Friday, July 28, 2023

ಸಂತಸ

ಸಿಕ್ಕಾಪಟ್ಟೆ ಕೆಲಸ. TODO ಲಿಸ್ಟ್ ತುಂಬಿ ತುಳುಕಾಡುತ್ತಿದೆ. 
ಆದರೆ ನನಗಂತ ಅದರಲ್ಲಿ ಏನೂ ಇಲ್ಲ, ಅಸಲಿಗೆ. 
ಆಫೀಸಿನ ಜವಾಬ್ದಾರಿಯೇ ಎಲ್ಲಾ... 
ರಿಲೀಸ್, ಪ್ಯಾಚ್, ಡೀಬಗ್ ಕಾಲ್ಸ್, ಪೀರ್ ಸೈಟ್ ಕಾಲ್ಸ್- ಅಯ್ಯೋ, ಆಟೋಮೇಷನ್ ವಿಷ್ಯ ಬರೆದೇ ಇಲ್ಲ!

ವನ್ ಎಟ್ ಎ ಟೈಮ್. ಮುಗಿಸ್ತಾ ಇದ್ದೇನೆ. 
ಅರೆ! ಇಲ್ಲಿ ಸ್ಟಕ್ ಆಗಿದ್ದೇನೆ. ಎಕ್ಸ್ಪರ್ಟ್ ಹತ್ರ ಕೇಳೋಣ... 
"ಏಯ್, ನೀನ್ ಸೊಲ್ಪ ಅನಾಲಿಸಿಸ್ ಮಾಡ್ಕೊಂಡ್ ಬಾರೋ? ಯಾಕೋ ಚಿಕ್ ವಿಷ್ಯಕ್ಕೆ ನನ್ ಹತ್ರ ಬರ್ತೀಯಾ?"
-ಅವನಿಗೆ ಈ ವಿಷ್ಯ ಚಿಕ್ಕದೇ ಆಗಿತ್ತು - ಸೊಲ್ಯೂಷನ್ ಕೊಟ್ಬಿಟ್ಟ ಒಂದು ನಿಮಿಷದಲ್ಲಿ. 

ಆದರೆ, ನನ್ನ ಡಿಪ್ರೆಶನ್ quotient ಜಾಸ್ತಿ ಆಗ್ತಾ ಇದೆ. ನಾನು ಅನಾಲಿಸಿಸ್ ಮಾಡಿಲ್ಲವಾ?
ಇಡೀ ದಿವ್ಸ ಅದರ ಜನ್ಮ ಜಾಲಾಡಿದ್ದೆ. ನಂಗೆ ಜುಟ್ಟು ಸಿಕ್ಕ್ಲಿಲ್ಲ ಅಷ್ಟೇ. 
ಮೋಸ್ಟ್ಲಿ ಇವ ಇಂತಾ ಪ್ರಾಬ್ಲಮ್ ಅನ್ನು ನೂರು ನೋಡಿರಬೇಕು ಕಳ್ಳ. ಅದಕ್ಕೇ ಬೇಗ ಹುಡುಕಿ ಮುಗಿಸಬಿಟ್ಟ. 

A bad day at work.
*****

ಅವನದ್ದೇ ಇನ್ನೊಂದ್ ಪುರಾಣ ಕಾಲ್ ಕೇಳ್ತಾ ಇದ್ದೇನೆ. 
ನನಗೆ ಗೊತ್ತಿರುವ ಟೆಕ್ನಾಲಜಿ. ನನಗೇ ಒಂದು ಗಂಟೆ ಹೇಳಿ ಕೊಡ್ತಾ ಇದ್ದಾನೆ.
ಮೋಸ್ಟ್ಲಿ ಇವ ನಿನ್ನೆ udemy ಅಲ್ಲಿ ಕಲ್ತಿರ್ಬೇಕು. 
ನಂಗೊತ್ತು ಇದು ಅಂತ ಅಂದ್ಬಿಟ್ರೆ ಉರ್ಕೊಂಡ್ ಬಿಡ್ಬೋದು ಇವ. ಇರ್ಲಿ, ಹರಿಕತೆ ಕೇಳೋಣ. 
*****

ರಾತ್ರಿ ಬೇಗ ಊಟ ಮುಗಿಸಿ ಕುಟುಂಬದ ಜೊತೆ ಒಂದು carrom ಮ್ಯಾಚ್ ಆಡಿದೆ. ಮಜಾ ಬಂತು. 
ಮರುದಿವಸ ಅಮೃತ್ ಕೇಳಿದ - "ಶಟಲ್ ಕೋರ್ಟ್ ಬುಕ್ ಮಾಡ್ಲಾ?"
ಯಸ್ ಅಂದು, ನನ್ನ ಆಫೀಸ್ ಕ್ಯಾಲೆಂಡರ್ ಅಲ್ಲೂ ಬ್ಯುಸಿ ಅಂತ ಹಾಕ್ದೆ. 
ಆಟ ಮುಗಿಸಿ ಮತ್ತೆ ಕೆಲಸಕ್ಕೆ ಬಂದೆ- ಕಸ್ಟಮರ್ ಫೇಸಿಂಗ್ ಟೀಮ್ ಜೊತೆ ಕಾಲ್ - ಸಕ್ಸಸ್ ಆಯಿತು. 
ಸೆರೋಟಿನಿನ್ ಹೈ ಇದ್ರೆ ಮುಟ್ಟಿದ ಕೆಲಸ ಸಕ್ಸಸ್ಸೇ ಅಂತ ನನ್ನ ಡಾಕ್ಟ್ರು ಹೇಳಿದ್ದು ನೆನಪಾಯ್ತು
*****

ಈಗ ನನ್ ಮಗು ಜೊತೆ ಆಡೋದಕ್ಕೂ ಟೈಮ್ ಕಾಯ್ದು ಇರಿಸಿದ್ದೇನೆ. 
ಆಫೀಸ್ ಕೆಲಸ TODO ಲಿಸ್ಟ್ ಮಾತ್ರ ಅಲ್ಲ, ನನಗೆ ಸಂತಸ ಕೊಡೋ ಕೆಲಸನೂ ಆ ಲಿಸ್ಟ್ ಅಲ್ಲಿ ಸೇರಿಕೊಂಡಿವೆ. 
ಹಾಂ, ಆಫೀಸ್ ಕೆಲ್ಸನೂ ಸಂತಾಸ ಕೊಡ್ತಾ ಇದೆ. 
ಆವ ಮಾತ್ರ ಓವರ್ಟೈಮ್ ಮಾಡ್ತಾ ಇದ್ದಾನೆ. ಇರ್ಲಿ. 
*****

ಈ ವರ್ಷ ರಿಸೆಶನ್ ಅಂತೆ. ಕಸ್ಟಮರ್ ಎಂಗೇಜ್ಮೆಂಟ್ಸ್ ಕಮ್ಮಿ. ಸೋ ಬಜೆಟ್ ಕಮ್ಮಿ ಅಂತೆ . 
ಓವರ್ಟೈಮ್ ಅಸಾಮಿಗೆ ಟೆನ್ಶನ್. 
ನನ್ನ TODO ಲಿಸ್ಟ್ ಅಂತೂ ಚೇಂಜ್ ಆಗಿಲ್ಲಪ್ಪ!



Tuesday, March 22, 2022

ಕನಸಿನ ಕೃಷಿ



ನಿನ್ನೆ ನೆಟ್ಟ ಕನಸುಗಳು 
ಇಂದು ನೀರನ್ನು ಅರಸುತ್ತಿವೆ,
ಮನವೆಂಬ ಬಾವಿ ಆರಿದೆ. 
ದಿನ ನೂಕುತ್ತಿವೆ ಮಳೆಯ ನಿರೀಕ್ಷೆಯಲ್ಲಿ. 

ಮಳೆಗಾಲ ಬರುತಲಿದೆ. 
ನೆಟ್ಟ ಗಿಡಗಳು ಬಾಡಲು,
ಬರಿಯ ಸಿಡಿಲ ಸದ್ದಷ್ಟೇ ಕೇಳಲು,
ಕನಸು ಕೇಳುತಿದೆ ಮನವ-
ನೀರಿಲ್ಲದೂರಲ್ಲಿ ನನ್ನ ನೆಟ್ಟದ್ದು ಏಕೆ?

ಅದಕೆ ಉತ್ತರವಿಲ್ಲ 
ಮನದ ನೀರವ ಮೌನ 
ಕನಸು ಮುದುಡಲು,
ಮನವು ಆಗಸವನ್ನೇ ನೋಡುತಿದೆ. 
ಇಲ್ಲ, ಇನ್ನೂ ಬರೀ ಸಿಡಿಲು
ಎಲ್ಲೋ ಚಂಡಮಾರುತವಂತೆ... 
*******

ಅದೋ! ಬಂದಿದೆ ಧೋ-ಧೋ ಮಳೆ! 
ಕನಸುಗಳಿಗೆ ಚಿಗುರು ಬಂದಿದೆ!
ಬರಿದಾದ ಬಾವಿ ತುಳುಕಿದೆ!
ನೆಟ್ಟದ್ದು ಕೆಡದು ಮನದ ಬಾವಿ ತುಂಬಿರೆ. 

ಹೂವಾಗಿ ಹಣ್ಣಾಗಿ 
ನೆರಳಾಗಿ ತಂಪಾಗಿ 
ಕನಸ ಬೇರದು ಇನ್ನಷ್ಟು ಕಡೆ ಟಿಸಿದು 
ಹಲವು ಮರಿಗನಸುಗಳು ಹುಟ್ಟಿವೆ ಮಳೆಗೆ. 
*****
  
ಕನಸು ಕೃಷಿ ಕ್ಷೇತ್ರದಲಿ 
ತಾಳ್ವಿಕೆಯ ಬಲ ಬೇಕು 
ನನಸೆಂಬ ಫಸಲು ಮುದ್ದಾಗಿ ಬರಲು 
ಮನದಾಳದ ಮಣ್ಣು ಸ್ಥಿರವಾಗಿ ದೃಢವಾಗಿ 
ಆಗಸವ ದಿಟ್ಟಿಸಲು, ಕನಸ ಸಂತೈಸಲು,
ಕನಸಿಗೆಲ್ಲಿಯ ಚಿಂತೆ ಬೇಸಿಗೆಯ ಧಗೆಗೆ!


Friday, November 19, 2021

Work from home- ಮನೆಯಿಂದ ಕೆಲಸ


ಬೆಳಗ್ಗೆ ಒಂಭತ್ತೂವರೆಗೆ ಮೀಟಿಂಗು. ರಾತ್ರಿ ಒಂಭತ್ತೂವರೆಗೂ.  
ಮಧ್ಯಾಹ್ನ ರಾತ್ರಿ ಊಟಕ್ಕೆ ಬ್ರೇಕು. ಟೀ ಕಾಫಿ home-officeಗೇ ಸಪ್ಪ್ಲೈ ಅಮ್ಮನಿಂದ.  
"ನಾಳೆಯಿಂದ ಬೇಗ ಲಾಗ್ಔಟ್ ಮಾಡ್ಬೇಕು. ಸಂಜೆ ಒಂದು ವಾಕ್ ಮಾಡ್ಬೇಕು" -ನನ್ನ ಸ್ವಗತ 

ಸರಿ, ಮಲಗುವ ಈಗ.
ಅರೆ! ಪುಟ್ಟ ಮಗಳು ಎಲ್ಲಿ? ಹಳೇ ಹೆಡ್ ಫೋನ್ ಹಾಕ್ಕೊಂಡು ಮೀಟಿಂಗ್ ಆಟ ಅಂತೆ!
"ಮೀಟಿಂಗ್ ಮುಗಿಸಿಯೇ ಚಾಚಿ ಮಾಡೋದು" - ಮಗಳ ಹಠ; ನಿದ್ದೆ ಕಣ್ಣಿನಲ್ಲಿ 
ಸ್ವಲ್ಪ ಸಾಕಾಯ್ತು; ಅವಳ ಹಠ ಬಿಡಿಸಿ ಮಲಗಿಸಿ, ನಾನೂ ನಿದ್ರಾ ಪರವಶನಾಗಲು

******* 

ಇವತ್ತು ಕೆಲಸ ಸ್ವಲ್ಪ ಕಮ್ಮಿ ಇದೆ. ಒಂದು blocker issueಗೆ ಫಿಕ್ಸ್ ಬರುವ ತನಕ ಏನೂ ಮಾಡಕ್ಕಾಗಲ್ಲ. ಹೇಳ್ತಾ ಇದ್ದೆ breakfast ಹೊತ್ತಲ್ಲಿ.
"ಬ್ಯಾಂಕ್ ಗೆ ಹೋಗಿ ಸ್ವಲ್ಪ ಕ್ಯಾಷ್ ತೊಗೊಂಡು ಬಾ; ಖರ್ಚಿಗೆ ಬೇಕು. ಹಾಗೆಯೇ ನ್ಯೂಸ್ ಪೇಪರೂ ಕೂಡ " - ಅಮ್ಮನ ಆರ್ಡರ್.
ಹೊರಟೆ. ಅಂಗಡಿಯಲ್ಲಿ ಹಲವಾರು ಜನ. ಎಲ್ಲಾ ಪರಿಚಯದವರೇ ಇಲ್ಲಿ ಹಳ್ಳಿಯಲ್ಲಿ.

ದಾದ ಬಟ್ರೆ, ಬೇಲೆ ಇಜ್ಜಾ? 
ಬೇಲೆದ ನಡುಟು ಇಂಚಿ ಬರ್ರಗ್ ಅಪುಂಡಾ?
ಕೋವಿಡ್ ಬತ್ತುಂಡಲ ಈರೆಗ್ ಸಂಬಲ ಬರ್ಪು೦ಡತ್ತಾ!
ನನ ಮೂಲೆನ ?

"Blocker issue is fixed; can you confirm  if it works now?" ವಾಟ್ಸಾಪ್ ನಲ್ಲಿ ಮೆಸ್ಸೇಜ್ ಬಂತು. ಕಿಕ್ ಸ್ಟಾರ್ಟ್ ಮಾಡಿ ವಾಪಸ್ ಮನೆಗೆ ಬಂದೆ. 
"ಅಂಗಡಿಯಲ್ಲಿ ತುಂಬಾ ರಶ್ಶ್ ಇತ್ತಾ? ಅಥವಾ ಬ್ಯಾಂಕ್ ಸರ್ವರ್ ಡೌನಾ?" ಅಮ್ಮನ ಪ್ರಶ್ನೆ.  
ಸಂಜೆ ಆಯಿತು, ಅರೆ! ಸಂಜೆ ಅಲ್ಲ, ರಾತ್ರಿ ಹತ್ತು! ಯಾರಿಗ್ಗೊತ್ತು! ನಾಳೆಯಾದರೂ ವಾಕ್ ಮಾಡಬೇಕು.
******


ವಾಪಾಸ್ ಬರ್ತೀರಾ? -ಅಂತ ಆಫೀಸ್ನಲ್ಲಿ ಸರ್ವೇ ಶುರು ಆಗಿದೆ. 
ತ್ರಿಶಂಕು ಸ್ಥಿತಿ. ಏನು ಹೇಳಲಿ! "ಒಮ್ಮೊಮ್ಮೆ ಬರುವೆ" ಅಂತ ಅಂದೆ. 
'ಆಫೀಸಿಗೆ ಹೋದರೆ ಸ್ವಲ್ಪ ಹೊಟ್ಟೆ ಕರಗಬಹುದು, ಕೂತು ತಿಂದು ಸಜ್ಜಾಗಿದ್ದೇನೆ' ಬೊಜ್ಜು ತುಂಬಿದ ಗೆಳೆಯನೂ ಅಂದ. 


ಟೀವಿ ಆನ್ ಮಾಡಿದೆ. 
ಪರ್ಮನೆಂಟ್ ಮನೆಯಿಂದಲೇ ಕೆಲಸ ಅಂದ ಕಂಪೆನಿಗಳೆಲ್ಲ ವಾಪಾಸ್ ಕರೀತಾ ಇವೆ. 
ವರ್ಕ್ ಫ್ರಮ್ ಹೋಮ್ - ಯಾರಿಗೆ ಲಾಭ ಯಾರಿಗೆ ನಷ್ಟ?
ನ್ಯೂಸ್ ಚಾನೆಲ್ ಅನಾಲಿಸ್ ನಡೀತಾ ಇತ್ತು. ಇವರಿಗಂತೂ ಲಾಭ ಅಂದ್ಕೊಂಡೆ. 
ಇರಲಿ.  ಸಾಕಾಗಿದೆ. ಒಮ್ಮೆ ಆಫೀಸ್ ಹೋಗಬೇಕು. 

****

Covid pandemic gave most of the software engineers an opportubity to stay together with the family (of all the various categories, IT job has/had longest WFH in this situation). A person like me would have never imagined staying inside  the house- 14 years after staying away from parents. 

Write up is purely for fun. Stay safe.

Wednesday, January 20, 2021

ಪ್ರತೀಕ್ಷೆ


ಮೇಘಗಳ ನಾದವಂ ಕೇಳಿ ಗರಿಬಿಚ್ಚಿ 
ನವಿಲಿಂದಿಂದು ಮನದುಂಬಿ  ಕುಣಿಯುತಿಹುದು 
ಮಿನುಗು ತಾರೆಯ ನಡುವೆ ನಗುವ ಚಂದ್ರನ ತೆರದಿ 
ಎನ್ನ ಮನವಿಂದಿಂದು ನಲಿಯುತಿಹುದು 

ಅಂದು ಆ ಮಂದಹಾಸದಿ ಸ್ವಾಗತಿಸಿ ಕರೆದ 
ಇಂದುವದನೆಯು ಮನವ ಕರಗಿಸಿದಳು 
ಕರಗಿ ನೀರಾದೆನ್ನ ಮನ ಶರಧಿಯಲಿ ಹಾಯಿ 
ಯನು ನಡೆಸಿ ತೀರವನು ಸೇರಿಸಿದಳು 

ಎನ್ನ ಮನಃ ಪಟಲದೊಳು ನೆಲೆಗೊಂಡ ನೆನಪುಗಳು 
ಕನಸಾಗಿ ಆಕೆಯನು ನೆನೆಯುತಿಹವು 
ಕನಸು ಒಂದೊಂದಾಗಿ ಗರಿಬಿಚ್ಚಿ ಹಾರುತಲಿ 
ಬಾಳ ಬಾನನ್ನು ಅತಿಕ್ರಮಿಸುತಿಹವು 

ಮೌನದಲ್ಲಭ್ಯಂಗ ಮಾಡಿದಂತಹ ಬೆಡಗಿ 
ಬರುವಿಕೆಗೆ ಪ್ರತಿಸಂಧ್ಯೆ ಕಾಯುತಿಹುದು 
ಬಾಳ ಅಗ್ಗಡಲಿನೊಳು ಕ್ರಮಿಸಲಿಹ ದೂರಕಿ 
ನ್ನಿವಳ ಸಾಮೀಪ್ಯವದು ದೊರಕಲಿಹುದು 

Friday, December 28, 2018

ಬೇಕಾಗಿದೆ ಮರುಜೀವ!




ಆ ಹೂವಲ್ಲಿ ಕಂಪಿಲ್ಲ. 
ಅದು ಟೀವಿಯ ಪಕ್ಕದ ಮೂಲೆಯಲಿ ಮುದುಡಿದೆ. 
ಅದರ ಪಕ್ಕದಲಿ ಮಿಣುಕುತ್ತಿರುವ ವೈಫೈ ರೌಟರ್ ನಲ್ಲಿ 
ಜೀವನೋತ್ಸಾಹ ಹೊಳೆಯುತ್ತಿದೆ. 
ನನಗದು ಬಹಳಷ್ಟು ಅಂಟಿಕೊಂಡು ಬಿಟ್ಟಿದೆ-
ಮುಖ್ಯವಾಗಿ, ನನ್ನ ಗಣಕ ಯಂತ್ರಕ್ಕೆ. 

ಅದರಿಂದ ಪ್ರೇರಿತಗೊಂಡಿದ್ದೇನೆ; ಅದನ್ನು ನಂಬಿದ್ದೇನೆ
ನಂಬಿ ಕೆಲಸ ಮಾಡುತ್ತಿದ್ದೇನೆ- ಮನೆಯಿಂದ. 
ಪಕ್ಕದ ಹೂದಾನಿಯಲ್ಲಿ ಸಿಲುಕಿರುವ
ಆ ಹೂವಲ್ಲಿ ಕಂಪಿಲ್ಲ. 

Tuesday, September 12, 2017

ಬೆಂಗಳೂರು

ಬೆಂಗಳೂರು!

ಆಫೀಸು ಎಂದರೆ ನೆನಪಾಗುವ ಟ್ರಾಫಿಕ್ಕು ಜಾಮುಗಳು, ಡೆಡ್ ಲೈನುಗಳು. 
ಗಣೇಶೋತ್ಸವ ಎಂದರೆ ನೆನಪಾಗುವ ಹರಕು ಮೈಕುಗಳು, ಹೆಸರೇ ಇಲ್ಲದ ಚಂದಾ ಕಲೆಕ್ಷನ್ ರಶೀದಿಗಳು. 
ರಾತ್ರಿ ಹತ್ತರ ಸಣ್ಣ walkಗೆ ಉಪದ್ರ ಕೊಡುವ ಬೀದಿ ನಾಯಿಗಳು. 
ತನ್ನಿಂತಾನೇ connect ಆಗುವ ಮನೆ-ಆಫೀಸು ವೈಫೈಗಳು. 
ಶನಿವಾರ ಆದಿತ್ಯವಾರಗಳನ್ನು ಚಿಕ್ಕದಾಗಿಸುವ ವೀಕೆಂಡ್ ಎಂಬ ಹೆಸರು. 

Sunday, April 9, 2017

ನನ್ನ ನೆಚ್ಚಿನ ಪುಷ್ಪಾವತಿ ಮೇಡಂಗೊಂದು ಅಕ್ಷರ ನಮನ

"ಏನು ಮಧುಸೂದನ, ಪಾಠ ಮಾಡಿದ್ದು ಅರ್ಥ ಆಯಿತೋ ಇಲ್ಲ್ವೋ ?"- ಅಂತ ನನ್ನ ನೆಚ್ಚಿನ ವಿಜ್ಞಾನ ಶಿಕ್ಷಕಿ ಪುಷ್ಪಾವತಿ ಮೇಡಂ ಹೇಳಿದ್ದು ಇನ್ನೂ ನನ್ನ ಕಿವಿಗೆ ಕೇಳುತ್ತಾ ಇದೆ. ಮೊನ್ನೆ ನಾನು ಆಫೀಸಿನಲ್ಲಿ ಇದ್ದಾಗ ನನ್ನ ಅಮ್ಮ ಫೋನ್ ಕರೆಮಾಡಿ 'ಪುಷ್ಪಾವತಿ ಮೇಡಂ ಇನ್ನಿಲ್ಲ' ಅಂದಾಗ ನನಗೆ ನಂಬಲಾಗಲಿಲ್ಲ. ಗದ್ಗದಿತನಾದೆ. ಪಕ್ಕದಲ್ಲೇ ಇದ್ದ ಮೀಟಿಂಗ್ ರೂಮಿಗೆ ಹೊಕ್ಕು ಬಾಗಿಲು ಹಾಕಿಕೊಂಡು, ಒತ್ತಿ ಬರುತ್ತಿದ್ದ ಅಳುವನ್ನು ತಡೆಯಲು ಯತ್ನಿಸಿದೆ. 'ಇಲ್ಲ, ಸಾಧ್ಯವೇ ಇಲ್ಲ; ನನ್ನ ಅತ್ಯಂತ ನೆಚ್ಚಿನ ಮೇಡಂ ಇನ್ನೂ ಇದ್ದಾರೆ'- ಅನ್ನುತ್ತಿತ್ತು ನನ್ನ ಮನಸ್ಸು.
******
ಪುಷ್ಪಾವತಿ ಮೇಡಂ. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೇವರಿಟ್ ಟೀಚರ್. ನಾನು ಓದುತ್ತಿದ್ದ ಸಮಯದಲ್ಲಿ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಪಾಠ ಮಾಡುತ್ತಿದ್ದವರಲ್ಲಿ ಒಬ್ಬರು.  ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡವರು. ಯೋಚನಾ ಸ್ಪಷ್ಟತೆ, ಅದ್ಭುತ ವಾಕ್ಪಟುತ್ವ, ಭಾಷಾ ಪ್ರೌಢಿಮೆ, ವಿಜ್ಞಾನದ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸುವ ಪರಿ, ಅಚಲ ಆತ್ಮ ವಿಶ್ವಾಸ, ಮುಖದಲ್ಲಿ ಸದಾ ಮುಗುಳ್ನಗೆ, ಕೈಯಲ್ಲೊಂದು ಚಾಕ್ ಪೀಸ್, ಕತ್ತೆತ್ತಿ ಕೊನೆಯ ಬೆಂಚಿನವರನ್ನು ಸೂಕ್ಷ್ಮವಾಗಿ ಗಮನಿಸುವ ಪರಿ, ಗಂಧಕ-ರಂಜಕಗಳ ಸಮೀಕರಣವನ್ನು ಮನರಂಜಕವಾಗಿ ಪೂರ್ಣಗೊಳಿಸುವ ನೈಪುಣ್ಯ,... ಅಬ್ಬಾ, ಪುಷ್ಪಾವತಿ ಮೇಡಂಗೆ ಪುಷ್ಪಾವತಿ ಮೇಡಂ ಮಾತ್ರ ಸಾಟಿ. ಮೇಡಂ ಪಾಠ ಅರ್ಥ ಆಗ್ತಾ ಇಲ್ಲ ಎಂದು ಇಲ್ಲಿಯವರೆಗೆ ಅಂದವರೇ ಇಲ್ಲವೇನೋ.
ಹೈಸ್ಕೂಲ್ ಸೇರುವ ಹೊತ್ತಿಗೆ, 'ಮುಂದೆ ಪಿ ಯು ಕಾಲೇಜಿನಲ್ಲಿ ಕಲಾ ವಿಭಾಗ ತೆಗೆದುಕೊಂಡು ಸಾಹಿತ್ಯ ಸಂಶೋಧನೆ ಮಾಡಬೇಕು' ಎಂದುಕೊಂಡಿದ್ದ ನಾನು ಮುಂದೆ ವಿಜ್ಞಾನ ವಿದ್ಯಾರ್ಥಿಯಾಗುವಂತೆ ಮಾಡಿ, ನನ್ನ ಮುಂದಿನ ಜೀವನದ ಯಶಸ್ಸಿಗೆ ಮುಖ್ಯ ಕಾರಣ ಪುಷ್ಪವತಿ ಮೇಡಂ.
*****






*****
ನಾನು ಎಂಟನೇ ತರಗತಿಯಲ್ಲಿರುವಾಗ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆ. ಪುಷ್ಪಾವತಿ ಮೇಡಂ ತಯಾರಿ ಮಾಡಿದ ಪೇಪರ್  'ಜೈವಿಕ ತಂತ್ರಜ್ಞಾನ'ದ ಮೇಲಿತ್ತು. (ಅಲ್ಲಿಯವರೆಗೆ ಬರೀ ಭಾಷಣ ಮಾತ್ರ ಮಾಡುತ್ತಿದ್ದೆ). ಗೋಷ್ಠಿಯಲ್ಲಿ ನನ್ನ 'paper presentation' ಮುಗಿದು ಕೊನೆಗೆ ತೀರ್ಪುಗಾರರು viva ಪ್ರಶ್ನೆಗಳನ್ನು ಕೇಳಿದಾಗ ಪೆಚ್ಚಾಗಿ ಪುಷ್ಪಾವತಿ ಮೇಡಂ ಮುಖವನ್ನು ನೋಡುತ್ತಿದ್ದೆ. ನನ್ನ ಕೆಟ್ಟ ಪ್ರದರ್ಶನದಿಂದ ಬೇಸರಗೊಂಡಿದ್ದರು ಮೇಡಂ. ಮಂಗಳೂರಿನಿಂದ ಉಪ್ಪಿನಂಗಡಿವರೆಗಿನ ಬಸ್ಸು ಪ್ರಯಾಣದಲ್ಲಿ ಪೂರ್ತಿ ಕ್ಲಾಸ್ ತೆಗೆದುಕೊಂಡಿದ್ದರು. ಮುಂದಿನ ವರುಷದ ವಿಚಾರ ಸಂಕಿರಣದಲ್ಲಿ ನನ್ನ ವಿಚಾರ ಮಂಡನೆಯನ್ನು ಕಂಡು ತುಂಬಾ ಖುಷಿ ಪಟ್ಟಿದ್ದರು. ಪಾಠದ ಜೊತೆಗೆ ವಿಜ್ಞಾನ - ಸಾಹಿತ್ಯಕ ಚಟುವಟಿಕೆಗಳಿಗೂ ಸದಾ ಪ್ರೋತ್ಸಾಹಿಸುತ್ತಿದ್ದರು ಪುಷ್ಪಾವತಿ ಮೇಡಂ. ಅಂತರ್-ಶಾಲಾ ಸ್ಪರ್ಧಾ ಚಟುವಟಿಗೆಗಳು, ವಿಜ್ಞಾನ ಪ್ರಯೋಗ - ಪ್ರದರ್ಶನಗಳು ಪುತ್ತೂರಿನಲ್ಲಿ ನಡೆಯುತ್ತಿದ್ದಾಗ ನಾನೂ ಕೆಲವು ಬಾರಿ ಅವರ ಮನೆಯಲ್ಲಿ ಚಹಾ ತಿಂಡಿ ಮಾಡಿ 'rehearsal' ಮಾಡಿದ್ದೂ ಇದೆ.
*****
ಪುಷ್ಪಾವತಿ ಮೇಡಂ ಪಾಠದ ಹಲವು ಸಾಲುಗಳು ನನ್ನ ಮನದಲ್ಲಿ ಇಂದಿಗೂ ಅಚ್ಚಾಗಿವೆ. ವಿಜ್ಞಾನದ ಸಾಲುಗಳನ್ನು ಮನದಲ್ಲಿ ಎಂದಿಗೂ ಅಳಿಯದಂತೆ ಅಚ್ಚು ಹಾಕುವುದು ಸುಲಭದ ಮಾತಲ್ಲ. 'ರಾಸಾಯನಿಕ ಕ್ರಿಯಾವರ್ಧಕಗಳು' (catalysts) ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸುತ್ತಾ, "ನಾವು ಶಿಕ್ಷಕರಾಗಿ ನಿಮ್ಮ ವಿದ್ಯಾರ್ಜನೆಯ ವೇಗವನ್ನು ಹೆಚ್ಚಿಸಬಹುದಷ್ಟೇ. ಪರೀಕ್ಷೆ ಬರೆಯುವುದು ನಿಮ್ಮ ಸ್ವಂತ ಬುದ್ಧಿವಂತಿಕೆಯಲ್ಲಿ. ನಾವು ಕ್ರಿಯಾವರ್ಧಕಗಳು; ಅಷ್ಟೇ" ಅಂದಿದ್ದರು. ಜೀವಶಾಸ್ತ್ರ , ರಸಾಯನ ಶಾಸ್ತ್ರಗಳ ಮೂಲ ಅಂಶಗಳನ್ನು, ಹಲವು 'definition'ಗಳ ವಿಶೇಷತೆಯನ್ನು ಒಗಟುಗಳ ಮೂಲಕ ವಿವರಿಸುತ್ತಿದ್ದರು.
ನಾನು ತೀರಾ ಇತ್ತೀಚಿಗೆ ನನ್ನ ಶಾಲೆಗೆ ಭೇಟಿ ಕೊಟ್ಟಿದ್ದೆ. ಬೆಂಗಳೂರಿನಲ್ಲಿ ನಾನು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಉತ್ಸಾಹದಿಂದ ಮೇಡಂ ಜೊತೆಗೆ ಮಾತನಾಡಿದ್ದೆ. ಐಟಿ ಕ್ಷೇತ್ರದ ಬೆಳವಣಿಗೆಗಳನ್ನು ವಿವರಿಸುತ್ತಿದ್ದೆ, ನನಗೆ ತಿಳಿದ ಮಟ್ಟಿಗೆ. ಆ ದಿನ ಸಂಜೆ ವೇಳೆಗೆ ಪುಷ್ಪಾವತಿ ಮೇಡಂರ ದೂರವಾಣಿ ಕರೆ ನನಗೆ ಬಂದಿತ್ತು. "ಮಧುಸೂದನ, ಆ Network Elements ಅಂದ್ಯಲ್ಲ, ಅದನ್ನು ಹೇಗೆ ಮ್ಯಾನೇಜ್ ಮಾಡ್ತೀರಿ? ಸ್ವಲ್ಪ ಹೇಳ್ತೀಯ?" ಎಂದು ಕೇಳಿದ್ದರು. ಮೇಡಂ ಅಂದರೆ ಹಾಗೆ. 'ಕಲಿಯುವುದು ಎಲ್ಲರಿಂದಲೂ ಇದೆ' ಎಂದಿದ್ದರು.
*****

ನನ್ನ ನೆಚ್ಚಿನ ಪುಷ್ಪಾವತಿ ಮೇಡಂ,

ಹತ್ತನೇ ತರಗತಿಯಲ್ಲಿ ಪಾಠ ಮಾಡುತ್ತಾ ಒಂದು ಸಾರಿ ನೀವು "ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಅಮೆರಿಕನ್ನರಿಗಿಂತ ಇಪ್ಪತ್ತೈದು ವರುಷ ಹಿಂದೆ ಇದ್ದೇವೆ" ಅಂದಿದ್ದಿರಿ. ಮೊನ್ನೆ ಮಾತನಾಡಿದಾಗ 'ನಾವು ಕಲಿಯುವುದು ಬಹಳಷ್ಟಿದೆ' ಅಂದಿದ್ದಿರಿ. ನಿಮ್ಮಿಂದ ಕಲಿತುಕೊಳ್ಳುವುದು ಬಹಳಷ್ಟಿತ್ತು.
ಸದಾ ನಗುಮೊಗದಿಂದ ಸಮೀಕರಿಸುತ್ತಿದ್ದ ನಿಮ್ಮ ಸಮೀಕರಣಗಳು ಅರ್ಧದಲ್ಲಿ ಉಳಿದಿವೆ. ಹಲವು ಒಗಟುಗಳು ಉತ್ತರವಿಲ್ಲದೆ ಉಳಿದಿವೆ. ಡಾರ್ವಿನ್ನನ ಸಿದ್ಧಾಂತಗಳ ಬಗೆಗಿನ ನಿಮ್ಮ ಅದ್ಭುತ ಕತೆಗಳನ್ನು ಇನ್ನೂ ಕೇಳಬೇಕೆನಿಸಿದೆ.
ನೀವ್ಯಾಕೆ ಮೇಡಂ ಇಷ್ಟು ಬೇಗ ಪಾಠ ನಿಲ್ಲಿಸಿದಿರಿ?
****

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...