಭಾಷೆಗಳಲ್ಲಿ  ಕನ್ನಡವೂ ಒಂದು! ಇರಲಿ; ಮುಂದೊಂದು ದಿನ 'ಸ್ಪಷ್ಟವಾಗಿ ಕನ್ನಡ ಮಾತನಾಡುವುದೇ ಗಿನ್ನೆಸ್ ದಾಖಲೆಗೆ ಸೇರಿಸಬಹುದಾದ ಸಾಧನೆ' ಎಂದಾಗ ಬಹುದೇನೋ!
"ಅಣ್ಣಾ, ಅಯ್ಯಾ, ತಮ್ಮಾ, ಶ್ರೀಯುತರೇ" -ಗಳು "ಲೋ, ಮಚಾ, ಮಗಾ, ಗುರೂ"-ಗಳಾಗುತ್ತಿವೆ!
ಅಪ್ಪಟ ಕನ್ನಡ ಹಳೆಗನ್ನಡವಾಗುತ್ತಿದೆ!


*****


'ಮಾತಿನಿಂ ನಡೆ-ನುಡಿಯು, ಮಾತಿನಿಂ ಹಗೆ-ಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕೆ
ಮಾತೇ ಮಾಣಿಕವು ಸರ್ವಜ್ಞ'
-ಅಂತ ಸರ್ವಜ್ಞ ಹೇಳಿಲ್ಲವೇ?

ಈಗ ಮೊದಲನೇ ವಾಕ್ಯದ ವಿಶ್ಲೇಷಣೆ ಮಾಡೋಣ. ಮಾತಿನಂತೆಯೇ ಮನುಷ್ಯನ ವ್ಯವಹಾರ ಅನ್ನೋದು ಮೊದಲನೇ ವಾಕ್ಯವಾಯಿತು. ನಮ್ಮ ಇಂದಿನ ವ್ಯವಹಾರವನ್ನೇ ನೋಡಿ: ನಮ್ಮದಲ್ಲದವರ, ಪರ-ದೇಶಿಗಳ ಕೆಲಸವನ್ನು ಮಾಡುತ್ತೇವೆ. ಪರರ ಭಾಷೆಯನ್ನೇ ಆಡುತ್ತೇವೆ. ಆದರೆ ನನಗೊಂದು ಜಿಜ್ಞಾಸೆ. ನಮ್ಮ ಮಾತಿನಿಂದಾಗಿಯೇ ಪರರ ಕೆಲಸ(ವ್ಯವಹಾರ)ವನ್ನು ಮಾಡಬೇಕಾಯಿತೆ? ಅಥವಾ, ಇಂತಹ ಕೆಲಸದಿಂದಾಗಿಯೇ ಪರರ ಭಾಷೆಯನ್ನು ಆಡಬೇಕಾಯಿತೇ?
ಜೀವನಾಧಾರಕ್ಕಾಗಿ ಈ ವ್ಯವಹಾರವನ್ನು ಮಾಡುತ್ತಿದ್ದೇನೆ. ಹಾಗಾಗಿಯೇ ಮಾತೂ ಬದಲಾಗಿ ಬಿಟ್ಟಿದೆ. "ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎನ್ನುವ ದಾಸರ ಕೀರ್ತನೆಯನ್ನು ಹಾಡುವುದರೊಂದಿಗೆ ಸರ್ವಜ್ಞನ ವಚನದ ವಿಶ್ಲೇಷಣೆಯನ್ನು ನಿಲ್ಲಿಸಬೇಕಾಗುತ್ತದೆ!


ಮೂಗನೊಬ್ಬ ನಮ್ಮ ಬೆಂಗಳೂರಿನ ಬಾಡಿಗೆ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದಾನೆ. ನಮ್ಮ ಬಡಾವಣೆಯ ಬಹುಪಾಲು ಎಲ್ಲರ ಮನೆಯ ಕೆಲಸವನ್ನೂ ಮಾಡುತ್ತಾನೆ. ದಿನ ಪತ್ರಿಕೆ, ಹಾಲು ಮೊಸರು ಹಾಕುವುದು, ಕಸ ಗುಡಿಸುವುದು, ಗಾರೆ ಕೆಲಸ , ಹೀಗೆ ಹಲವು ಕೆಲಸಗಳನ್ನು ಮಾಡುತ್ತಾನೆ. "ನಿನಗೆ ಮಾತನಾಡಲು ಬರುತ್ತಿದ್ದರೆ ಏನು ಮಾಡುತ್ತಿದೆ?" ಎಂದು ಕೇಳಿದರೆ, "ಇದೇ ಕೆಲಸವನ್ನೇ ಮಾಡುತ್ತಿದೆ. ನನ್ನ ಮಟ್ಟಿನಲ್ಲಿ ಮಾತಿಗೂ ಜೀವನಕ್ಕೂ ಆಷ್ಟೇನೂ ಸಂಬಂಧವಿಲ್ಲ" ಎನ್ನುವುದನ್ನು ನಟನೆಯ ಮೂಲಕವೇ ತೋರಿಸುತ್ತಾನೆ.


"ಒಂದು ಸಾರಿ ಆ ಸರ್ವಜ್ಞನಿಗೆ ಈತನನ್ನು ತೋರಿಸಬೇಕು" -ಎಂದು ಆಗಾಗ ಅನಿಸುತ್ತದೆ!
*****


ಆಂಗ್ಲ ಭಾಷಾ ಮೋಹವಿದೆ ಎಂದ ಮಾತ್ರಕ್ಕೆ ಜನರೆಲ್ಲಾ 'ಆಂಗ್ಲ ಭಾಷಾ ಪಂಡಿತ'ರಾಗುತ್ತಿದ್ದಾರೆ ಅಂದುಕೊಂಡರೆ ಅದು ಶುದ್ಧ ತಪ್ಪು. ಅಲ್ಲೂ ತಪ್ಪು ಮಾಮೂಲು. 'I am is a boy' ಎಂದು ಚಿಕ್ಕವನಿದ್ದಾಗ ಶಿಕ್ಷಕರೊಬ್ಬರು ಹೇಳಿ ಕೊಟ್ಟ ನೆನಪು ನನಗೆ! ಇನ್ನು ಕೆಲವೊಂದು ಬಾರಿ ಪರಿಶುದ್ಧತೆ ಅತಿರೇಕಕ್ಕೆ ಹೋಗುವುದುಂಟು. 'pipe under test' ಅನ್ನುವ ಎಚ್ಚರಿಕೆಯ ಫಲಕದ ಕೆಳಗಡೆ 'ಪೈಪ್ ಕೆಳಗಡೆ ಪರೀಕ್ಷೆ' ಅಂತ word-to-word ಭಾಷಾಂತರಿಸಿದ್ದು ಬೆಂಗಳೂರಿನ ಹೊರ ವರ್ತುಲ ರಸ್ತೆಯುದ್ದಕ್ಕೂ ಇತ್ತೀಚೆಗೆ  ಕಂಡು ಬಂದಿತ್ತು. 'ಪಾಶ್ಚಾತ್ಯಮಿತ್ಯೇವ ನ ಸಾಧು ಸರ್ವಂ' ಅನ್ನೋದು ನಮ್ಮ ಜನಕ್ಕೆ ಯಾವಾಗ ಕಂಡು ಬರುತ್ತೋ!


"ಭಾವನೆಗೆ ಮಾತ್ರ ಅರ್ಥ ಇರೋದು ಅಂತ ನೀವೇ ಹೇಳಿದಿರಲ್ಲ? ಮತ್ಯಾಕೆ ಮಾತಿನಲ್ಲಿ ತಪ್ಪು ಕಂಡು ಹುಡುಕುತ್ತೀರ?" ಎಂದು ಕೇಳಿದವರಿಗೆ 'ತಪ್ಪು ಮಾತನಾಡಿದರೆ ತಪ್ಪು ಭಾವನೆಯೇ ಬರುತ್ತೆ' ಎಂದು ಹೇಳಲು ಮೇಲಿನವು ಎರಡು ಉದಾಹರಣೆಗಳು!


*****
ನಮ್ಮಲಿ ಭಾಷಾ ವೈವಿಧ್ಯತೆ ಇರುವುದು ಹೇಗೆ ಹೆಮ್ಮೆ ಪದ ಬೇಕಾದ ವಿಷಯವೋ, ಹಾಗೆಯೇ ಪದಗಳ ದುರ್ಬಳಕೆಯನ್ನು ಮಾಡುವುದು ವಿಷಾದನೀಯ ಸಂಗತಿ. ಭಾಷೆಯನ್ನು ಬಳಸುವಾಗ 'best', 'most' 'worst' ಮೊದಲಾದ 'superlative' ಪದಗಳು ನಮ್ಮ ಬತ್ತಳಿಕೆಯಲ್ಲಿ ಇರಬೇಕೇ ಹೊರತು ಎಲ್ಲಾ ಕಡೆ ಬಳಸಬಾರದು ಎನ್ನುವುದು ಬಲ್ಲವರ ಮಾತು. ಇಂದಂತೂ 'better than the best' ನಂತಹ ಪದ-ಪುಂಜಗಳೇ ಎಲ್ಲೆಡೆ ಕೇಳಿ ಬರುತ್ತಿವೆ, ಜನಪ್ರಿಯವಾಗುತ್ತಿವೆ. ಗೋಡೆ ಬರಹಗಳು, ಜಾಹೀರಾತುಗಳು, ರೇಡಿಯೋ ಮೊದಲಾದ ಮಾಧ್ಯಮಗಳಲ್ಲೂ ಮಿಂಚುತ್ತಿವೆ! ನಮ್ಮ ನಿಜವಾದ ಶ್ರೀಮಂತಿಕೆ ಮರೆಯಲ್ಲೇ ಉಳಿಯುತ್ತಿದೆ.


ಒಂದು ವೇಳೆ ಇಂದು ಬೆಂಗಳೂರಿಗೆ ನ್ಯೂಟನ್ನನು ಬಂದರೆ, ನ್ಯೂಟನ್ನನ ಬೆಂಗಳೂರಿನ ನಿಯಮಗಳು' ಈ ರೀತಿ ಬರ ಬಹುದೇನೋ!:


-> ನಿಯಮ ೧: ಭಾಷಾ ಶುದ್ಧತೆಯು ಯೋಚನಾ ಶುದ್ಧತೆಗೆ ನೇರ ಅನುಪಾತದಲ್ಲಿರುತ್ತದೆ.


-> ನಿಯಮ ೨: ಸಾಮಾನ್ಯವಾಗಿ, ನೀವೇ ಸ್ವಯಂ ಪ್ರೇರಿತರಾಗಿ ಕನ್ನಡದಲ್ಲಿ ಮಾತನಾಡದಿದ್ದರೆ, ನಿಮ್ಮೆದುರಿಗಿರುವ 'ಬೆಂಗಳೂರು ಕನ್ನಡಿಗರು' ಅನ್ಯ ಭಾಷೆಯನ್ನು ಉಪಯೋಗಿಸುವುದನ್ನು ಮುಂದುವರಿಸುತ್ತಾರೆ.


-> ನಿಯಮ ೩: ಬೆಂಗಳೂರಿಗೆ ಹತ್ತಿರವಿದ್ದಷ್ಟು ನಿಮ್ಮ ಕನ್ನಡದಲ್ಲಿ ಅನ್ಯ ಭಾಷಾ ಪದ ಪ್ರಯೋಗ ಜಾಸ್ತಿ ಇರುತ್ತದೆ.


ಇವೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯ. 'ಅವರವರ ಮನದಂತೆ ದೃಷ್ಟಿಯೂ ಬೇರೆ' ಅಂತ ಕವಿ ದಿನಕರ ದೇಸಾಯಿಯವರು ಹೇಳಿದ್ದಾರೆ.
ನೀವೇನಂತೀರಾ?

*****

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...